ಉಡುಪಿ, ಫೆ.2: ವಿಶ್ವವಾಣಿ ಪತ್ರಿಕೆ ಹಾಗೂ ಕರ್ನಾಟಕ ಸಾಹಿತ್ಯ ಮಸ್ಕತ್ ಸಹಭಾಗಿತ್ವದ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಪ್ರತಿವರ್ಷ ನೀಡಲಾಗುವ ‘ಗ್ಲೋಬಲ್ ಅಚೀವರ್ಸ್ ಅವಾರ್ಡ್’ ಪ್ರಶಸ್ತಿಯನ್ನು ಉಡುಪಿ ಮಾಜಿ ಶಾಸಕ ಕೆ. ರಘುಪತಿ ಭಟ್ ಅವರಿಗೆ ಪ್ರದಾನ ಮಾಡಲಾಯಿತು. ಓಮನ್ ರಾಜಧಾನಿ ಮಸ್ಕತ್ನಲ್ಲಿ ನಡೆದ ಸಮಾರಂಭದಲ್ಲಿ ರಘುಪತಿ ಭಟ್ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಿದರು.
2004ರಲ್ಲಿ ಉಡುಪಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ರಘುಪತಿ ಭಟ್ ಅವರು 2008 ಹಾಗೂ 2018 ಹೀಗೆ ಮೂರು ಅವಧಿಗೆ ಶಾಸಕರಾಗಿ ಕಾರ್ಯನಿರ್ವಹಿಸಿರುತ್ತಾರೆ. ಶಾಸಕರಾಗಿದ್ದಾಗ 2006ರಲ್ಲಿ ಯಕ್ಷ ಶಿಕ್ಷಣ ಟ್ರಸ್ಟ್ ಆರಂಭಿಸಿ ಆ ಮೂಲಕ ಉಡುಪಿ ಕ್ಷೇತ್ರದ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಲ್ಲಿ ಯಕ್ಷಗಾನ ತರಬೇತಿ ಆರಂಭಿಸಿದರು. ತುಳುನಾಡಿನ ಅಸ್ಮಿತೆಯಾದ ಕರಾವಳಿಯ ಗಂಡುಕಲೆ ಎಂದು ಖ್ಯಾತಿಯನ್ನು ಪಡೆದ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿರುವುದನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ರಘುಪತಿ ಭಟ್ ಅವರು ಶಾಸಕರಾಗಿದ್ದ ಅವಧಿಯಲ್ಲಿ ವಿದ್ಯಾ ಕ್ಷೇತ್ರ, ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ತನ್ನದೇ ಆದ ರೀತಿಯಲ್ಲಿ ಕೊಡುಗೆ ನೀಡಿದ್ದರು. 2018 ರಲ್ಲಿ ಶಾಸಕರಾಗಿದ್ದಾಗ ಸಾಮಾಜಿಕ ಕ್ಷೇತ್ರದ ಗಣ್ಯರನ್ನು ಸೇರಿಸಿಕೊಂಡು ಕೇದಾರೋತ್ಥಾನ ಟ್ರಸ್ಟ್ (ರಿ.) ಉಡುಪಿ ಟ್ರಸ್ಟ್ ರಚಿಸಿ ನಡೆಸಿದ 1500 ಎಕರೆ ಹಡಿಲು ಬಿದ್ದ ಭೂಮಿಯಲಿ ಕೃಷಿ ಕ್ರಾಂತಿ ನಡೆಸಿ, ಕೋಟ್ಯಾಂತರ ರೈತರಿಗೆ ಸ್ಪೂರ್ತಿಯಾದ ಉಡುಪಿಯ ನಿಕಟಪೂರ್ವ ಶಾಸಕ ರಘುಪತಿ ಭಟ್ ರವರಿಗೆ ವಿಶ್ವವಾಣಿ ಜಾಗತಿಕ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ದಿವ್ಯ ಸಾನಿಧ್ಯವಹಿಸಿದ್ದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಮುಖ್ಯ ಅತಿಥಿಗಳಾದ ಕರ್ನಾಟಕ ವಿಧಾನಸಭಾ ಅಧ್ಯಕ್ಷರಾದ ಯು.ಟಿ ಖಾದರ್, ವಿಶ್ವವಾಣಿ ಪ್ರಧಾನ ಸಂಪಾದಕರಾದ ವಿಶ್ವೇಶ್ವರ್ ಭಟ್, ಒಮನ್ ದೇಶದ ಪ್ರಮುಖರಾದ ಲತೀಫ್, ಪ್ರಸಾದ್, ಶಾಸಕರಾದ ಸಿ.ಟಿ ರವಿ, ಮಾಜಿ ಸಚಿವ ಹರತಾಳು ಹಾಲಪ್ಪ, ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣಯ್ಯ, ಜಿ.ಎಂ ಸಮೂಹ ಸಂಸ್ಥೆ ನಿರ್ದೇಶಕ ಜಿ.ಎಸ್ ಅನಿತ್ ಕುಮಾರ್ ಸೇರಿ ವಿವಿಧ ಕ್ಷೇತ್ರಗಳಿಂದ ಒಟ್ಟು 17 ಜನ ಪ್ರಶಸ್ತಿಗೆ ಭಾಜನರಾದರು.