ನವದೆಹಲಿ, ಫೆ.19: ಭಾರತೀಯ ಜನತಾ ಪಕ್ಷ (ಬಿಜೆಪಿ) ಬುಧವಾರ (ಫೆಬ್ರವರಿ 19) ದೆಹಲಿಯ ಮುಂದಿನ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಅವರನ್ನು ನೇಮಕ ಮಾಡಿದೆ. ಬುಧವಾರ ಸಂಜೆ ಪಕ್ಷದ ದೆಹಲಿ ಕಚೇರಿಯಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯ ನಂತರ ಈ ಘೋಷಣೆ ಮಾಡಲಾಯಿತು. ಶಾಲಿಮಾರ್ ಬಾಗ್ ಕ್ಷೇತ್ರದ ಶಾಸಕಿ ಗುಪ್ತಾ (50) ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಬಂದಾನ ಕುಮಾರಿ ವಿರುದ್ಧ ಗೆಲುವು ಸಾಧಿಸಿದರು. ಪರ್ವೇಶ್ ವರ್ಮಾ ಅವರನ್ನು ದೆಹಲಿಯ ಉಪಮುಖ್ಯಮಂತ್ರಿಯಾಗಿ ನೇಮಿಸಲಾಗುವುದು ಎಂದು ಬಿಜೆಪಿ ತಿಳಿಸಿದೆ.

ಪ್ರಮಾಣವಚನ ಸಮಾರಂಭಕ್ಕೆ ಭರ್ಜರಿ ತಯಾರಿ: ಫೆಬ್ರವರಿ 20 ರಂದು ಐತಿಹಾಸಿಕ ರಾಮ್ ಲೀಲಾ ಮೈದಾನದಲ್ಲಿ ನಡೆಯಲಿರುವ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರು ಮತ್ತು ಇತರ ಗಣ್ಯರು ಭಾಗವಹಿಸುವ ಭವ್ಯ ಸಮಾರಂಭದಲ್ಲಿ, ಮುಖ್ಯಮಂತ್ರಿ ಮತ್ತು ಇಡೀ ಸಚಿವ ಸಂಪುಟವು ಪ್ರಮಾಣವಚನ ಸ್ವೀಕರಿಸಲಿದೆ ಎಂದು ಪಕ್ಷದ ನಾಯಕರು ದೃಢಪಡಿಸಿದರು. ಈ ಹಿಂದೆ ಸಂಜೆ 4:30 ಕ್ಕೆ ನಿಗದಿಯಾಗಿದ್ದ ಸಮಾರಂಭವು ಈಗ ಮಧ್ಯಾಹ್ನ ಆರಂಭವಾಗಲಿದೆ. ರಾಮ್ ಲೀಲಾ ಮೈದಾನದಲ್ಲಿ ಸಿದ್ಧತೆಗಳನ್ನು ನೋಡಿಕೊಳ್ಳಲು ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ತರುಣ್ ಚುಗ್ ಮತ್ತು ವಿನೋದ್ ತಾವ್ಡೆ ಅವರನ್ನು ನೇಮಿಸಲಾಗಿದೆ.