ಉಡುಪಿ, ಫೆ.21: ಮಣಿಪಾಲ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯಚರಿಸುವ ರೆಡಿಮಿಕ್ಸ್ ಕಾಂಕ್ರೀಟ್ ಘಟಕಗಳ ಬಗ್ಗೆ ಸಣ್ಣ ಕೈಗಾರಿಕೆಗಳ ಸಂಘ ಹಾಗೂ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ ಉಡುಪಿ ನಗರಸಭೆ ಕಚೇರಿಯಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ರೆಡಿಮಿಕ್ಸ್ ಘಟಕಗಳ ಅಧಿಕಾರಿಗಳ ಸಭೆ ನಡೆಸಿ ನಗರಸಭೆಯ ನಿಯಮಾವಳಿಗಳಿಗೆ ಬದ್ಧವಾಗಿ ಕಾರ್ಯಾಚರಿಸುವಂತೆ ಸೂಚನೆ ನೀಡಿದರು.
ಘಟಕಗಳಲ್ಲಿ ಸಿಮೆಂಟ್ ಧೂಳು, ತ್ಯಾಜ್ಯ ನೀರು ಸಮರ್ಪಕ ವಿಲೇವಾರಿ ಮಾಡದೆ ಪರಿಸರ ಮಾಲಿನ್ಯ ಹಾಗೂ ನಿಯಮ ಮೀರಿ ವಾಹನದಲ್ಲಿ ಹೆಚ್ಚಿನ ಪ್ರಮಾಣದ ಕಾಂಕ್ರೀಟ್ ಸಾಗಣೆ ಮಾಡಿ ರಸ್ತೆಯಲ್ಲಿ ಚೆಲ್ಲುವ ಪರಿಣಾಮ ರಸ್ತೆ ಸುರಕ್ಷತೆಗೆ ಸಮಸ್ಯೆ ಉಂಟಾಗುತ್ತಿದ್ದು ಹಲವಾರು ಅಪಘಾತಗಳು ನಡೆದಿದೆ, ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಓವರ್ ಲೋಡ್ ಕಾಂಕ್ರೀಟ್ ವಾಹನದ ಸಂಚಾರದಿಂದ ರಸ್ತೆಗಳು ಹದಗೆಟ್ಟಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದು ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು ತಪ್ಪಿದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಉಡುಪಿ ನಗರಸಭೆ ಅಧ್ಯಕ್ಷರಾದ ಪ್ರಭಾಕರ ಪೂಜಾರಿ, ಉಪಾಧ್ಯಕ್ಷರಾದ ರಜನಿ ಹೆಬ್ಬಾರ್, ನಗರಸಭಾ ಸದಸ್ಯರಾದ ಕಲ್ಪನಾ ಸುಧಾಮ, ಉಡುಪಿ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷರಾದ ಹರೀಶ್ ಕುಂದರ್, ನಗರಸಭೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ದುರ್ಗಾಪ್ರಸಾದ್ ಹಾಗೂ ವಿವಿಧ ರೆಡಿಮಿಕ್ಸ್ ಘಟಕಗಳ ಅಧಿಕಾರಿಗಳು ಉಪಸ್ಥಿತರಿದ್ದರು.