ಉಡುಪಿ, ಫೆ.12: ಉಡುಪಿ ಸಂತೆಕಟ್ಟೆ ಸಮೀಪದ ನಯಂಪಳ್ಳಿ ಕಾಶೀಮಠ ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ಮಂಗಳವಾರ ಸಂಜೆ ಶ್ರೀ ಕಾಶೀ ಮಠಾಧೀಶರಾದ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿ ಭೇಟಿ ನೀಡಿ ಸುತ್ತುಪೌಳಿ, ನಾಗಬನ ಹಾಗೂ ಪುಷ್ಕರಣಿಯ ನವೀಕರಣ ಕಾಮಗಾರಿಗಳನ್ನು ಉದ್ಘಾಟಿಸಿದರು.
ನಯಂಪಳ್ಳಿ ಕಾರಣೀಕ ಕ್ಷೇತ್ರ: ಕಾಶೀ ಮಠಾಧೀಶರು
ಇದೊಂದು ಕಾರಣೀಕ ಕ್ಷೇತ್ರವಾಗಿದೆ. ಮಧ್ವಾಚಾರ್ಯರ ಪೂರ್ವಾಶ್ರಮದ ತಾಯಿಯ ಊರಾದ ನಯಂಪಳ್ಳಿಯಲ್ಲಿ ಮಾಧ್ವ ಸಂಪ್ರದಾಯದ ಕಾಶೀ ಮಠ ಇರುವುದು ಹೆಮ್ಮೆಯ ವಿಚಾರ. ಇಲ್ಲಿಯ ಪುಷ್ಕರಣಿ ವೈಶಿಷ್ಟ್ಯಪೂರ್ಣವಾಗಿದ್ದು ಇಲ್ಲಿಯ ಆಂಜನೇಯ ಬೇಡಿದನ್ನು ಅಸ್ತು ಎಂದು ಹೇಳಿದ ಹಲವು ಉದಾಹರಣೆಗಳಿವೆ. ಬಹಳ ಶ್ರೀಮಂತ ಇತಿಹಾಸವಿದ್ದ ನಯಂಪಳ್ಳಿಯಲ್ಲಿ ದೇವಳದ ಅಭಿವೃದ್ಧಿ ನಡೆಯುತ್ತಿರುವುದು ಸಮಾಜಕ್ಕೆ ಒಳ್ಳೆಯ ಬೆಳವಣಿಗೆ ಎಂದರು. ದೇವಳದ ಅಭಿವೃದ್ಧಿಗೆ ದುಡಿದ ಸರ್ವರಿಗೂ ಶ್ರೀದೇವರ ಅನುಗ್ರಹ ಸಿಗಲಿ ಎಂದು ಆಶೀರ್ವಚನ ನೀಡಿದರು.
200 ವರ್ಷದ ಮಹೋತ್ಸವ ವಿಜೃಂಭಣೆಯಿಂದ ಆಚರಣೆ: ಗಣೇಶ್ ನಾಯಕ್
ವ್ಯವಸ್ಥಾಪಕ ಸಮಿತಿ ಅಧ್ಯಕ್ಷರಾದ ಶಿರಿಯಾರ ಗಣೇಶ್ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ, ನಯಂಪಳ್ಳಿ ಶ್ರೀ ಗೋಪಾಲಕೃಷ್ಣ ದೇವಸ್ಥಾನವು 1825 ಇಸವಿಯಲ್ಲಿ ಶ್ರೀ ಸುಮತೀಂದ್ರತೀರ್ಥ ಸ್ವಾಮೀಜಿಯವರ ಕಾಲದಲ್ಲಿ ಶ್ರೀ ಕಾಶೀಮಠ ಸಂಸ್ಥಾನ ವಾರಣಾಸಿಗೆ ಹಸ್ತಾಂತರಗೊಂಡಿತು. ದೇವಳದಲ್ಲಿ ನಡೆಯುವ ಏಕಾಹ ಭಜನೆಯು 25 ವರ್ಷಕ್ಕೆ ಪಾದಾರ್ಪಣೆಗೊಂಡಿದೆ. 2025 ಪೂರ್ಣ ವರ್ಷವನ್ನು 200 ವರ್ಷದ ಮಹೋತ್ಸವವನ್ನಾಗಿ ಆಚರಿಸುವ ಪ್ರಯುಕ್ತ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ದೇವಳದ ಸುತ್ತುಪೌಳಿ, ನಾಗಬನ ಹಾಗೂ ಪುಷ್ಕರಣಿಯ ನವೀಕರಣ ಕಾರ್ಯದಲ್ಲಿ ಸ್ವಯಂಸೇವಕರು ಹಾಗೂ ಭಕ್ತರು ಸಂಪೂರ್ಣ ಸಹಕಾರ ನೀಡಿದ್ದಾರೆ. ಸ್ವಾಮೀಜಿಯವರು ಧೈರ್ಯ ತುಂಬಿದ ಕಾರಣದಿಂದ ಮತ್ತು ದೇವರ ಸಂಪೂರ್ಣ ಅನುಗ್ರಹದಿಂದ ಯಾವುದೇ ಅಡೆತಡೆಗಳಿಲ್ಲದೆ ಕಾಮಗಾರಿಗಳು ಮುಕ್ತಾಯಗೊಂಡಿವೆ ಎಂದರು.

ದೇವಳದ ಪ್ರಧಾನ ಅರ್ಚಕರಾದ ಶ್ರೀಜಿತ್ ಶರ್ಮಾ, ವೇದಮೂರ್ತಿ ಕಾಶೀನಾಥ ಭಟ್, ರಘುವೀರ ಆಚಾರ್ಯ, ವೇದಮೂರ್ತಿ ಚೇ೦ಪಿ ಶ್ರೀಕಾಂತ್ ಭಟ್ ನೇತೃತ್ವದಲ್ಲಿ ಅರ್ಚಕರು ಧಾರ್ಮಿಕ ಪೂಜಾ ವಿಧಾನ ನೆರವೇರಿಸಿದರು. ಉಪಾಧ್ಯಕ್ಷರಾದ ಸತೀಶ್ ಪೈ, ಕಾರ್ಯದರ್ಶಿ ಅರವಿಂದ್ ಭಟ್, ಜೊತೆ ಕಾರ್ಯದರ್ಶಿ ಸುಭಾಸ್ ಭಟ್, ಕೋಶಾಧಿಕಾರಿ ನಾಗೇಂದ್ರ ನಾಯಕ್, ದಿನೇಶ್ ಶೆಣೈ, ಬಾಲಚಂದ್ರ ಪೈ, ಶಂಕರ್ ಶೆಣೈ, ರಾಮಚಂದ್ರ ಕಿಣಿ, ಅಜಿತ್ ಪೈ, ಸೀತಾರಾಮ್ ಭಟ್, ವಾಸುದೇವ ಶೆಣೈ, ಸುಭಾಶ್ ಕಾಮತ್, ಡಾ. ಗಣೇಶ್ ಪೈ, ಸಂತೋಷ್ ಭಕ್ತ, ಸಂದೀಪ್ ನಾಯಕ್, ಜಗದೀಶ್ ಕಿಣಿ, ಜಿ.ಎಸ್. ಬಿ ಯುವಕ /ಮಹಿಳಾ ಮಂಡಳಿಯ ಸದಸ್ಯರು ಮುಂತಾದವರು ಉಪಸ್ಥಿತರಿದ್ದರು.