Thursday, February 6, 2025
Thursday, February 6, 2025

ಮಕ್ಕಳು – ಶೋಷಣೆ

ಮಕ್ಕಳು – ಶೋಷಣೆ

Date:

ಕ್ಕಳು, ತಾವು ವಾಸಿಸುವ ಪರಿಸ್ಥಿತಿ ಹಾಗೂ ಸುತ್ತಮುತ್ತಲಿನ ಪರಿಸರದಿಂದ, ಒಡನಾಟದಿಂದ ಬಲು ಬೇಗನೆ ಪ್ರಭಾವಿತರಾಗುತ್ತಾರೆ. ಮಕ್ಕಳು ಯಾವಾಗಲೂ ಅತಿ ಹೆಚ್ಚು ದುರ್ಬಳಕೆ ಹಾಗೂ ಶೋಷಣೆಗೆ ಒಳಗಾಗುವ ಸ್ಥಿತಿಯಲ್ಲಿರುವವರು. ದೈಹಿಕ, ಮಾನಸಿಕ, ಲೈಂಗಿಕ ಶೋಷಣೆಗಳು ಮಕ್ಕಳ ಮೇಲೆ ನಿರಂತರವಾಗಿ ನಡೆಯುತ್ತಿದ್ದರೂ ಸಹ ಈ ಶೋಷಣೆಯನ್ನು ಶೋಷಣೆ ಎಂದೇ ತಿಳಿಯದ ಮುಗ್ಧ ಸ್ಥಿತಿಯಲ್ಲಿರುತ್ತಾರೆ ಮಕ್ಕಳು. ಮಕ್ಕಳ ಮೇಲಾಗುವಂತಹ ಲೈಂಗಿಕ ಶೋಷಣೆ ವರ್ಷದಿಂದ ವರ್ಷಕ್ಕೆ ಏರಿಕೆ ಆಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಮಕ್ಕಳ ಮೇಲಾಗುವಂತಹ ಲೈಂಗಿಕ ದೌರ್ಜನ್ಯಗಳು ಮಕ್ಕಳ ದೈಹಿಕ, ಮಾನಸಿಕ, ಸಾಮಾಜಿಕ ಬೆಳವಣಿಗೆಯಲ್ಲಿ ನ್ಯೂನ್ಯತೆಯನ್ನುಂಟುಮಾಡುತ್ತವೆ. ಮುಂದೆ ವ್ಯಕ್ತಿತ್ವ ದೋಷ, ಖಿನ್ನತೆ, ಆತಂಕ ಕಾಯಿಲೆ ಅಮಲು ಪದಾರ್ಥಗಳ ವ್ಯಸನ ಹಾಗೂ ವೈವಾಹಿಕ ಜೀವನದಲ್ಲಿ ಹೊಂದಾಣಿಕೆಯ ಸಮಸ್ಯೆ ಮೊದಲಾದ ಅನೇಕ ಸಮಸ್ಯೆಗಳ ಸೃಷ್ಟಿಗೆ ಕಾರಣವಾಗುವ ಸಾಧ್ಯತೆಗಳಿವೆ.

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಉಂಟಾಗಲು ಮುಖ್ಯ ಕಾರಣಗಳು:
•ಹಿರಿಯರಿಗಿಂತ ಮಕ್ಕಳು ದೈಹಿಕವಾಗಿ ಅಬಲರಾಗಿರುವುದು,
•ದೊಡ್ಡವರಿಗೆ ವಿಧೇಯರಾಗಿರುವುದು,
•ಲೈಂಗಿಕತೆಯ ಬಗ್ಗೆ ಮಗುವಿನಲ್ಲಿ ಮೂಲಭೂತವಾದ ತಿಳುವಳಿಕೆ ಇಲ್ಲದಿರುವುದು
•ಮಗುವಿನ ಮೇಲೆ ದೌರ್ಜನ್ಯ ಉಂಟಾದಾಗ ಹೆಚ್ಚಿನ ಸಂದರ್ಭಗಳಲ್ಲಿ ಕುಟುಂಬವು ಮರ್ಯಾದೆಯ ಕಾರಣಕ್ಕೆ ಅಂತಹ ವಿಷಯಗಳನ್ನು ಮುಚ್ಚಿಡುವುದು.
•ಶೋಷಣೆಗೊಳಗಾದ ಮಕ್ಕಳ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳದೇ ಇರುವುದು.
•ಶೋಷಣೆಗೊಳಗಾದ ಮಕ್ಕಳ ಮೇಲೆಯೇ ಸಂಶಯ ಪಡುವುದು,
•ಗಂಡು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುವುದಿಲ್ಲವೆನ್ನುವ ಒಂದು ಸುಳ್ಳು ನಂಬಿಕೆ
•ಪೋಷಕರಿಂದ ನಿರ್ಲಕ್ಷ್ಯಕ್ಕೊಳಗಾದ ಮಗು ಸಂಬಂಧಿಕರು, ಮನೆಯ‌ ಇತರ ಸದಸ್ಯರು, ನೆರೆಮನೆಯವರ ಸಹವಾಸದಲ್ಲಿ ತಾನು ಅತ್ಯಂತ ಸುರಕ್ಷಿತ ಎಂಬ ಮನೋಭಾವನೆಯನ್ನು ಬೆಳೆಸಿಕೊಳ್ಳಲು ಅನುಕೂಲ ಮಾಡಿಕೊಡುತ್ತದೆ. ಇದರಿಂದ ಶೋಷಕರಿಗೆ ಕಾರ್ಯ ಸಲೀಸುಗೊಳಿಸಿದಂತಾಗುತ್ತದೆ.

ಅಂಕಿ ಅಂಶಗಳು ತಿಳಿಸುವಂತೆ:
•18 ವರ್ಷ ತುಂಬುವುದರೊಳಗಡೆ ಆರು ಗಂಡು ಮಕ್ಕಳಲ್ಲಿ ಒಂದು ಗಂಡು ಮಗು, ನಾಲ್ಕು ಹೆಣ್ಣು ಮಕ್ಕಳಲ್ಲಿ ಒಂದು ಹೆಣ್ಣು ಮಗು ಶೋಷಣೆಗೆ ಒಳಗಾಗುತ್ತವೆ‌ ಎಂದು ಅಧ್ಯಯನಗಳು ಸಾರುತ್ತವೆ.
•ಭಾರತದಲ್ಲಿ 10 ಜನ ಮಹಿಳೆಯರಲ್ಲಿ ಒಬ್ಬಳು ಮಹಿಳೆ ಲೈಂಗಿಕ ಶೋಷಣೆಗೆ ಒಳಗಾಗುತ್ತಾಳೆ.
•85 ರಿಂದ 90 ಶೇಕಡದಷ್ಟು ಲೈಂಗಿಕ ದೌರ್ಜನಗಳು ಹತ್ತಿರದ ಸಂಬಂಧಿಕರು, ಪರಿಚಯಸ್ತರಿಂದಲೇ ಆಗುತ್ತದೆ ಎನ್ನುವುದೂ ಸಹ ಅಧ್ಯಯನಗಳಿಂದ ತಿಳಿಯುತ್ತದೆ.
•ಒಂದು ಅಧ್ಯಯನದ ಪ್ರಕಾರ ಅಂದಾಜು 19.7% ರಷ್ಟು ಮಹಿಳೆಯರು ಮತ್ತು 7.9% ಪುರುಷರು 18 ವರ್ಷಕ್ಕಿಂತ ಮೊದಲು ಹಲವು ರೀತಿಯ ಲೈಂಗಿಕ ದೌರ್ಜನ್ಯವನ್ನು ತಾವು ಅಪ್ರಾಪ್ತರಾಗಿದ್ದಾಗ ಅನುಭವಿಸಿದ್ದಾರೆ ಎಂದು ಸಾರಿದೆ.
•ಹೆಚ್ಚಿನ ಲೈಂಗಿಕ ದೌರ್ಜನ್ಯದ ಅಪರಾಧಿಗಳು ತಮ್ಮ ಬಲಿಪಶುಗಳ ಹತ್ತಿರದ ಪರಿಚಿತರೇ ಆಗಿರುತ್ತಾರೆ.
•ಸರಿ ಸುಮಾರು 30% ಮಗುವಿನ ಸಂಬಂಧಿಕರು, ಹೆಚ್ಚಾಗಿ ಸಹೋದರರು, ತಂದೆ, ಚಿಕ್ಕಪ್ಪ, ಸೋದರಸಂಬಂಧಿಗಳೇ ಲೈಂಗಿಕ ಶೋಷಕರಾಗಿರುತ್ತಾರೆ.
•ಸುಮಾರು 60% ಶೇಖಡಾ ಇತರ ಪರಿಚಿತರು, ಅಂದರೆ ಉದಾಹರಣೆಗೆ ಕುಟುಂಬದ “ಸ್ನೇಹಿತರು”, ಶಿಶುಪಾಲಕರು ಅಥವಾ ನೆರೆಹೊರೆಯವರು ಶೋಷಕರಾಗಿರುತ್ತಾರೆ.
•ಕೇವಲ 10% ಪ್ರಕರಣಗಳಲ್ಲಿ ಅಪರಿಚಿತರು ಅಪರಾಧಿಗಳಾಗಿ ಕಂಡುಬರುತ್ತಾರೆ ಎಂದು ಅಧ್ಯಯನ ಹೇಳುತ್ತದೆ.
•ಬೀದಿಯಲ್ಲಿರುವ ಮಕ್ಕಳು, ಕೆಲಸದಲ್ಲಿರುವ ಮಕ್ಕಳು ಸಾಂಸ್ಥಿಕ ಆರೈಕೆಯಲ್ಲಿರುವ ಮಕ್ಕಳ ಮೇಲೆ ಲೈಂಗಿಕ ದೌರ್ಜನಗಳು ಹೆಚ್ಚು ಎಂದೂ ವರದಿಗಳು ಹೇಳುತ್ತವೆ.
•ಅಂಗವಿಕಲತೆಯ ಮಕ್ಕಳು, ಬುದ್ಧಿಮಾಂದ್ಯತೆ ಹೊಂದಿರುವ ಮಕ್ಕಳು ಹೆಚ್ಚು ಲೈಂಗಿಕ ದೌರ್ಜನ್ಯಕ್ಕೊಳಗಾಗುತ್ತಾರೆ.
•ಇಂಟರ್ನೆಟ್ ಬಳಕೆ, ಸಾಮಾಜಿಕ ಜಾಲತಾಣಗಳ ಬಳಕೆಯ ಮೂಲಕ ಮಕ್ಕಳು ಸುಲಭವಾಗಿ ಲೈಂಗಿಕ ಶೋಷಣೆಗೆ ಬಲಿಯಾಗುತ್ತಿದ್ದಾರೆ.
•ಮನೆ, ಶಾಲೆ ಅಥವಾ ಕೆಲಸದ ಸ್ಥಳಗಳಲ್ಲಿ (ಬಾಲ ಕಾರ್ಮಿಕರು ಇರುವ ಸ್ಥಳಗಳಲ್ಲಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಮಕ್ಕಳು ಲೈಂಗಿಕ ದೌರ್ಜನ್ಯವನ್ನು ಅನುಭವಿಸಬಹುದು.
•ಬಾಲ್ಯ ವಿವಾಹವು ಮಕ್ಕಳ ಲೈಂಗಿಕ ದೌರ್ಜನ್ಯದ ಮುಖ್ಯ ರೂಪಗಳಲ್ಲಿ ಒಂದಾಗಿದೆ. ಬಾಲ್ಯ ವಿವಾಹವು ಬಹುಶಃ ಅತ್ಯಂತ ಪ್ರಚಲಿತದಲ್ಲಿರುವ ಲೈಂಗಿಕ ದೌರ್ಜನ್ಯ ಮತ್ತು ಹೆಣ್ಣುಮಕ್ಕಳ ಶೋಷಣೆ ಎಂದು ಯುನಿಸೆಫ್ ಹೇಳಿದೆ.

ಲೈಂಗಿಕ ಶೋಷಣೆಯಿಂದ ಮಕ್ಕಳ ಮೇಲಾಗುವ ಪರಿಣಾಮಗಳು:
ಲೈಂಗಿಕ ಶೋಷಣೆಗೆ ಒಳಗಾದ ಮಗು ಕೆಲವೊಂದು ದೈಹಿಕ ಮಾನಸಿಕ ನಡವಳಿಕ ಸಮಸ್ಯೆಗಳನ್ನು ಅಥವಾ ಭಿನ್ನವಾದ ನಡವಳಿಕೆಗಳನ್ನು ತೋರಿಸಬಹುದು.
ಉದಾಹರಣೆಗೆ:
•ದೈಹಿಕವಾಗಿ ಮಗುವಿನ ಜನನಾಂಗಗಳು ಬಾತುಕೊಳ್ಳುವುದು, ಗುಳ್ಳೆಗಳಾಗುವುದು, ಕೆಂಪಾಗುವುದು,
•ಶೌಚಾಲಯದಲ್ಲಿ ಶೌಚಕ್ಕೆ ಕಷ್ಟ ಪಡುವುದು, ಪದೇಪದೇ ಮೂತ್ರ ಸೋಂಕು ಉಂಟಾಗುವುದು, ಲೈಂಗಿಕವಾಗಿ ಹರಡುವ ಸೋಂಕುಗಳು ಕಾಣಿಸಿಕೊಳ್ಳುವುದು.
•ಮಾನಸಿಕವಾಗಿ ಅತಿಯಾದ ಹಠ, ಕಾರಣವಿಲ್ಲದೆ ಅಳು, ನಿದ್ದೆಯಲ್ಲಿ ಸಮಸ್ಯೆ, ಖಿನ್ನತೆ ಆತಂಕದಂತಹ ಲಕ್ಷಣಗಳು, ಶಾಲಾ ಚಟುವಟಿಕೆಗಳಲ್ಲಿ ನಿರಾಸಕ್ತಿ, ಗಮನ ಕೇಂದ್ರಿಕರಿಸುವಂತಹ ನಡವಳಿಕೆ, ಉನ್ಮಾದದ ಸ್ಥಿತಿ, ಮೈಮೇಲೆ ದೆವ್ವ ಬಂದಂತೆ ವಿಚಿತ್ರ ವರ್ತನೆಗಳನ್ನು ತೋರಿಸುವುದು, ನಡವಳಿಕೆಯಲ್ಲಿ ಹಠಾತ್ ಬದಲಾವಣೆ.
•ಲೈಂಗಿಕತೆಯ ಕುರಿತಾಗಿ ಆಸಕ್ತಿ ತೋರಿಸುವುದು, ಇತರ ಮಕ್ಕಳೊಂದಿಗೆ ಲೈಂಗಿಕ ಚೇಷ್ಟೆ ನಡೆಸುವುದು ಇತ್ಯಾದಿ ಲಕ್ಷಣಗಳನ್ನೂ ಕಾಣಬಹುದು.

ಲೈಂಗಿಕ ದೌರ್ಜನ್ಯದಿಂದ ಮಕ್ಕಳನ್ನು ಕಾಪಾಡುವುದು ಹೇಗೆ?
•ಮೊದಲನೆಯದಾಗಿ ಲಿಂಗಬೇಧವಿಲ್ಲದೆ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತದೆ. ಇದು ಮಕ್ಕಳ ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪ್ರಭಾವ ಬೀರುತ್ತದೆ ಎಂಬ ಅರಿವು ಪೋಷಕರಿಗಿರಬೇಕು.
•ಮಕ್ಕಳಿಗೆ ಯಾವುದು ಒಳ್ಳೆಯ ಸ್ಪರ್ಶ, ಯವುದು ಕೆಟ್ಟ ಸ್ಪರ್ಶ ಎನ್ನುವುದರ ಬಗ್ಗೆ ಅರಿವು ಮೂಡಿಸಬೇಕು. ಒಬ್ಬ ವ್ಯಕ್ತಿಯು ಮಗುವಿನ ಹಣೆಗೆ ಮುತ್ತಿಕ್ಕುತ್ತಾನೆ, ಬೆನ್ನು ತಟ್ಟುತ್ತಾನೆ, ಕೈ ಕುಲುಕುತ್ತನೆ, ಶಹಬ್ಬಾಸ್ ಎಂದು ಬೆನ್ನು ನೇವರಿಸುತ್ತಾನೆ. ಇವೆಲ್ಲವು ಒಳ್ಳೆಯ ಸ್ಪರ್ಶಗಳಾಗಿರುತ್ತವೆ. ಅಂತೆಯೇ ತುಟಿಗಳಿಗೆ ಮುತ್ತು ಕೊಡುವುದು, ಎದೆಯ ಭಾಗ ಮುಟ್ಟುವುದು, ತೊಡೆ ಸಂದಿ ಅಥವಾ ಹಿಂಭಾಗ ಸ್ಪರ್ಶಿಸುತ್ತಿರುವುದು ಕೆಟ್ಟ ಸ್ಪರ್ಶವೆಂದು ಮಕ್ಕಳಿಗೆ ತಿಳಿಸಿ ಹೇಳಬೇಕು. ಮುಜುಗರ ಉಂಟು ಮಾಡುವ ನಡವಳಿಕೆಗಳನ್ನು ಆ ಕೂಡಲೇ ಪೋಷಕರ ಗಮನಕ್ಕೆ ತರಲು ಮಕ್ಕಳಿಗೆ ತಿಳಿ ಹೇಳಬೇಕು.
•ಎಷ್ಟೇ ಹತ್ತಿರದ ಸಂಬಂಧಿಕರಾದರೂ ಮಕ್ಕಳಲ್ಲಿ ಮಾತನಾಡುವ ಸಂದರ್ಭದಲ್ಲಿ ಡಾರ್ಲಿಂಗ್, ನನ್ನ ಹೆಂಡತಿ ಎನ್ನುವ ಶಬ್ದಗಳನ್ನು ಬಳಸದಂತೆ ಎಚ್ಚರ ವಹಿಸಬೇಕು.
•ಪೋಷಕರು, ಮೊಬೈಲ್ ನ್ನು ಮಕ್ಕಳ ಕೈಗೆ ನೀಡುವಾಗ ಯಾವುದೇ ಅಶ್ಲೀಲ ವಿಡಿಯೋ ತುಣುಕುಗಳು, ಚಿತ್ರಗಳು ಮೊಬೈಲ್ ಗ್ಯಾಲರಿಯಲ್ಲಿ ಇಲ್ಲದಂತೆ ಖಾತ್ರಿ ಪಡಿಸಿಕೊಳ್ಳಬೇಕು ಹಾಗೂ ಮೊಬೈಲ್ ದುರ್ಬಳಕೆಯ ನಿಯಂತ್ರಣದ ಬಗ್ಗೆ ಗಮನ ಹರಿಸಬೇಕು.
•ಸಣ್ಣ ಮಕ್ಕಳು ಯಾರ ತೊಡೆಯ ಮೇಲೂ ಕುಳಿತುಕೊಳ್ಳುವುದನ್ನು ಉತ್ತೇಜಿಸಬಾರದು.
•ಮಕ್ಕಳು ಶಾಲೆಗೆ ಹೋಗಲು ಪ್ರಾರಂಭಿಸುವ ಮುಂಚೆಯೇ ತನ್ನ ಶೌಚ ತಾನೇ ಸ್ವಚ್ಚಗೊಳಿಸಿಕೊಳ್ಳುವ ತರಬೇತಿ ಕೊಡಬೇಕು. ಮಕ್ಕಳು ತಮ್ಮ ಬಟ್ಟೆಗಳನ್ನು ತಾವೇ ತೊಡಲು ಕಲಿಸಿಕೊಡಬೇಕು.
•ಮಕ್ಕಳು ಯಾರ ಬಗ್ಗೆಯಾದರೂ ಪದೇ ಪದೇ ದೂರುತ್ತಿದ್ದಲ್ಲಿ, ಅವರ ಹತ್ತಿರ ಹೋಗಲು ಕೇಳದಿರುವುದು, ಭಯ ಪಡುವುದು ಕಂಡುಬಂದಲ್ಲಿ ನಿರ್ಲಕ್ಷಿಸದೆ ಭಯದ ಕಾರಣ ತಿಳಿಯುವ ಪ್ರಯತ್ನ ನಡೆಸಬೇಕು.
•ಮಕ್ಕಳಿಗೆ ಮುಜುಗರ ನೀಡುವ ಯಾವುದೇ ನಡವಳಿಕೆಯನ್ನು ನೋ ಎಂದು ಧೈರ್ಯವಾಗಿ ಹೇಳಲು ಕಲಿಸುವುದು.
•ಹದಿಹರೆಯದ ಮಕ್ಕಳಿಗೆ ವಯೋಸಹಜವಾಗಿ ಉಂಟಾಗುವ ಅನ್ಯಲಿಂಗ ಆಸಕ್ತಿಯನ್ನು ತಪ್ಪುಅಥವಾ ಕೆಟ್ಟದ್ದು ಎನ್ನುತ್ತ ತಪ್ಪಿತಸ್ಥ ಭಾವನೆ ಮೂಡಿಸಿ ಬೆಳೆಸುವ ಬದಲಾಗಿ ಅಂತಹ ನಡವಳಿಕೆಗಳಿಂದ ಉಂಟಾಗುವ ತೊಂದರೆಗಳ ಬಗ್ಗೆ ತಿಳಿಹೇಳಬೇಕು.
•ಮಕ್ಕಳು ತಮ್ಮಲ್ಲಾಗುವ ವಯೋಸಹಜ ಆಕರ್ಷಣೆಗಳು, ಅನ್ಯಲಿಂಗ ಆಸಕ್ತಿಯ ಕುರಿತಾಗಿ ತಮ್ಮ ಅನಿಸಿಕೆ ಆಕಾಂಕ್ಷೆಗಳನ್ನು ಪೋಷಕರೊಂದಿಗೆ ಮುಕ್ತವಾಗಿ ಚರ್ಚಿಸುವಂತಹ ವಾತಾವರಣವಿರಬೇಕು ಹಾಗೂ ಮಾರ್ಗದರ್ಶನ ಪಡೆಯುವಂತಿರಬೇಕು.
•ಸಾಮಾಜಿಕ ಜಾಲತಾಣ, ಇಂಟರ್ನೆಟ್ ಗಳಲ್ಲಿ ಆಗುತ್ತಿರುವ ಮಕ್ಕಳ ಲೈಂಗಿಕ ಶೋಷಣೆ ಕುರಿತಾಗಿ ಮಾಹಿತಿ ನೀಡುವುದು. ನುರಿತ ತಜ್ಞರಿಂದ ಶಾಲಾ ಕಾಲೇಜುಗಳಲ್ಲಿ ಎಚ್ಐವಿ (ಏಡ್ಸ್) ಕಾಯಿಲೆಯ ಕುರಿತಾಗಿ, ಲೈಂಗಿಕ ಸೋಂಕುಗಳ ಬಗ್ಗೆ ಮಾಹಿತಿ ಕಾರ್ಯಗಾರ ಏರ್ಪಡಿಸುವುದು,
•ಶಾಲಾ-ಕಾಲೇಜಿನಲ್ಲಿ ನಡೆಯುವ ಪ್ರೇಮ ಸಲ್ಲಾಪಗಳನ್ನು ಗಡಿಬಿಡಿಯಲ್ಲಿ ಮಕ್ಕಳಿಗೆ ನೋವಾಗುವಂತೆ, ಇತರರ ಮುಂದೆ ಅವಮಾನವಾಗುವಂತೆ ಬುದ್ಧಿಹೇಳುವ ಬದಲು ಮಕ್ಕಳಿಗೆ ಈ ಬಗ್ಗೆ ವೈಯಕ್ತಿಕವಾಗಿ ಆಪ್ತಸಮಾಲೋಚನೆ ನಡೆಸುವುದು ಹಾಗೂ ಪ್ರೀತಿ ಪ್ರೇಮ ಖಂಡಿತ ತಪ್ಪಲ್ಲ, ವಯೋಸಹಜ ಆಕರ್ಷಣೆಗಳು ಅದರೆ ಅದನ್ನು ಯಾವ ರೀತಿ ನಿಭಾಯಿಸಬಹುದು ಎನ್ನುವ ಬಗ್ಗೆ ತಿಳಿಹೇಳುವುದು ಅಗತ್ಯ.
•ಪ್ರೀತಿ, ಪ್ರೇಮದ ಆಲೋಚನೆ ಮನಸ್ಸಿಗೆ ಮುದ ನೀಡುತ್ತದೆ ಆದರೆ ನಿಭಾಯಿಸುವಿಕೆ ಒತ್ತಡಪೂರಿತವಾಗಿರುತ್ತದೆ ಹಾಗೂ ನಾವು ಕಾಣುವ ಗುರಿಗಳಿಂದ ನಮ್ಮನ್ನು ವಿಚಲಿತಗೊಳಿಸುತ್ತದೆ ಎಂಬುವುದನ್ನು ಅರ್ಥಮಾಡಿಸಬೇಕು
•ಮಕ್ಕಳ ಜನನ ಹೇಗಾಗುತ್ತದೆ? ಹಸ್ತ ಮೈಥುನ, ಅನ್ಯಲಿಂಗ ಆಸಕ್ತಿ ಈ ಎಲ್ಲಾ ವಿಷಯಗಳ ಕುರಿತಾಗಿ ವೈಜ್ಞಾನಿಕ ಮಾಹಿತಿಯನ್ನು ಮುಕ್ತವಾದ ವಾತಾವರಣದಲ್ಲಿ ನೀಡುವುದು.
•ದೇಹದ ಭಾಗಗಳನ್ನು ಸರಿಯಾದ ಹೆಸರುಗಳಲ್ಲಿ ಬಳಸಲು ತಿಳಿಸುವುದು. ದೇಹ ಭಾಗಗಳನ್ನು ಹೆಸರುಗಳನ್ನು ತಿಳಿಸುವಲ್ಲಿ ನಮಗೆ ಮುಜುಗರ ಇದ್ದರೆ ಮಕ್ಕಳಲ್ಲಿ ಈ ಬಗ್ಗೆ ತಿಳುವಳಿಕೆ ನೀಡಲು ನಾವು ವಿಫಲರಾಗುತ್ತೇವೆ.

ಏನಿದು ಫೋಕ್ಸೋ ಕಾಯಿದೆ?
ಲೈಂಗಿಕ ಹಾಗೂ ಎಲ್ಲಾ ರೀತಿಯ ಅಪರಾಧ ದೌರ್ಜನ್ಯಗಳಿಂದ ಮಕ್ಕಳನ್ನು ರಕ್ಷಿಸುವ ಉದ್ದೇಶದಿಂದ 2012 ರಲ್ಲಿ ಜಾರಿಗೆ ಬಂದಿದೆ. 18 ವರುಷ ಕೆಳಗಿನ ಎಲ್ಲಾ ಮಕ್ಕಳು ಈ ಕಾಯಿದೆಯಿಂದ ರಕ್ಷಣೆ ಪಡೆಯುತ್ತಾರೆ. ಮಗುವಿನ ಹಿತಾಸಕ್ತಿ ಕಾಪಾಡುವುದೇ ಈ ಕಾಯಿದೆಯ ಮುಖ್ಯ ಧ್ಯೇಯವಾಗಿದೆ. ಮಗುವಿನ ದೈಹಿಕ ಆರೋಗ್ಯ ,ಮಾನಸಿಕ, ಬೌದ್ಧಿಕ, ಸಾಮಾಜಿಕವಾಗಿ ಆರೋಗ್ಯ ಕಾಪಾಡುವುದೇ ಈ ಕಾಯಿದೆಯ ಮುಖ್ಯ ಧ್ಯೇಯವಾಗಿದೆ. ಪೋಕ್ಸೋ ಕಾಯ್ದೆಯ ಮೂಲಕ ಪೋಷಕರು, ಶಿಕ್ಷಕರು, ಶಾಲಾ ಸಿಬ್ಬಂದಿ, ವೈದ್ಯರು ಅಥವಾ ಸ್ವತಃ ಮಗು ಯಾರೂ ಬೇಕಾದರೂ ದೂರು ಸಲ್ಲಿಸಬಹುದು.

ಪೋಕ್ಸೋ ಕಾಯ್ದೆಯ ಪ್ರಕಾರ ದೈಹಿಕ ಸಂಪರ್ಕ ಮಕ್ಕಳ ವೈಯಕ್ತಿಕ ಅಂಗಾಂಗಗಳನ್ನು ಮುಟ್ಟುವುದು, ತಮ್ಮ ವೈಯಕ್ತಿಕ ಅಂಗಗಳನ್ನು ಮಕ್ಕಳಿಂದ ಮುಟ್ಟಿಸುವುದು, ಮಕ್ಕಳನ್ನು ಹೆದರಿಸಿ, ಬೆದರಿಸಿ, ಮತ್ತು ಬರಿಸಿ ಲೈಂಗಿಕ ದೌರ್ಜನ್ಯ ಎಸಗುವುದು, ತಮ್ಮ ವೈಯಕ್ತಿಕ ಅಂಗಾಂಗಗಳನ್ನು ಪ್ರದರ್ಶಿಸುವುದು, ಅಶ್ಲೀಲ ಚಿತ್ರಗಳನ್ನು ತೋರಿಸುವುದು, ಲೈಂಗಿಕ ಪ್ರಚೋದನೆಯ ಮಾತುಗಳು, ಎಲ್ಲವೂ ಸಹ ಲೈಂಗಿಕ ಶೋಷಣೆಯೇ ಆಗಿರುತ್ತದೆ. ಶೋಷಣೆ ಸಾಬೀತಾದಲ್ಲಿ ವಿವಿಧ ಹಂತದ ಶಿಕ್ಷೆಯನ್ನು ಈ ಕಾಯ್ದೆ ವಿವರಿಸಿದೆ. ಅದರಂತೆ ಆರೋಪಿಯು 3 ವರ್ಷಗಳಿಂದ ಜೀವಾವಧಿಯವರೆಗೂ ಶಿಕ್ಷೆ ಪಡೆಯಬಹುದು. ಹಾಗೂ ದಂಡವನ್ನು ಪಾವತಿಸಬೇಕಾಗಬಹುದು. ಪೊಕ್ಸೊ ಕಾಯಿದೆ ಅಡಿಯಲ್ಲಿ ಶೋಷಿತರಾದ ಮಕ್ಕಳೊಂದಿಗೆ ಮನಸ್ಸಿಗೆ ಯಾತನೆಯಾಗದಂತೆ ಯಾವ ರೀತಿ ನಡೆದುಕೊಳ್ಳಬೇಕು ಎನ್ನುವುದನ್ನು ಬಹು ವಿಸ್ತಾರವಾಗಿ ತಿಳಿಸುತ್ತದೆ
ಮುಖ್ಯವಾದ ಅಂಶಗಳೆಂದರೆ:
•ಮಗುವಿನ ಮೇಲೆ ನಡೆದ ದೌರ್ಜನ್ಯದ ಕುರಿತಾಗಿ ಅಥವಾ ಮಗುವಿಗೆ ಅಪಾಯದಲ್ಲಿದೆ ಎಂಬ ಆತಂಕವಿದ್ದಲ್ಲಿ ಬಾಲಾಪರಾಧಿ ತಡೆ ಘಟಕ ಆ ಕೂಡಲೇ ಮಗುವಿಗೆ ರಕ್ಷಣೆ ಒದಗಿಸಬೇಕು.
•ಮಗುವಿನ ಮೇಲೆ ನಡೆದ ದೌರ್ಜನ್ಯದ ಹೇಳಿಕೆಯನ್ನು ಮಹಿಳಾ ಅಧಿಕಾರಿ ದಾಖಲಿಸಬೇಕು.
•ಮಗುವಿನ ಪೋಷಕರು ಅಥವಾ ಪ್ರೀತಿ ಪಾತ್ರರು ಉಪಸ್ಥಿತರಿರಬೇಕು.
•ಮಗುವಿನ ಗುರುತು ಗೌಪ್ಯವಾಗಿಡಬೇಕು.
•ವಿಚಾರಣೆಯ ಸಂದರ್ಭದಲ್ಲಿ ಮಗುವಿಗೆ ನೋವಾಗುವಂತಹ ಪ್ರಶ್ನೆಗಳನ್ನು ಕೇಳಲು ಅನುಮತಿಯಿಲ್ಲ.
•ರಾತ್ರಿ ವೇಳೆ ಮಗುವನ್ನು ಪೋಲಿಸ್ ಠಾಣೆಯಲ್ಲಿ ಇಡುವಂತಿಲ್ಲ.

ಹೀಗೆ ಆಯಾಯ ದೇಶದ ಕಾನೂನು ಮಕ್ಕಳ ಹಿತಾಸಕ್ತಿಯನ್ನು ಕಾಪಾಡಲು ಅನೇಕ ಕಾನೂನುಗಳನ್ನು ರೂಪಿಸಿದೆ. ಆ ಕಾನೂನಿನ ಕುರಿತಾದ ಮೂಲಭೂತ ಅರಿವು ಪ್ರಜೆಗಳಾದ ನಮಗಿರಬೇಕು.‌ ಮಕ್ಕಳ ಹಿತ ರಕ್ಷಣೆಯನ್ನು ಕಾಯುವುದಕ್ಕೆ, ಪೋಷಕರು, ಶಿಕ್ಷಕರು ಮಕ್ಕಳ ನಿಕಟವರ್ತಿ ಹಿರಿಯರು ಎಲ್ಲರೂ ಒಂದಾಗಿ ಶ್ರಮಿಸಿದರೆ ಮಕ್ಕಳ ಮೇಲಿನ ದೌರ್ಜನ್ಯವನ್ನು ಕಡಿಮೆಗೊಳಿಸುವಲ್ಲಿ ಮತ್ತು ತಡೆಗಟ್ಟುವಲ್ಲಿ ಗಮನಾರ್ಹ ಪಾತ್ರವನ್ನು ನಿರ್ವಹಿಸಬೇಕು.

ಸೌಜನ್ಯಾ ಕೆ. ಶೆಟ್ಟಿ. ಆಡಳಿತಾಧಿಕಾರಿ, ಡಾ. ಎ.‌ ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಶ್ರೀ ಕೃಷ್ಣ ಮಠ: ವಿವಿಧ ಕ್ಷೇತ್ರಗಳ ಮುಖ್ಯಸ್ಥರಿಗೆ ಸನ್ಮಾನ

ಉಡುಪಿ, ಫೆ.5: ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ...

ಶಿವಪಾಡಿ ವೈಭವ ಆಮಂತ್ರಣ ಪತ್ರಿಕೆ ಬಿಡುಗಡೆ

ಮಣಿಪಾಲ, ಫೆ.5: ಫೆಬ್ರವರಿ 22 ರಿಂದ ಫೆಬ್ರವರಿ 26ರವರೆಗೆ ವೈಭವೋಪೂರಿತವಾಗಿ ನಡೆಯಲಿರುವ...

ಮನಸ್ಸು ಹತೋಟಿಯಲ್ಲಿರಲು, ಏಕಾಗ್ರತೆ ಸಾಧಿಸಲು ಯೋಗ, ಪ್ರಾಣಾಯಾಮ ಸಹಕಾರಿ: ಪ್ರಸನ್ನ ಶಣೈ

ಉಡುಪಿ, ಫೆ.5: ಮನಸ್ಸು ಹತೋಟಿಯಲ್ಲಿರಲು, ಏಕಾಗ್ರತೆ ಸಾಧಿಸಲು ಯೋಗ, ಪ್ರಾಣಾಯಾಮಗಳು ಸಹಕಾರಿ....

ಸಾಸ್ತಾನ ಟೋಲ್ ಪ್ಲಾಜಾ ಬಳಿ ಬಸ್ಸು ಮಾಲಕರ ಸಂಘಟನೆಯಿಂದ ಪ್ರತಿಭಟನೆ

ಕೋಟ, ಫೆ.5: ಸಾಸ್ತಾನ ಟೋಲ್ ಪ್ಲಾಜಾ ಮತ್ತು ಹೆಜಮಾಡಿ ಟೋಲ್ ಪ್ಲಾಜಾಗಳಲ್ಲಿ...
error: Content is protected !!