ವಿದ್ಯಾಗಿರಿ, ಅ.15: ಇಂದಿನ ಕಾಲದಲ್ಲಿ ಅರ್ಥಪೂರ್ಣವಾದ ಶ್ರೇಷ್ಠ ಬದುಕನ್ನು ಬದುಕುವುದು ಸವಾಲಿನ ಕೆಲಸ. ಅಂತಹ ಸವಾಲನ್ನು ನಾವೆಲ್ಲ ಸ್ವೀಕರಿಸಬೇಕು ಎಂದು ಮಂಗಳೂರಿನ ಎಂಆರ್‌ಪಿಎಲ್- ಒಎನ್‌ಜಿಸಿ ಪ್ರಧಾನ ವ್ಯವಸ್ಥಾಪಕ (ಕಾರ್ಪೊರೇಟ್ ಸಂವಹನ) ಡಾ. ರೊಡಲ್ ನೊರಾನ್ಹಾ ಅಭಿಪ್ರಾಯಪಟ್ಟರು. ಆಳ್ವಾಸ್ ಕಾಲೇಜಿನ ಸಮಾಜಕಾರ್ಯ ವಿಭಾಗ ಮತ್ತು ಐಕ್ಯೂಎಸಿ ಆಶ್ರಯದಲ್ಲಿ ಕುವೆಂಪು ಸಭಾಂಗಣ ಮಂಗಳವಾರ ನಡೆದ ‘ಸ್ಫಟಿಕ’ ವೇದಿಕೆಯ 2024-25ರ ಶೈಕ್ಷಣಿಕ ವರ್ಷದ ಚಟುವಟಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮೊಳಗಿನ ಬ್ರಹ್ಮಾಂಡವನ್ನು ಅವಲೋಕಿಸುವ ರೀತಿಯಲ್ಲಿ ನಮ್ಮ ಮೌಲ್ಯಯುತ ಜೀವನ ನಿರ್ಧರಿತವಾಗಬೇಕು. ಸಾಮಾನ್ಯರಾಗಿ ಉಳಿಯುವವರು ಋಣಾತ್ಮಕ ವಿಚಾರಗಳಿಗೆ ಒತ್ತು ನೀಡಿದರೆ, ಅಸಾಮಾನ್ಯರು ಧನಾತ್ಮಕ ವಿಚಾರಗಳನ್ನು ಅನುಸರಿಸುತ್ತಾರೆ ಎಂದು ಅವರು ವಿವರಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಸಮಾಜ ಕಾರ್ಯವು ವಿದ್ಯಾರ್ಥಿಗಳಲ್ಲಿ ಅಂತರ್ಗತವಾಗಬೇಕು. ವಿದ್ಯಾರ್ಥಿ ಜೀವನದಲ್ಲಿ ದೊರಕುವ ಹಲವಾರು ವಿಷಯಗಳನ್ನು ಸದುಪಯೋಗಗೊಳಿಸಬೇಕು ಎಂದು ಅವರು ಹೇಳಿದರು. ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ಮನುಷ್ಯನ ಬಗ್ಗೆ ಯೋಚಿಸುವ ವೃತ್ತಿಯೇ ಸಮಾಜ ಕಾರ್ಯ. ನಾವು ಇನ್ನೊಬ್ಬರ ಬಗ್ಗೆ ಯೋಚನೆ ಮಾಡಲು ಆರಂಭಿಸಿದಾಗ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ಹೇಳಿದರು. ಕಾಲೇಜಿನ ಆಡಳಿತ ಅಧಿಕಾರಿ ಬಾಲಕೃಷ್ಣ ಶೆಟ್ಟಿ ಮಾತನಾಡಿ ಜೀವನವು ಜನನದಿಂದ ಮರಣದವರೆಗೂ ಹೊಸ ವಿಷಯಗಳನ್ನು ಕಲಿಯುವ ಪ್ರಕ್ರಿಯೆ ಎಂದರು.
ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಡಾ. ಮಧುಮಾಲ ಕೆ., ಸ್ಫಟಿಕ ವೇದಿಕೆ ಸಂಯೋಜಕಿ ಡಾ. ಪವಿತ್ರಾ ಪ್ರಸಾದ್ ಇದ್ದರು. ಸ್ಫಟಿಕ ವೇದಿಕೆಯ ಅಧ್ಯಕ್ಷ ಆನ್ಸನ್ ಪಿಂಟೊ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಲೋಯಿಸ್ ಆನ್ನ ಸಾಬು ಹಾಗೂ ಅಬ್ದುಲ್ ರಹಿಮಾನ್ ಕಾರ್ಯಕಮ್ರ ನಿರೂಪಿಸಿದರು. ಸರ್ವೇಶ್ ವಂದಿಸಿದರು.