Wednesday, December 18, 2024
Wednesday, December 18, 2024

ತಲ್ಲೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ದೊರೆತ ತಾಮ್ರ ಶಾಸನದ ಮರುಪರಿಶೀಲನೆ

ತಲ್ಲೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ದೊರೆತ ತಾಮ್ರ ಶಾಸನದ ಮರುಪರಿಶೀಲನೆ

Date:

ಉಡುಪಿ, ಡಿ.18: ಕುಂದಾಪುರ ತಾಲೂಕಿನ ತಲ್ಲೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿನ ತಾಮ್ರ ಶಾಸನವನ್ನು ಇಲ್ಲಿನ ಆಡಳಿತ ಮೊಕ್ತೇಸರರಾದ ತಲ್ಲೂರು ದೊಡ್ಡಮನೆ ಶ್ರೀ ವಸಂತ್ ಆರ್ ಹೆಗ್ಡೆ ಅವರ ಅನುಮತಿಯ ಮೇರೆಗೆ ಶ್ರೀನಿಕೇತನ ವಸ್ತುಸಂಗ್ರಹಾಲಯ ಮತ್ತು ಕೆಳದಿ ರಾಣಿ ಚೆನ್ನಮ್ಮಾಜಿ ಅಧ್ಯಯನ ಪೀಠ-ಕುಕ್ಕೆಸುಬ್ರಹ್ಮಣ್ಯ ಇಲ್ಲಿನ ನಿರ್ದೇಶಕರಾದ ಡಾ.ಜಿ.ವಿ ಕಲ್ಲಾಪುರ ಮತ್ತು ಉಪನಿರ್ದೇಶಕರಾದ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಮರು ಪರಿಶೀಲನೆಗೆ ಒಳಪಡಿಸಿರುತ್ತಾರೆ.

ಶೈವ ಸ್ತುತಿಯೊಂದಿಗೆ ಪ್ರಾರಂಭವಾಗುವ ಈ ತಾಮ್ರಶಾಸನವು ಕೆಳದಿ ದೊರೆ ಕಿರಿಯ ಬಸಪ್ಪ ನಾಯಕ (ಸಾ.ಶ.ವ 1740-55)ನ ಕಾಲಮಾನಕ್ಕೆ ಸೇರುತ್ತದೆ. ಕನ್ನಡ ಲಿಪಿಯ ಶಾಸನ ಇದಾಗಿದ್ದು ಮುಮ್ಮುಖದಲ್ಲಿ 27 ಸಾಲುಗಳು ಹಾಗೂ ಹಿಮ್ಮುಖದಲ್ಲಿ 13 ಸಾಲುಗಳನ್ನು ಒಳಗೊಂಡಿದ್ದು, ಕನ್ನಡ ಮತ್ತು ಸಂಸ್ಕೃತ ಭಾಷೆಯಲ್ಲಿ ಕೊರೆಯಲಾಗಿದೆ. ಶಾಲಿವಾಹನ ಶಕವರುಷ 1666ನೆಯ ರುಧಿರೋದ್ಗಾರಿ ಸಂವತ್ಸರದ ಆಷಾಢ ಬಹುಳ ಪಂಚಮಿಯಲ್ಲಿ (ಸಾ.ಶ.ವ 18 ಜುಲೈ 1744, ಬುಧವಾರ) ಕೆಳದಿ ಸದಾಶಿವರಾಯ ನಾಯಕರ ವಂಶೋಧ್ಭವರಾದ ಸೋಮಶೇಖರ ನಾಯಕ ಮತ್ತು ಚೆನ್ನಮ್ಮಾಜಿಯವರ ಮೊಮ್ಮಗರಾದ, ಹಿರಿಯ ಬಸವಪ್ಪ ನಾಯಕರ ಮಗ, ಸೋಮಶೇಖರ ನಾಯಕರ ಸಹೋದರ, ವೀರಭದ್ರ ನಾಯಕರ ಮಗ ಬಸವಪ್ಪ ನಾಯಕರು (ಕಿರಿಯ ಬಸಪ್ಪ ನಾಯಕರು) ತಮ್ಮ ತಾಯಿ ಮಲ್ಲಮ್ಮಾಜಿಯವರ ಹೆಸರಿನಲ್ಲಿ ಬಿದನೂರಿನ ಹೊಸಪೇಠೆಯಲ್ಲಿ ಡಂಬಳ ಮಠದ ಗುರುಗಳಾದ ಫಕೇರ ದೇವರಿಗೆ ಕಟ್ಟಿಸಿಕೊಟ್ಟ ಸ್ವತಂತ್ರ ಮಠಕ್ಕೆ ಬಿಟ್ಟ ಭೂದಾನ ಶಾಸನ ಇದಾಗಿದೆ. ಈ ಮಠಕ್ಕೆ ಸಂಬಂಧಪಟ್ಟ ಸಿಸ್ತು ಗ ||೧|೦ ಅಂದರೆ ಅರ್ಧ ಗದ್ಯಾಣ, ಒಂದು ಹಣ ಮತ್ತು ಒಂದು ಹಾಗ (ಈ ವಿಚಾರವು ಪ್ರೊ. ಜಿ.ಕೆ. ದೇವರಾಜಸ್ವಾಮಿ ಅವರ “ಅಧಿಷ್ಠಾನ’ ಕೃತಿಯಲ್ಲಿ ಉಲ್ಲೇಖವಿದೆ) ಇದನ್ನು ತೆರಿಗೆ ರಹಿತವಾಗಿ ನೀಡಿದ್ದು ಇದರ ಸಂಬಂಧ ಮಂತ್ರಿ ಗುರುವಪ್ಪನವರು ಹೇಳಿಕೊಂಡಾಗ ಈ ಶಾಸನವನ್ನು ಬರೆಸಿಕೊಡಲಾಗಿದೆ.

ಲಿಂಗಣ್ಣ ಕವಿಯ ‘ಕೆಳದಿನೃಪವಿಜಯಂ’ ಎಂಬ ಕಾವ್ಯದಲ್ಲಿ ಇದಕ್ಕೆ ಸಂಬಂಧಪಟ್ಟ ವಿವರಗಳಿದ್ದು, ವೇಣುಪುರ ಅಂದರೆ ಬಿದಿರೂರು ಮಧ್ಯದಲ್ಲಿದ್ದ ಬಾಳೆಯಕೊಪ್ಪದ ಪಶ್ಚಿಮ ದಿಕ್ಕಿನಲ್ಲಿ ಸ್ವತಂತ್ರವಾದ ಮಠವನ್ನು ಕಿರಿಯ ಬಸಪ್ಪ ನಾಯಕರು ಕಟ್ಟಿಸಿರುತ್ತಾರೆ. ಆ ಸ್ಥಳಕ್ಕೆ ‘ಭದ್ರರಾಜಪುರ’ ಎಂದು ಹೆಸರಿಟ್ಟು ಡಂಬಳದ ಸಿದ್ಧೇಶ್ವರ ದೇವರ ಗದ್ದುಗೆಯ ತೋಂಟದ ಸ್ವಾಮಿಗಳಿಗೆ ಈ ಮಠವನ್ನು ದಾನವಾಗಿ ನೀಡಿರುತ್ತಾರೆ. ಹಾಗಾಗಿ ಪತ್ತೆಯಾದ ಈ ಶಾಸನವು ಪ್ರಮುಖವಾಗಿ ಡಂಬಳ ಸಿದ್ಧೇಶ್ವರ ದೇವರ ಗದ್ದುಗೆ ಮಠಕ್ಕೆ ಬಿದಿರೂರಿನಲ್ಲಿ ಕೊಟ್ಟಿರುವ ಭೂ ದಾನ ಶಾಸನವಾಗಿದ್ದು, ಇದಕ್ಕೆ ಪೂರಕವಾಗಿ ಈಗಲೂ ಬಿದಿರೂರಿನಲ್ಲಿ (ನಗರ) ಮಠದ ಅವಶೇಷಗಳನ್ನು ಕಾಣಬಹುದು. ಶಾಸನದ ಕೊನೆಯಲ್ಲಿ ಶಾಪಾಶಯ ವಾಕ್ಯವಿದ್ದು ಕಿರಿಯ ಬಸಪ್ಪ ನಾಯಕರು ಶ್ರೀಮತು ಎಡವ ಮುರಾರಿ ಕೋಟೆಕೋಲಹಲ ವಿಶುದ್ಧ ವೈದಿಕಾದ್ವೈತ ಸಿದ್ಧಾಂತ ಪ್ರತಿಷ್ಠಾಪಕ ಶಿವಗುರು ಭಕ್ತಿ ಪರಾಯಣ ಮುಂತಾದ ಬಿರುದಾಂಕಿತರಾದ ತಮ್ಮ ವಂಶದ ಹಿರಿಯರಾದ ಕೆಳದಿ ಸದಾಶಿವರಾಯ ನಾಯಕರ ಹೆಸರಿನಲ್ಲಿ ದಾನ ನೀಡಿರುವುದು ತಿಳಿದುಬರುತ್ತದೆ.

ಕ್ಷೇತ್ರಕಾರ್ಯ ಶೋಧನೆಯಲ್ಲಿ ಶ್ರೀ ರಾಜೇಶ್ವರ ಉಪಾಧ್ಯಾಯ ಕಂಚಾರ್ತಿ ಹಾಗೂ ಶ್ರೀ ಮಂಜುನಾಥ ನಂದಳಿಕೆ ಅವರು ಸಹಕಾರ ನೀಡಿರುತ್ತಾರೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಡಾ. ನವೀನ್ ಸಾಲಿನ್ಸ್ ಅವರಿಗೆ ಲ್ಯಾಂಕಾಸ್ಟರ್ ವಿವಿಯ ಗೌರವ

ಮಣಿಪಾಲ, ಡಿ.18: ಯುಕೆಯ ಲ್ಯಾಂಕಾಸ್ಟರ್ ವಿಶ್ವವಿದ್ಯಾಲಯದಿಂದ ಡಿಸೆಂಬರ್ ನಲ್ಲಿ ನಡೆದ ಪದವಿ...

ಗೃಹರಕ್ಷಕ ದಳದವರ ಉತ್ತಮ ಕಾರ್ಯಕ್ಕೆ ಜಿಲ್ಲಾಧಿಕಾರಿ ಶ್ಲಾಘನೆ

ಉಡುಪಿ, ಡಿ.18: ತುರ್ತು ಸಂದರ್ಭ, ಪ್ರಾಕೃತಿಕ ವಿಕೋಪ ಸೇರಿದಂತೆ ಪೊಲೀಸ್ ಇಲಾಖೆಯ...

ಜನವರಿ 10 ರಿಂದ ಇಂದ್ರಾಳಿ ರೈಲ್ವೆ ಮೇಲ್ಸೇತುವೆ ವಾಹನ ಬಳಕೆಗೆ ಅನುವು ಮಾಡಿಕೊಡಿ: ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

ಉಡುಪಿ, ಡಿ.18: ರಾಷ್ಟೀಯ ಹೆದ್ದಾರಿಯ ಇಂದ್ರಾಳಿ ಬಳಿಯ ರೈಲ್ವೇ ಮೇಲ್ಸೇತುವೆ ಕಾಮಗಾರಿಯನ್ನು...

ಶ್ರೀ ನಂದಿಕೇಶ್ವರ ಗೆಳೆಯರ ಬಳಗ: 13ನೇ ವರ್ಷದ ಯಕ್ಷಸಂಭ್ರಮ

ಕೋಟ, ಡಿ.18: ಸಂಘಟನೆಗಳು ಸದೃಢವಾಗಿ ಸಂಘಟಿತ ಶಕ್ತಿಯಾಗಿ ಕಾರ್ಯನಿರ್ವಹಿಸಿದರೆ ಗ್ರಾಮಗಳು ಸುಭಿಕ್ಷೆಯಾಗುವುದರಲ್ಲಿ...
error: Content is protected !!