ಉಡುಪಿ, ಡಿ.23: ಯಕ್ಷಗಾನ ಪ್ರಸಂಗ ಸಾಹಿತ್ಯಕ್ಕೆ ಸುಮಾರು ಏಳುನೂರು ವರ್ಷಗಳ ಇತಿಹಾಸವಿದೆ. ಸಾವಿರಕ್ಕೂ ಅಧಿಕ ಕವಿಗಳು ಪ್ರಸಂಗ ರಚಿಸಿದ್ದಾರೆ. ಎಲ್ಲ ಪ್ರಸಂಗಗಳೂ ರಂಗದಲ್ಲಿ ಯಶಸ್ವಿಯಾಗಿಲ್ಲ. ಪ್ರಸ್ತುತ ಛಂದಸ್ಸಿನ ತಿಳಿವಳಿಕೆ ಇಲ್ಲದವರೂ, ಪದ್ಯರಚಿಸಲು ಬಾರದವರೂ ಪ್ರಸಂಗಕರ್ತರೆನಿಸಿಕೊಳ್ಳುತ್ತಿದ್ದಾರೆ. ಆದರೆ ಡಾ. ಶಿವಕುಮಾರ ಅಳಗೋಡು ಅವರ ಪ್ರಸಂಗಗಳೆಲ್ಲ ಛಂದೋಬದ್ಧವಾಗಿದ್ದು ಪೌರಾಣಿಕ ಕಥಾಹಂದರದಿಂದ ಪ್ರಬುದ್ಧವಾಗಿವೆ, ರಂಗದಲ್ಲೂ ಯಶಸ್ವಿಯಾಗಿವೆ ಎಂದು ಸುಜೀಂದ್ರ ಹಂದೆ ಹೇಳಿದರು. ಡಿಸೆಂಬರ್ ೨೨ರಂದು ಉಪ್ಪಿನಕುದ್ರು ಶ್ರೀ ದೇವಣ್ಣ ಪದ್ಮನಾಭ ಕಾಮತ್ ಮೆಮೋರಿಯಲ್ ಯಕ್ಷಗಾನ ಗೊಂಬೆಯಾಟ ಟ್ರಸ್ಟ್ (ರಿ), ಗೊಂಬೆಮನೆ ಆಶ್ರಯದಲ್ಲಿ, ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಕನ್ನಡ ಉಪನ್ಯಾಸಕ, ಕಲಾವಿದ ಡಾ. ಶಿವಕುಮಾರ ಅಳಗೋಡು ರಚಿಸಿದ, ರಾಜ್ಯಮಟ್ಟದ ಯಕ್ಷಗಾನ ಪ್ರಸಂಗ ರಚನಾ ಸ್ಪರ್ಧೆಯಲ್ಲಿ ದ್ವಿತೀಯ ಪ್ರಶಸ್ತಿ ವಿಜೇತ ‘ಯವಕ್ರೀತ ವೃತ್ತಾಂತ’ ಹಾಗೂ ‘ಶ್ರೀಕೃಷ್ಣ ಕಾರುಣ್ಯ’ ಪೌರಾಣಿಕ ಪ್ರಸಂಗಕೃತಿಯನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.
ಶಿಕ್ಷಕಿ, ಹವ್ಯಾಸಿ ಯಕ್ಷಗಾನ ಕಲಾವಿದೆ ನಾಗರತ್ನಾ ಹೇರ್ಳೆ, ಗಿಳಿಯಾರು ಪ್ರಸಂಗಕೃತಿಗಳನ್ನು ಪರಿಚಯಿಸಿ, ಅಳಗೋಡು ಅವರ ಪ್ರಸಂಗಗಳ ಸಾಹಿತ್ಯ, ಛಂದಸ್ಸು ಶ್ರೇಷ್ಠಮಟ್ಟದಲ್ಲಿದೆ. ಈ ಪ್ರಸಂಗಗಳಲ್ಲಿ ಸುಮಾರು 80 ರಷ್ಟು ಛಂದಸ್ಸನ್ನೂ, ಅನೇಕ ಪ್ರಯೋಗಾತ್ಮಕವಾದ ಸಮೀಕೃತ ಬಂಧಗಳನ್ನೂ ರಚಿಸಿ ಸಾಹಿತ್ಯಲೋಕಕ್ಕೆ ಕಾಣ್ಕೆಯಾಗಿ ನೀಡಿದ್ದಾರೆ ಎಂದರು. ಟ್ರಸ್ಟ್ ಅಧ್ಯಕ್ಷರೂ ರಾಜ್ಯಪ್ರಶಸ್ತಿ ಪುರಸ್ಕೃತ ಗೊಂಬೆಯಾಟದ ಕಲಾವಿದರೂ ಆಗಿರುವ ಭಾಸ್ಕರ ಕೊಗ್ಗ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಕೃತಿಯ ಪ್ರಕಾಶಕರಾದ ಶಿರೂರು ಫಣಿಯಪ್ಪಯ್ಯನವರ ಪುತ್ರ ಉಮೇಶ ಶಿರೂರು ಸ್ವಾಗತಿಸಿದರು. ಕೃತಿಕಾರ ಡಾ. ಶಿವಕುಮಾರ ಅಳಗೋಡು, ಉಡುಪಿಯ ತರಂಗಿಣಿ ಭಜನಾ ಮಂಡಳಿಯ ಸುಲೇಖಾ ಉಪಸ್ಥಿತರಿದ್ದರು.