ಕಾರ್ಕಡ, ಫೆ.15: ವೃತ್ತಿ ಬದುಕಿನಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಆತ್ಮತೃಪ್ತಿ ಶಿಕ್ಷಕನ ಬದುಕಿನಲ್ಲಿ ಬಹುದೊಡ್ಡ ಸಾಧನೆಯಾಗಿದೆ. ಇದರಿಂದ ಪ್ರಯೋಜನ ಪಡೆದ ವಿದ್ಯಾರ್ಥಿಗಳು ಮತ್ತು ಸಮಾಜ ಆತನನ್ನು ಪೂಜ್ಯ ಭಾವನೆಯಿಂದ ಗೌರವಿಸುತ್ತದೆ. ಇದು ಅತ್ಯಂತ ಪುಣ್ಯವನ್ನು ನೀಡುವ ಕೆಲಸವಾಗಿದ್ದು ನಮ್ಮ ಮಕ್ಕಳ ಬದುಕಿಗೂ ಬೆಳಕಾಗುತ್ತದೆ ಎಂದು ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಶಬಾನ ಅಂಜುಮ್ ಹೇಳಿದರು. ಅವರು ವಯೋನಿವೃತ್ತಿ ಹೊಂದಿದ ಕಾರ್ಕಡ ಹೊಸ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಪ್ರಭಾಕರ ಕಾಮತ್ ಅವರನ್ನು ಶಾಲಾ ಆಡಳಿತ ಮಂಡಳಿಯ ವತಿಯಿಂದ ಅಭಿನಂದಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಬ್ರಹ್ಮಾವರ ಹೋಬಳಿಯ ಶಿಕ್ಷಣ ಸಂಯೋಜಕರಾದ ಪ್ರಕಾಶ್ ಬಿ.ಬಿ ಅವರು ಪ್ರಭಾಕರ ಕಾಮತರು ತಮ್ಮ ಅಧಿಕಾರಾವಧಿಯಲ್ಲಿ ಶಾಲೆಗೆ ಸಲ್ಲಿಸಿದ ಸೇವೆ ಹಾಗೂ ಇಲಾಖೆಯ ಕಾರ್ಯಕ್ರಮಗಳಿಗೆ ನೀಡಿದ ಸಹಕಾರವನ್ನು ಸ್ಮರಿಸಿ ನಿವೃತ್ತಿ ಜೀವನ ಸಂತೋಷಕರವಾಗಿರಲಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಆಡಳಿತ ಮಂಡಳಿಯ ಅಧ್ಯಕ್ಷರಾದ ವಿಶ್ವೇಶ್ವರ ಹೊಳ್ಳ, ಶಾಲೆಯ ವಿದ್ಯಾರ್ಥಿಯಾಗಿ ಅಧ್ಯಾಪಕರಾಗಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ಇದೀಗ ಸಂಚಾಲಕರಾಗಿ ಸೇವೆ ಸಲ್ಲಿಸಲಿರುವ ನಿವೃತ್ತರನ್ನು ಗೌರವಿಸಿ, ಮುಂದಿನ ದಿನಗಳಲ್ಲಿಯೂ ಶಾಲೆಗಾಗಿ ತಮ್ಮ ಸೇವೆಯನ್ನು ಮೀಸಲಿಡಬೇಕೆಂದರು. ಕ್ಷೇತ್ರ ಸಂಪನ್ಮೂಲ ಅಧಿಕಾರಿ ಸವಿತಾ, ವಿದ್ಯಾರಥ ಸಮಿತಿಯ ಅಧ್ಯಕ್ಷರಾದ ವಿಶ್ವನಾಥ ಹೊಳ್ಳ, ಗೆಳೆಯರ ಬಳಗದ ಅಧ್ಯಕ್ಷ ತಾರಾನಾಥ ಹೊಳ್ಳ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶಂಭು ಭಟ್, ಹಿಂದಿನ ಅಧ್ಯಾಪಕರಾದ ರತ್ನಾಕರ ಶೆಟ್ಟಿ ಮತ್ತು ಅಧ್ಯಾಪಕಿ ಗೀತಾ ಮತ್ತು ಐಶ್ವರ್ಯ ನೆನಪುಗಳನ್ನು ತೆರೆದಿಟ್ಟು ಶುಭ ಕೋರಿದರು. ಶಾಲಾಭಿವೃದ್ಧಿ ಸಮಿತಿ ಮತ್ತು ಅಧ್ಯಾಪಕರ ವತಿಯಿಂದ ನಿವೃತ್ತರನ್ನು ಗೌರವಿಸಲಾಯಿತು. ಸಾಲಿಗ್ರಾಮ ಪಟ್ಟಣ ಪಂಚಾಯತಿ ಉಪಾಧ್ಯಕ್ಷೆ ಗಿರಿಜಾ ಶೇಖರ ಪೂಜಾರಿ, ಸದಸ್ಯರಾದ ಸಂಜೀವ ದೇವಾಡಿಗ ಅಚ್ಚುತ ಪೂಜಾರಿ, ಕೆಪಿ ಶೇಖರ್ ಮೊದಲಾದವರು ಉಪಸ್ಥಿತರಿದ್ದರು. ಅಧ್ಯಾಪಕರಾದ ಸುಧೀರ್ ಕಾಮತ್ ನಿರೂಪಿಸಿ, ಗೀತಾ ವಂದಿಸಿದರು.