ಕೋಟ, ಡಿ.26: ವೀರಯೋಧ ಅನೂಪ್ ಪೂಜಾರಿ ಗಡಿಕಾಯುವ ಸಂದರ್ಭ ರಸ್ತೆ ಅಪಘಾತವೊಂದರಲ್ಲಿ ಸೇನಾ ಟ್ರಕ್ ಪಲ್ಟಿಯಾಗಿ ಸಾವನ್ನಪ್ಪಿದ್ದು ಅವರ ಮೃತದೇಹ ಹುಟ್ಟೂರು ಉಡುಪಿ ಜಿಲ್ಲೆಯ ಬೀಜಾಡಿಗೆ ಆಗಮಿಸುವ ಸಂದರ್ಭದ ಮಾರ್ಗದಲ್ಲಿ ಕೋಟ ಅಮೃತೇಶ್ವರಿ ಸರ್ಕಲ್ ಬಳಿ ಭಾರಿ ಪ್ರಮಾಣದಲ್ಲಿ ಸಾರ್ವಜನಿಕರು ಪುಷ್ಭನಮನ ಸಲ್ಲಿಸಿದರು. ಕೋಟ ಅಮೃತೇಶ್ವರಿ ದೇಗುಲದ ಸನಿಹದ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಗಮಿಸುತ್ತಿದ್ದಂತೆ ಭಾರತ್ ಮಾತಾ ಕೀ ಜೈ ವೀರಯೋಧನಿಗೆ ಜೈಕಾರ ಘೋಷಣೆಗಳು ಮೊಳಗಿದವು. ಸಾಸ್ತಾನದ ಮಾಬುಕಳ, ಬಸ್ ನಿಲ್ದಾಣ ಸಾಸ್ತಾನ, ಸಾಲಿಗ್ರಾಮ, ಕೋಟ ಹೈಸ್ಕೂಲ್ ಸರ್ಕಲ್, ತೆಕ್ಕಟ್ಟೆ ಬಸ್ ನಿಲ್ದಾಣದ ಬಳಿ ಸಾರ್ವಜನಿಕರು ಅಂತಿಮ ನಮನ ಸಲ್ಲಿಸಿದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ, ಉದ್ಯಮಿ ಆನಂದ್ ಸಿ ಕುಂದರ್, ಮಾಜಿ ಜಿ.ಪಂ ಸದಸ್ಯೆ ಗೀತಾಂಜಲಿ ಸುವರ್ಣ, ರಾಘವೇಂದ್ರ ಕಾಂಚನ್, ಕೋಟತಟ್ಟು ಗ್ರಾಮ ಪಂಚಾಯತ್ ಇದರ ಸತೀಶ್ ಕುಂದರ್, ಕೋಟ ಗ್ರಾ.ಪಂ ಉಪಾಧ್ಯಕ್ಷ ಪಾಂಡು ಪೂಜಾರಿ, ಸ್ಥಳೀಯಾಡಳಿತ ಪ್ರತಿನಿಧಿಗಳು, ಮುಂತಾದವರು ಪುಷ್ಪನಮನ ಸಲ್ಲಿಸಿದರು.