ನವದೆಹಲಿ, ಫೆ.6: ಭಾರತೀಯ ಸೇನೆಯ ಫೈರ್‌ಪವರ್ ಸಾಮರ್ಥ್ಯಗಳನ್ನು ಹೆಚ್ಚಿಸಲು ಪಿನಾಕಾ ಮಲ್ಟಿಪಲ್ ಲಾಂಚ್ ರಾಕೆಟ್ ವ್ಯವಸ್ಥೆಗಾಗಿ ಏರಿಯಾ ಡಿನಿಯಲ್ ಮ್ಯೂನಿಷನ್ ಟೈಪ್-1 ಮತ್ತು ವರ್ಧಿತ ರೇಂಜ್ ಹೊಂದಿರುವ ಬಲಿಷ್ಠ ಸ್ಫೋಟಕ ರಾಕೆಟ್‌ಗಳ ಖರೀದಿಗಾಗಿ ಸರ್ಕಾರ ಗುರುವಾರ ರಕ್ಷಣಾ ಸಂಸ್ಥೆಗಳೊಂದಿಗೆ 10,000 ಕೋಟಿಗೂ ಹೆಚ್ಚು ಮೌಲ್ಯದ ಒಪ್ಪಂದಗಳಿಗೆ ಸಹಿ ಹಾಕಿದೆ. ಶಕ್ತಿ ಸಾಫ್ಟ್‌ವೇರ್‌ನಲ್ಲಿ ಅಪ್‌ಗ್ರೇಡ್ ಮಾಡುವ ಒಪ್ಪಂದಕ್ಕೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಜೊತೆ ಸಹಿ ಹಾಕಲಾಗಿದೆ ಎಂದು ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಪಿನಾಕಾ ಮಲ್ಟಿಪಲ್ ಲಾಂಚ್ ರಾಕೆಟ್ ಸಿಸ್ಟಮ್ (ಎಂಎಲ್‌ಆರ್‌ಎಸ್) ಗಾಗಿ ಕ್ರಮವಾಗಿ ರೂ. 10,147 ಕೋಟಿ ವೆಚ್ಚದಲ್ಲಿ “ಏರಿಯಾ ಡಿನಿಯಲ್ ಮ್ಯೂನಿಷನ್ (ಎಡಿಎಂ) ಟೈಪ್-1 (ಡಿಪಿಐಸಿಎಂ) ಮತ್ತು ಹೈ ಎಕ್ಸ್‌ಪ್ಲೋಸಿವ್ ಪ್ರಿ ಫ್ರಾಗ್ಮೆಂಟೆಡ್ (ಎಚ್‌ಇಪಿಎಫ್) ಎಂಕೆ-1 (ವರ್ಧಿತ) ರಾಕೆಟ್‌ಗಳ ಖರೀದಿಗಾಗಿ ಸಚಿವಾಲಯವು ಎಕನಾಮಿಕ್ ಎಕ್ಸ್‌ಪ್ಲೋಸಿವ್ ಲಿಮಿಟೆಡ್ (ಇಇಎಲ್) ಮತ್ತು ಮ್ಯೂನಿಷನ್ಸ್ ಇಂಡಿಯಾ ಲಿಮಿಟೆಡ್ (ಎಂಐಎಲ್) ಜೊತೆ ಒಪ್ಪಂದಗಳಿಗೆ ಸಹಿ ಹಾಕಿದೆ” ಎಂದು ಅದು ಹೇಳಿದೆ.
“HEPF Mk-1 (E) ರಾಕೆಟ್‌ಗಳು ಸೇವೆಯಲ್ಲಿರುವ HEPF ರಾಕೆಟ್‌ಗಳ ಮುಂದುವರಿದ ಆವೃತ್ತಿಯಾಗಿದ್ದು, ಅವು ಶತ್ರು ಪ್ರದೇಶದ ಮೇಲೆ ನಿಖರವಾಗಿ ದಾಳಿ ಮಾಡುವ ವ್ಯಾಪ್ತಿಯನ್ನು ಹೆಚ್ಚಿಸಿವೆ ಎಂದು ಹೇಳಿಕೆ ತಿಳಿಸಿದೆ. ನವದೆಹಲಿಯಲ್ಲಿ ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ಅವರ ಸಮ್ಮುಖದಲ್ಲಿ ಒಪ್ಪಂದಗಳಿಗೆ ಸಹಿ ಹಾಕಲಾಯಿತು.