ಕಾಪು, ಅ.21: ಕಾಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪೋಷಕ- ಶಿಕ್ಷಕ ಸಮಿತಿಯ ಮಹಾಸಭೆಯಲ್ಲಿ ಆರ್ಯಭಟ ಪ್ರಶಸ್ತ್ರಿ ಪುರಸ್ಕೃತ, ಎಂ.ಐ.ಟಿ. ಮಣಿಪಾಲದಲ್ಲಿ ಸಹ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಬಾಲಕೃಷ್ಣಎಸ್ ಮಡ್ಡೋಡಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳಿಂದ ಹೆಚ್ಚು ನಿರೀಕ್ಷೆ ಮಾಡುತ್ತಾರೆ, ಆದರೆ ತಮ್ಮ ಮಕ್ಕಳ ಜೊತೆ ಸುಖ-ದು:ಖ ವಿಚಾರಿಸಲು ಸಮಯ ಮಾಡುತ್ತಿಲ್ಲ, ಎಲ್ಲವನ್ನೂ ಶಿಕ್ಷಕರಿಂದಲೇ ನಿರೀಕ್ಷೆ ಮಾಡದೇನೇ, ಕನಿಷ್ಠ ಒಂದು ಘಂಟೆಯಾದರೂ ತಮ್ಮ ಮಕ್ಕಳ ಜೊತೆ ಪ್ರತಿದಿನ ಮುಕ್ತವಾಗಿ ಕಳೆಯಬೇಕು, ಅವರ ಭಾವನೆಗಳಿಗೆ ಸ್ಪಂದಿಸಬೇಕು, ಮನೆಯಿಂದಲೇ ಇಂದಿನ ಜಗತ್ತು ನಿರೀಕ್ಷೆ ಮಾಡುವ ವಿವಿಧ ಕೌಶಲ್ಯಗಳನ್ನು ಬೆಳೆಸಲು ಮುನ್ನುಡಿ ಇಡಬೇಕು ಎಂದರು.
ಸಭೆಯ ಆಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ ಗೋಪಾಲಕೃಷ್ಣ ಎಂ ಗಾಂವ್ಕರ್ ವಹಿಸಿದ್ದರು. ಪೋಷಕ ಶಿಕ್ಷಕ ಸಮಿತಿಯ ಸಂಚಾಲಕರಾದ ಆಂಗ್ಲಭಾಷಾ ಮುಖ್ಯಸ್ಥರಾದ ದೀಪಿಕಾ ಸುವರ್ಣ ಸ್ವಾಗತಿಸಿದರು. ದೈಹಿಕ ಶಿಕ್ಷಣ ನಿರ್ದೇಶಕಿ ಸವಿತ ಅತಿಥಿಯನ್ನು ಪರಿಚಯಿಸಿದರು. ಸುನೀತಾ ವಂದಿಸಿದರು. ಐಕ್ಯೂಎಸಿ ಸಂಚಾಲಕರಾದ ಡಾ. ರೋಶ್ನಿ ಯಶವಂತ್, ಕಳೆದ ಸಾಲಿನ ಪೋಷಕ –ಶಿಕ್ಷಕ ಸಮಿತಿಯ ಅಧ್ಯಕ್ಷೆ ಸುಜಾತ ಹಾಗೂ ಕೋಶಾಧಿಕಾರಿಯಾದ ಬೇಬಿ ಉಪಸ್ಥಿತರಿದ್ದರು. ಭವ್ಯ ಕಾರ್ಯಕ್ರಮ ನಿರೂಪಿಸಿದರು. 2024-25ನೇ ಸಾಲಿನ ಪೋಷಕ –ಶಿಕ್ಷಕ ಸಮಿತಿಯ ಅಧ್ಯಕ್ಷರಾಗಿ ಸವಿತ ಸನಿಲ್, ಉಪಾಧ್ಯಕ್ಷರಾಗಿ ಸಮೀನಾ ಸತ್ತರ್, ಕಾರ್ಯದರ್ಶಿಯಾಗಿ ಅಶೋಕ ಸುವರ್ಣ ಹಾಗೂ ಖಜಾಂಚಿಯಾಗಿ ಶೈಲಜಾ ಕುಂದರ್ ಆಯ್ಕೆಯಾದರು.