Monday, December 23, 2024
Monday, December 23, 2024

ಗಂಗೊಳ್ಳಿಯಲ್ಲಿ ಅಪಾರ ಜನಮೆಚ್ಚುಗೆ ಪಡೆದ ಶ್ರೀ ಶಬರಿಮಲೆ ಸ್ವಾಮಿ ಅಯ್ಯಪ್ಪ

ಗಂಗೊಳ್ಳಿಯಲ್ಲಿ ಅಪಾರ ಜನಮೆಚ್ಚುಗೆ ಪಡೆದ ಶ್ರೀ ಶಬರಿಮಲೆ ಸ್ವಾಮಿ ಅಯ್ಯಪ್ಪ

Date:

ಕುಂದಾಪುರ, ಡಿ.23: ತಾಲೂಕಿನ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಲೇಖಕ ಮತ್ತು ವಾಣಿಜ್ಯಶಾಸ್ತ್ರ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಅವರ ರಚನೆ ಮತ್ತು ನಿರ್ದೇಶನದಲ್ಲಿ ಇಲ್ಲಿನ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ನಾಟಕ ಶ್ರೀ ಶಬರಿಮಲೆ ಸ್ವಾಮಿ ಅಯ್ಯಪ್ಪ ಅತ್ಯಂತ ಆಕರ್ಷಕವಾಗಿ ಮೂಡಿಬಂದು ಜನರಿಂದ ಅಪಾರವಾದ ಮೆಚ್ಚುಗೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ವಾರ್ಷಿಕೋತ್ಸವದ ವೇದಿಕೆಗಳಲ್ಲಿ ಇಂತಹ ಭಕ್ತಿ ಪ್ರಧಾನ ನಾಟಕಗಳನ್ನು ಭಿನ್ನವಾಗಿ ನುರಿತ ರಂಗ ತಂಡಗಳ ರೀತಿಯಲ್ಲಿ ಕಟ್ಟಿಕೊಡುವುದು ಬಹಳ ದೊಡ್ಡ ಸವಾಲಿನ ಕೆಲಸ. ಅದರಲ್ಲೂ ಅನಿವಾರ್ಯವಾಗಿ ಕೇವಲ ಮೂರ್ನಾಲ್ಕು ದಿನಗಳ ಅವಧಿಯಲ್ಲಿ ತರಬೇತಿಯನ್ನು ಪಡೆದು ನುರಿತ ರಂಗ ತಂಡಗಳ ರೀತಿಯಲ್ಲಿ ಈ ನಾಟಕವನ್ನು ಹುಬ್ಬೇರಿಸುವಂತೆ ಚಂದಗೆ ಮನ ಮುಟ್ಟುವ ರೀತಿಯಲ್ಲಿ ಪ್ರದರ್ಶಿಸಿದ ರೀತಿ ವೀಕ್ಷಕರಿಗೆ ಅಚ್ಚರಿ ಭರಿತ ಸಂತೋಷ ನೀಡಿತ್ತು.

ಮಹಿಷಾಸುರನ ಸಂಹಾರದಿಂದ ಆರಂಭವಾದ ನಾಟಕ ಮಹಿಷಿಯ ಕೋಪ, ತಪಸ್ಸು, ದುಷ್ಕಾರ್ಯಗಳು, ದೇವಲೋಕದಲ್ಲಿ ನಾರದರ ತಂತ್ರಗಾರಿಕೆ,ಹರಿಹರರ ಸಮಾಗಮ, ಅಯ್ಯಪ್ಪನ ಜನನ, ರಾಣಿಯ ಹೊಟ್ಟೆ ನೋವಿನ ನಾಟಕ, ಮಹಿಷಿಯ ಸಂಹಾರ ಶಬರಿಯ ಬೇಡಿಕೆ ಸೇರಿದಂತೆ ಅಯ್ಯಪ್ಪನ ಪೂರ್ಣ ಕಥೆಯನ್ನು ನಾಟಕ ಒಳಗೊಂಡಿತ್ತು . ಸೂತ್ರಧಾರನ ಮೂಲಕ ಕಥೆಯನ್ನು ಮುಂದುವರಿಸುವ ತಂತ್ರ ಅಳವಡಿಸಿಕೊಂಡಿದ್ದು ಸೂಕ್ತ ಎನಿಸಿತು. ಮಣಿಕಂಠ ಮತ್ತು ಮಹಿಷಿಯ ಯುದ್ಧದ ಸನ್ನಿವೇಶಗಳು ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸಿದ್ದವು. ಕೊನೆಯಲ್ಲಿ ಮಹಿಷಿ ಎರಡು ರೂಪ ತಳೆದು ಯುದ್ಧ ಮಾಡಿದ್ದು ಕಳೆ ಹೆಚ್ಚಿಸಿತು. ಹಲವು ಸಣ್ಣ ಸಣ್ಣ ದೃಶ್ಯಗಳು ಕೂಡ ಅತ್ಯಂತ ಪರಿಣಾಮಕಾರಿಯಾಗಿ ಮೂಡಿಬಂದು ಜನರಲ್ಲಿ ಕುತೂಹಲವನ್ನು ಕಾಯ್ದಿಟ್ಟುಕೊಳ್ಳುವಲ್ಲಿ ಯಶಸ್ವಿಯಾದವು. ಅಷ್ಟೂ ಪಾತ್ರಗಳಿಗೆ ಮುದ್ರಿತ ಧ್ವನಿಯನ್ನು ಬಳಸಿಕೊಂಡಿದ್ದು ಪ್ಲಸ್ ಪಾಯಿಂಟ್ ಎನಿಸಿತ್ತು. ಕೊನೆಯಲ್ಲಿ ಅಯ್ಯಪ್ಪನ ಗುಡಿಯ ದರ್ಶನ, ಮಾಲಾಧಾರಿಗಳ ಶರಣು ಘೋಷ ಮತ್ತು ಮಕರ ಜ್ಯೋತಿಯ ದರ್ಶನದ ಚಿತ್ರಣಗಳು ಜನರನ್ನು ಭಕ್ತಿಯ ಕಡಲಲ್ಲಿ ತೇಲುವಂತೆ ಮಾಡಿದವು. ಸನ್ನಿವೇಶಗಳಿಗೆ ಪೂರಕವಾಗಿ ವೈವಿಧ್ಯಮಯ ಸಂಗೀತವನ್ನು ಬಳಸಿಕೊಂಡಿದ್ದು ನಾಟಕದ ಅಂದವನ್ನು ಇನ್ನಷ್ಟು ಹೆಚ್ಚಿಸಿತು. ಬೆಳಕಿನ ಸಂಯೋಜನೆಯೂ ಪರಿಣಾಮಕಾರಿಯಾಗಿ ಮೂಡಿಬಂದಿತ್ತು. ಇರುವ ಸೀಮಿತ ಅವಕಾಶಗಳಲ್ಲಿ 40ಕ್ಕೂ ಅಧಿಕ ವಿದ್ಯಾರ್ಥಿಗಳ ತಂಡ ಮೂಲ ಕತೆಗೆ ಲೋಪ ಬರದಂತೆ ಜನರ ಕಣ್ಮನ ಸೆಳೆಯುವಂತೆ ಶ್ರೀ ಶಬರಿಮಲೆ ಸ್ವಾಮಿ ಅಯ್ಯಪ್ಪ ನಾಟಕವನ್ನು ಕಟ್ಟಿಕೊಟ್ಟ ರೀತಿಗೆ ಪ್ರೇಕ್ಷಕರಿಂದ ಭರಪೂರ ಪ್ರಶಂಸೆ ವ್ಯಕ್ತವಾಯಿತು. ಸಣ್ಣಪುಟ್ಟ ಲೋಪದೋಷಗಳು ನಗಣ್ಯ ಎನಿಸಿದವು.

ಇಡೀ ನಾಟಕದಲ್ಲಿ ವಿಶೇಷ ಹೈಲೈಟ್ ಎನಿಸಿದ್ದು, ಮಹಿಷಿ ಪಾತ್ರಧಾರಿ ಕ್ಷಮಾ ಆರ್ ಆಚಾರ್ಯ ಅವರ ಅಮೋಘ ನಿರ್ವಹಣೆ. ತಮ್ಮ ಅದ್ಭುತವಾದ ಹಾವಭಾವಗಳ ಮೂಲಕ ಅತ್ಯುತ್ತಮ ನಟಿಯಾಗುವ ಎಲ್ಲಾ ಲಕ್ಷಣವನ್ನು ತೋರಿ ವೀಕ್ಷಕರ ವಿಶೇಷ ಮೆಚ್ಚುಗೆಗೆ ಪಾತ್ರರಾದರು. ಸೂತ್ರದಾರನಾಗಿ ಸನ್ನಿಧಿ ಕರ್ಣಿಕ್, ಮಹಿಷಾಸುರನಾಗಿ ಮನಿಷಾ ಗಾಣಿಗ, ದುರ್ಗಾದೇವಿಯಾಗಿ ಖುಷಿ, ರಾಕ್ಷಸರಾಗಿ ಶರಣ್ ಎಸ್ ಪೂಜಾರಿ, ಯುವರಾಜ ಖಾರ್ವಿ ಮತ್ತು ರೋಹಿತ್ ಪೂಜಾರಿ ನಾರದನಾಗಿ ಶ್ರೀರಕ್ಷಾ ಶೆಣೈ, ಇಂದ್ರನಾಗಿ ನಿಖಿತ್ ಎಲ್ ಪೂಜಾರಿ ಪಂದಳ ರಾಜನಾಗಿ ಆದಿತ್ಯ ಎಸ್ ಪೂಜಾರಿ, ರಾಣಿಯಾಗಿ ಧನ್ಯ ಯು, ಮಣಿಕಂಠ ಪಾತ್ರಧಾರಿಯಾಗಿ ಪ್ರತೀಕ್ ಕೊಠಾರಿ, ಮಂತ್ರಿಯಾಗಿ ಶ್ರೇಷ್ಠ ಮೇಸ್ತ, ಗುರುಗಳ ಮಗನಾಗಿ ಜಯಶ್ರೀ, ನಕಲಿ ವೈದ್ಯನಾಗಿ ಶ್ರೇಯಲ್ ಚಂದದ ಅಭಿನಯ ನೀಡಿದರು.

ಉಳಿದಂತೆ ಪ್ರಜ್ವಲ್ ಡಿ ಪುತ್ರನ್, ಪ್ರೀತಮ್ ನಾಯಕ್, ಶಮಿತ್ ಖಾರ್ವಿ, ಪ್ರಜ್ಞಾ, ದೀಕ್ಷಿತಾ, ಜ್ಯೋತಿ ಆಚಾರ್ಯ, ವರ್ಷ, ನಿವೇದ್ಯ, ವಿನ್ಯಾಸ್, ಸ್ಪಂದನ ಮತ್ತು ಶಿವಾನಿ ಸಂಕೇತ ಖಾರ್ವಿ, ಭಾರತಿ, ಸಮೃದ್ಧಿ, ಮಾನ್ಯ ಜಿ, ಚಂದನ, ವಿಜೇತ, ಜಾಹ್ನವಿ, ನವ್ಯಶ್ರೀ ಕೋಟೆಗಾರ್, ನವ್ಯ ಮೊದಲಾದವರು ಭಾಗವಹಿಸಿದ್ದರು. ಹಿನ್ನೆಲೆಯಲ್ಲಿ ವೈದೇಹಿ ಆಚಾರ್ಯ, ವೀರೇಶ್ ಖಾರ್ವಿ, ಧನರಾಜ್, ಸೃಜನ್, ಬಾಲಾಜಿ ಖಾರ್ವಿ, ವಿಶ್ವಾಸ್, ಸುಜನ್ ಖಾರ್ವಿ ಮತ್ತು ಗೋಪಾಲ್ ಚಂದನ್ ಸಹಕರಿಸಿದರು. ಕಿರಣ್ ಕುಮಾರ್ ಕಲಾಕೃತಿ ತಂಡ ಪ್ರಸಾಧನ ಒದಗಿಸಿದ್ದರು. ಕೀಬೋರ್ಡ್ ನಲ್ಲಿ ಬಾಲ ಪ್ರತಿಭೆ ಸಂಜಿತ್ ಎಂ ದೇವಾಡಿಗ ಸಹಕರಿಸಿದರು. ಧ್ವನಿ ಮತ್ತು ಬೆಳಕನ್ನು ಕಾವೇರಿ ಸೌಂಡ್ಸ್ ಗಂಗೊಳ್ಳಿ ನೀಡಿದರು.

ನಾಟಕವನ್ನು ನೋಡಿ ಶಬರಿಮಲೆಗೆ ಹೋಗಿ ಬಂದಷ್ಟೇ ಆನಂದವಾಯಿತು, ನಿಜಕ್ಕೂ ಜೀವನ ಸಾರ್ಥಕ ಎನಿಸಿತು. ಎನ್ನುವಂತಹ ಹಲವು ಪ್ರೇಕ್ಷಕರ ಪ್ರತಿಕ್ರಿಯೆಗಳು ನಾಟಕದ ಅಭೂತಪೂರ್ವ ಯಶಸ್ವಿಗೆ ಕನ್ನಡಿ ಹಿಡಿದಿದ್ದವು. ಅತಿ ಕಡಿಮೆ ಅವಧಿಯಲ್ಲಿ 40 ಮಕ್ಕಳ ತಂಡವನ್ನು ಒಗ್ಗೂಡಿಸಿಕೊಂಡು ಪೌರಾಣಿಕ ಕಥೆಯೊಂದನ್ನು ಭಿನ್ನ ರೀತಿಯಲ್ಲಿ ಜನಮನ ಸೊರೆಗೊಳ್ಳುವಂತೆ ಪ್ರದರ್ಶಿಸುವಲ್ಲಿ ಅಪಾರ ಶ್ರಮ ವಹಿಸಿದ ನಿರ್ದೇಶಕ ನರೇಂದ್ರ ಎಸ್ ಗಂಗೊಳ್ಳಿ ಮತ್ತು ಅವರ ವಿದ್ಯಾರ್ಥಿ ತಂಡದ ಪರಿಶ್ರಮ ಶ್ಲಾಘ ನೀಯ. ಮಕ್ಕಳಲ್ಲಿ ನಮ್ಮ ಸಂಸ್ಕೃತಿಯ ಬಗೆಗೆ ಅರಿವು ಮೂಡಿಸುವಂತಹ ಇಂತಹ ನಡೆ ಎಲ್ಲರಿಗೂ ಮಾದರಿಯಾಗುವಂತದ್ದು. ಇಂತಹ ನಾಟಕಗಳು ಹೆಚ್ಚು ಹೆಚ್ಚು ವೇದಿಕೆಗಳಲ್ಲಿ ಪ್ರದರ್ಶನ ಗೊಳ್ಳುವಂತಾಗಲಿ. ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹ ಸಿಗಲಿ ಎನ್ನುವುದು ಆಶಯ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಥೊಲಿಕ್ ಸಭಾ ಉಡುಪಿ ಪ್ರದೇಶ: ಅನಾಥಾಶ್ರಮದಲ್ಲಿ ಕ್ರಿಸ್ಮಸ್ ಆಚರಣೆ

ಬ್ರಹ್ಮಾವರ, ಡಿ.23: ಕಥೊಲಿಕ್ ಸಭಾ ಉಡುಪಿ ಪ್ರದೇಶ ವತಿಯಿಂದ ಬ್ರಹ್ಮಾವರ ಸಮೀಪದ...

ಚಕೋರ – ಸಾಹಿತ್ಯ ವಿಚಾರ ವೇದಿಕೆ ಉಡುಪಿ ಉದ್ಘಾಟನೆ

ಹಿರಿಯಡ್ಕ, ಡಿ.23: ನಮ್ಮ ಪ್ರಜಾಸತ್ತೆಯ ಬದುಕಿಗೆ ದಾರಿದೀಪವಾದ ಸಂವಿಧಾನವನ್ನು ರಚಿಸಿಕೊಟ್ಟ ಬಾಬಾಸಾಹೇಬ್...

ಉಡುಪಿ: ಪ್ರವಾಸಿ ಸ್ಥಳಗಳಿಗೆ ಹಾಗೂ ಕಡಲ ತೀರಗಳಿಗೆ ಭೇಟಿ ನೀಡುವ ಪ್ರವಾಸಿಗರ ಜೀವ ರಕ್ಷಣೆ ಕುರಿತು ಮಾಹಿತಿ

ಉಡುಪಿ, ಡಿ.23: ಜಿಲ್ಲೆಗೆ ವಿವಿಧ ರಾಜ್ಯಗಳಿಂದ, ಜಿಲ್ಲೆಗಳಿಂದ ಪ್ರವಾಸಿಗರು ಹಾಗೂ ಶಾಲಾ...

ಉದ್ದಿಮೆದಾರರು ಜಿಲ್ಲೆಯಲ್ಲಿ ಕಿರು ಉದ್ಯಮಗಳ ಸ್ಥಾಪನೆಗೆ ಮುಂದಾಗಿ: ಸಂಸದ ಕೋಟಾ ಶ್ರೀನಿವಾಸ ಪೂಜಾರಿ

ಉಡುಪಿ, ಡಿ.23: ರೈತರನ್ನು ಉದ್ಯಮಿಗಳನ್ನಾಗಿ ಮಾಡಿ, ಅವರ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡಿ,...
error: Content is protected !!