ಬ್ರಹ್ಮಾವರ, ಫೆ.16: ಉಡುಪಿ ವಿಧಾನಸಭಾ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ವಿಧಾನಸಭಾ ಕ್ಷೇತ್ರವನ್ನಾಗಿ ಮಾಡುವ ಸಂಕಲ್ಪ ಹೊಂದಲಾಗಿದ್ದು, ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹೇಳಿದರು. ಅವರು ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ವತಿಯಿಂದ ನೂತನ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಪದ ಪ್ರಧಾನ ಸಮಾರಂಭದಲ್ಲಿ ಮಾತನಾಡಿದರು. ಅಂತರಾಷ್ಟ್ರೀಯ ಸೇವಾ ಸಂಸ್ಥೆಗಳು ಸಮಾಜದ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡುತ್ತಿರುವುದು ಅಭಿನಂದನೀಯ ಎಂದರು. ಬ್ರಹ್ಮಾವರ ಸಿಟಿ ಸೆಂಟರ್ ನಲ್ಲಿ ಶನಿವಾರ ನಡೆದ ಕಾರ್ಯಕ್ರವನ್ನು ಜಿಲ್ಲಾ ಸರ್ಜನ್ ಡಾ. ಅಶೋಕ್ ಎಚ್ ಉದ್ಘಾಟಿಸಿ ಮಾತನಾಡಿ, ಉಡುಪಿ ಜಿಲ್ಲೆಯು ಮಧುಮೇಹಿಗಳ ಜಿಲ್ಲೆಯಾಗುತ್ತಿದೆ. ವ್ಯಾಯಾಮ ಕೊರತೆ ಮತ್ತು ಅತಿಯಾದ ಜಂಕ್ ಆಹಾರದ ಪರಿಣಾಮ ಮಧುಮೇಹಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಬಗ್ಗೆ ನಾವೆಲ್ಲರೂ ಗಮನ ಹರಿಸಬೇಕು ಎಂದರು.
ಜಯಂಟ್ಸ್ ವೆಲ್ಫೇರ್ ಫೌಂಡೇಶನ್ ಮುಂಬೈ ಕೇಂದ್ರ ಸಮಿತಿ ಸದಸ್ಯರಾದ ದಿನಕರ್ ಕೆ ಅಮೀನ್, ಬ್ರಹ್ಮಾವರ ಘಟಕ ತನ್ನ ಅತ್ಯುತ್ತಮ ಕಾರ್ಯಗಳ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಾರ್ಯಕ್ರಮಗಳು ಈ ಘಟಕದಿಂದ ನೆರವೇರಲಿ ಎಂದು ಶುಭ ಹಾರೈಸಿದರು. ಜಯಂಟ್ಸ್ ಗ್ರೂಪ್ ಫೆಡರೇಶನ್ ಅಧ್ಯಕ್ಷ ತೇಜೇಶ್ವರ್ ರಾವ್, ಜಯಂಟ್ಸ್ ಗ್ರೂಪ್ ಬ್ರಹ್ಮಾವರ ನೂತನ ಅಧ್ಯಕ್ಷರ ಸಾರಥ್ಯದಲ್ಲಿ ಹೊಸ ಹುಮ್ಮಸ್ಸಿನಿಂದ ಇನ್ನು ಹೆಚ್ಚಿನ ಸಾಧನೆ ನಡೆಯಲಿ ಎಂದರು. ಸಾಧಕರಾದ ಹೋಂ ಡಾಕ್ಟರ್ ಫೌಂಡೇಶನ್ ಕೊಳಲಗಿರಿ ಮುಖ್ಯಸ್ಥರಾದ ಡಾ. ಶಶಿಕಿರಣ್ ಶೆಟ್ಟಿ ಮತ್ತು ಬಹುಮುಖ ಪ್ರತಿಭೆ ದೀಕ್ಷಾ ಎಸ್ಎಂ ಅವರನ್ನು ಸನ್ಮಾನಿಸಲಾಯಿತು.
ಸುವರ್ಣ ಎಂಟರ್ ಪ್ರೈಸಸ್ ಬ್ರಹ್ವಾವರ ಕೊಡುಗೆಯಾಗಿ ಸ್ವರ್ಗ ಆಶ್ರಮ ಕೊಳಲಗಿರಿ ಅದೇ ರೀತಿ ಸ್ನೇಹಾಲಯ ಆಶ್ರಮಕ್ಕೆ ದಿನಪಯೋಗಿ ವಸ್ತು ಸೇರಿದಂತೆ ವೈದ್ಯಕೀಯ ಸಲಕರಣೆಗಳನ್ನು ವಿತರಿಸಲಾಯಿತು. ವೈದ್ಯಕೀಯ ಪ್ರತಿನಿಧಿ ಗೀತಾ ಚಿಕಿತ್ಸೆಗಾಗಿ ಹತ್ತು ಸಾವಿರ ರೂ ಸಹಾಯಧನ ಮತ್ತು ಬಡ ಕುಟುಂಬದ ವಿಶೇಷ ಚೇತನ ಬಾಲಕನಿಗೆ ವೀಲ್ ಚೇರ್ ಹಸ್ತಾಂತರಿಸಲಾಯಿತು. ಗ್ರಹಪತ್ರಿಕೆ ಮನಸುಮ ಸಂಚಿಕೆ ಬಿಡುಗಡೆಗೊಳಿಸಲಾಯಿತು. ನೂತನ ಸದಸ್ಯರು ಮತ್ತು ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಲಾಯಿತು ನೂತನ ಅಧ್ಯಕ್ಷ ಅಣ್ಣಯ್ಯ ದಾಸ್ ಅವರು ಅಧಿಕಾರವನ್ನು ನಿರ್ಗಮನ ಅಧ್ಯಕ್ಷ ಸುಂದರ ಪೂಜಾರಿ ಮೂಡು ಕುಕ್ಕುಡೆ ಅವರಿಂದ ವಹಿಸಿಕೊಂಡರು.
ವೇದಿಕೆಯಲ್ಲಿ ಜಯಂಟ್ಸ್ ಗ್ರೂಪ್ ಬ್ರಹ್ಮಾವರ ಸಲಹೆಗಾರ ಮಾಜಿ ಫೆಡರೇಶನ್ ಅಧ್ಯಕ್ಷ ಮಧುಸೂದನ್ ಹೇರೂರು, ಕಾರ್ಯದರ್ಶಿ ಮಿಲ್ಟನ್ ಒಲಿವರ್, ಜಯಂಟ್ಸ್ ಫೆಡರೇಶನ್ ಪದಾಧಿಕಾರಿ ವಿವೇಕಾನಂದ ಕಾಮತ್ ಮುಂತಾದವರು ಉಪಸ್ಥಿತರಿದ್ದರು. ನಿರ್ಗಮನ ಅಧ್ಯಕ್ಷ ಸುಂದರ ಪೂಜಾರಿ ದಂಪತಿಗಳನ್ನು ಗೌರವಿಸಲಾಯಿತು ಪ್ರತಿಭಾ, ರೊನಾಲ್ಡ್ ಡಯಾಸ್, ರತ್ನ, ಪರಿಚಯಿಸಿದರು. ಮಧುಸೂಧನ ಹೇರೂರು ಪ್ರಸ್ತಾವಿಕವಾಗಿ ಮಾತನಾಡಿದರು. ಮಿಲ್ಟನ್ ವಂದಿಸಿದರು. ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು.