Saturday, October 12, 2024
Saturday, October 12, 2024

ನವರಾತ್ರಿ

ನವರಾತ್ರಿ

Date:

ಹಿಂದೂಗಳು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ನವರಾತ್ರಿಯು ಒಂದು. “ನವರಾತ್ರಿ” ಎಂಬ ಪದವು “ನವ” ಅಂದರೆ ಒಂಬತ್ತು ಮತ್ತು “ರಾತ್ರಿ” ಎಂಬ ಪದಗಳಿಂದ ನಿಷ್ಪನ್ನಗೊಂಡಿದೆ. ಇದು ದುರ್ಗಾದೇವಿಯ ವಿವಿಧ ರೂಪಗಳಿಗೆ ಮೀಸಲಾದ ಒಂಬತ್ತು ದಿನಗಳ ಆರಾಧನೆಯನ್ನು ಸೂಚಿಸುತ್ತದೆ. ಈ ಹಬ್ಬವು ದುಷ್ಟಶಕ್ತಿಗಳ ವಿರುದ್ಧದ ವಿಜಯವನ್ನು ಪ್ರತಿನಿಧಿಸುತ್ತದೆ. ನವರಾತ್ರಿಯನ್ನು ಭಾರತದಾದ್ಯಂತ ಆಚರಿಸಲಾಗುತ್ತದೆಯಾದರೂ, ಪ್ರದೇಶದಿಂದ ಪ್ರದೇಶಕ್ಕೆ ಆಚರಣೆಗಳು, ಸಂಪ್ರದಾಯಗಳು ಮತ್ತು ಪದ್ಧತಿಗಳು ವ್ಯಾಪಕವಾಗಿ ಬದಲಾಗಿರುತ್ತದೆ.

ನವರಾತ್ರಿಯ ಪೌರಾಣಿಕ ಹಿನ್ನೆಲೆಯನ್ನು ಗಮನಿಸುವುದಾದರೆ ಇದು ದುರ್ಗಾದೇವಿ ಮತ್ತು ಮಹಿಷ ಎಂಬ ಅಸುರನ ಯುದ್ಧದ ಸುತ್ತ ಸುತ್ತುತ್ತದೆ. ದಂತಕಥೆಯ ಪ್ರಕಾರ, ಪ್ರಬಲ ಅಸುರನಾಗಿದ್ದ ಮಹಿಷನಿಗೆ ಬ್ರಹ್ಮದೇವನು ಯಾವುದೇ ಪುರುಷರ ವಿರುದ್ಧ ಅಜೇಯನಾಗುವ ವರವನ್ನು ನೀಡಿದ್ದನು. ಈ ವರದಿಂದಾಗಿ ಬಲಿಷ್ಠಗೊಂಡಿದ್ದ ಆತನು ಆಕಾಶ ಮತ್ತು ಭೂಮಿಯ ಮೇಲೆ ವಿನಾಶಕ ಕೃತ್ಯಗಳನ್ನು ನಡೆಸತೊಡಗಿದಾಗ ಆತನನ್ನು ಯಾವುದೇ ಪುರುಷ ದೇವರುಗಳು ತಡೆಯಲು ಸಾಧ್ಯವಾಗಲಿಲ್ಲ. ಇದರಿಂದ ಚಿಂತೆಗೊಳಗಾದ ದೇವರುಗಳು ಸರ್ವೋಚ್ಛ ಸ್ತ್ರೀ ಶಕ್ತಿಯ ಕಡೆಗೆ ತಿರುಗಿದರು. ಮಹಿಷಾಸುರನನ್ನು ಸೋಲಿಸಲು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಸಂಯೋಜಿತ ಶಕ್ತಿಗಳಿಂದ ದುರ್ಗಾದೇವಿಯ ಪರಮ ರೂಪವು ಸೃಷ್ಟಿಯಾಗಿ, ಒಂಬತ್ತು ಹಗಲು ರಾತ್ರಿಗಳ ಭೀಕರ ಯುದ್ಧವು ನಡೆಯುತ್ತದೆ. ನಂತರ, ಅಂತಿಮವಾಗಿ ಹತ್ತನೇ ದಿನ ದುರ್ಗಾದೇವಿಯ ಮಹಿಷಾಸುರನನ್ನು ಸೋಲಿಸಿ ವಧಿಸಿದಳು. ಹೀಗಾಗಿ ಈ ದಿನವನ್ನು ವಿಜಯದಶಮಿ ಅಥವಾ ದಸರಾ ಎಂದು ಆಚರಿಸಲಾಗುತ್ತದೆ.

ನವರಾತ್ರಿಯು ಕೇವಲ ಒಂದು ಧಾರ್ಮಿಕ, ಸಾಂಸ್ಕೃತಿಕ ಆಚರಣೆಯಾಗಿ ಉಳಿಯದೆ ಅದು ದುರ್ಗಾದೇವಿಯ ಹಾಗೂ ರಾಮಾಯಣದ ರಾಮ – ರಾವಣರ ಕಥೆಯನ್ನು ಜನರ ಮುಂದೆ ಪದೇ ಪದೇ ತೆರೆದಿಡುವುದರ ಮೂಲಕ ಸತ್ಯದ ಜಯ, ಧರ್ಮದ ಸ್ಥಾಪನೆ ಹಾಗೂ ಒಳ್ಳೆಯತನದ ಮರುಸ್ಥಾಪನೆ ಮತ್ತು ಮೇಲುಗೈಯನ್ನು ಒತ್ತಿ ತೋರಿಸುವುದಷ್ಟೇ ಅಲ್ಲದೆ, ಜನರನ್ನೂ ಸಹ ಒಳ್ಳೆಯ ದಾರಿಯಲ್ಲಿ ಒಳ್ಳೆಯ ಕರ್ಮಗಳನ್ನು ಮಾಡುವಂತೆ ಪ್ರೇರೇಪಿಸುತ್ತದೆ.

ನವರಾತ್ರಿಯು ಸಾಂಸ್ಕೃತಿಕ ವೈವಿಧ್ಯತೆ ಮತ್ತು ಏಕತೆಯ ಪ್ರತಿಬಿಂಬವೂ ಆಗಿದೆ. ನವರಾತ್ರಿ ಹಬ್ಬವನ್ನು ಆಚರಿಸುವ ವಿಧಾನವು ದೇಶದ ವಿವಿಧ ಭಾಗಗಳಲ್ಲಿ ಭಿನ್ನವಾಗಿರುತ್ತದೆ. ಉತ್ತರ ಭಾರತದಲ್ಲಿ ನವರಾತ್ರಿಯು ರಾಮಾಯಣದೊಂದಿಗೆ ನಿಕಟ ಸಂಬಂಧ ಹೊಂದಿದೆ. ಈ ಸಮಯದಲ್ಲಿ ರಾಮಾಯಣದ ದೃಶ್ಯ ಭಾಗಗಳ ನಾಟಕಗಳಾದ “ರಾಮ್ ಲೀಲಾ” ಪ್ರದರ್ಶನಗಳನ್ನು ಅಲ್ಲಿನ ಪಟ್ಟಣಗಳು ಮತ್ತು ಹಳ್ಳಿಗಳಲ್ಲಿ ಮಾಡಲಾಗುತ್ತದೆ. ಈ ಹಬ್ಬವು ದಸರಾದ ಹತ್ತನೇ ದಿನವಾದ ವಿಜಯದಶಮಿಯಂದು ಪರಾಕಾಷ್ಠೆಯನ್ನು ತಲುಪುತ್ತದೆ. ರಾಮನ ವೇಷಧಾರಿಯು ದುಷ್ಟತನವನ್ನು ಸಂಕೇತಿಸುವ ರಾವಣನ ಪ್ರತಿಕೃತಿಗಳನ್ನು ಬೆಂಕಿಯ ಬಾಣದಿಂದ ಸುಡುತ್ತಾನೆ ಹಾಗೂ ಈ ಮೂಲಕ ರಾವಣನ ಮೇಲಿನ ರಾಮನ ವಿಜಯವನ್ನು ಧರ್ಮದ ಮರುಸ್ಥಾಪನೆ ಎಂದು ಜನರು ನಂಬುತ್ತಾರೆ.

ಪಶ್ಚಿಮ ಬಂಗಾಳ ಮತ್ತು ನೆರೆಯ ದೇಶವಾಗಿರುವ ಬಾಂಗ್ಲಾದೇಶ ಮತ್ತು ಇತರ ಪೂರ್ವದ ರಾಜ್ಯಗಳಲ್ಲಿ, ನವರಾತ್ರಿಯನ್ನು ದುರ್ಗಾ ಪೂಜೆ ಎಂದು ಆಚರಿಸಲಾಗುತ್ತದೆ. ಈ ಪ್ರದೇಶಗಳಲ್ಲಿ ದುರ್ಗಾದೇವಿಯ ದೈತ್ಯಾಕಾರದ ವಿಗ್ರಹಗಳು ಹಾಗೂ ಅವಳ ಮಕ್ಕಳಾದ ಲಕ್ಷ್ಮೀ, ಸರಸ್ವತಿ, ಗಣೇಶ ಮತ್ತು ಕಾರ್ತಿಕೇಯರ ಜೊತೆಗೆ ಪರಿವಾರ ದೇವರುಗಳ ಸಂಕೀರ್ಣವಾದ ವಿವರಗಳೊಂದಿಗೆ ವಿಗ್ರಹಗಳನ್ನು ಸಾರ್ವಜನಿಕ ಪೆಂಡಾಲ್ಗಳಲ್ಲಿ (ತಾತ್ಕಾಲಿಕ ರಚನೆಗಳು) ಇರಿಸಲಾಗುತ್ತದೆ. ಕೊನೆಯ ದಿನದಲ್ಲಿ ವಿಗ್ರಹಗಳನ್ನು ನದಿ ಅಥವಾ ಸಮುದ್ರದಲ್ಲಿ ವಿಸರ್ಜಿಸುವ ಮೂಲಕ ದುರ್ಗೆಯು ಸ್ವರ್ಗೀಯ ನಿವಾಸಕ್ಕೆ ಮರಳಿದಳು ಎಂದು ಸಾಂಕೇತಿಕವಾಗಿ ಪೂಜೆಯನ್ನು ಕೊನೆಗೊಳಿಸುತ್ತಾರೆ.

ದಕ್ಷಿಣ ಭಾರತದ ರಾಜ್ಯಗಳಲ್ಲಿ, ನವರಾತ್ರಿಯು ಹೆಚ್ಚು ಕಲಾತ್ಮಕ ರೂಪವನ್ನು ಪಡೆದುಕೊಳ್ಳುತ್ತದೆ. ಈ ರಾಜ್ಯಗಳಲ್ಲಿ ದಸರಾ ಹಬ್ಬದ ಕೊನೆಯ ಮೂರು ದಿನಗಳು ಜ್ಞಾನ ಮತ್ತು ಕಲೆಗಳ ದೇವತೆಯಾದ ಸರಸ್ವತಿಗೆ ಸಮರ್ಪಿತ. ತಮಿಳುನಾಡು, ಕರ್ನಾಟಕ ಮತ್ತು ಆಂಧ್ರಪ್ರದೇಶ ಇಂತಹ ರಾಜ್ಯಗಳ ಕೆಲವು ಭಾಗದ ಜನರು ತಮ್ಮ ಮನೆಗಳಲ್ಲಿ ಗೊಂಬೆಗಳು ಮತ್ತು ಪ್ರತಿಮೆಗಳ ಪ್ರದರ್ಶನವನ್ನು ಸ್ಥಾಪಿಸುತ್ತಾರೆ. ಈ ಪ್ರದರ್ಶನಗಳು ಸಾಮಾನ್ಯವಾಗಿ ಪುರಾಣ, ದೈನಂದಿನ ಜೀವನದ ದೃಶ್ಯಗಳನ್ನು ಬಿಂಬಿಸುತ್ತದೆ. ಈ ದಿನಗಳಲ್ಲಿ ಶಾರದಾ ಪೂಜೆಯನ್ನು ಏರ್ಪಡಿಸಲಾಗುತ್ತದೆ. ನವರಾತ್ರಿಯ ಒಂಬತ್ತನೇ ದಿನದಂದು ಆಯುಧ ಪೂಜೆಯನ್ನು ಆಚರಿಸುತ್ತಾರೆ ಅಂದಿನ ದಿನ ಜನರು ತಮ್ಮ ಕೃಷಿ ಉಪಕರಣಗಳು, ವಾಹನಗಳು ಹಾಗೂ ಇನ್ನಿತರ ದೈನಂದಿನ ಜೀವನದಲ್ಲಿ ಬಳಸುವ ಉಪಕರಣಗಳನ್ನು ಶುದ್ಧಿಗೊಳಿಸಿ ಪೂಜಿಸುತ್ತಾರೆ.

ನವರಾತ್ರಿಯ ಸಂದರ್ಭದಲ್ಲಿ ಹೆಚ್ಚಿನ ಭಕ್ತರು ಒಂಬತ್ತು ದಿನಗಳ ಕಾಲ ಹಣ್ಣು, ಹಾಲು ಮತ್ತು ಸರಳವಾದ ಆಹಾರವನ್ನು ಮಾತ್ರ ಸೇವಿಸುತ್ತಾರೆ. ಏಕೆಂದರೆ ಇಂತಹ ಆಹಾರ ಸೇವನೆಯು ದೇಹ, ಮನಸ್ಸು ಮತ್ತು ಆತ್ಮವನ್ನು ಶುದ್ಧೀಕರಿಸುವ ಒಂದು ಸಾಧನವೆಂಬ ನಂಬಿಕೆ. ನವರಾತ್ರಿಯ ಈ ಸಂದರ್ಭದಲ್ಲಿ ಜನರು ದೇವಿಯನ್ನು ಪ್ರಾರ್ಥನೆ, ಭಕ್ತಿಗೀತೆ ಮತ್ತು ಸ್ತೋತ್ರಗಳನ್ನು ಸ್ತುತಿಸುವ ಮೂಲಕ ಆಯುರಾರೋಗ್ಯ, ಸುಖ-ಸಂಪತ್ತು ಮತ್ತು ರಕ್ಷಣೆಗಾಗಿ ಅವಳ ಆಶೀರ್ವಾದವನ್ನು ಪಡೆಯುತ್ತಾರೆ.

ನವರಾತ್ರಿಯು ಧಾರ್ಮಿಕವಾಗಿ ಮಾತ್ರವಲ್ಲದೇ ಸಾಮಾಜಿಕವಾಗಿಯೂ ಆಯಾಮವನ್ನೂ ಹೊಂದಿದೆ ಎಂದರೆ ತಪ್ಪಾಗಲಾರದು, ನವರಾತ್ರಿ ಹಬ್ಬವನ್ನು ಕುಟುಂಬ ಸದಸ್ಯರೆಲ್ಲಾ ಒಂದೇ ಸೂರಿನಡಿ ಆಚರಿಸುವುದು ಹಿರಿಯರಿಂದ ಹಾಗೂ ಹಿಂದಿನ ಕಾಲದಿಂದ ಬಂದಂತಹ ರೂಢಿ. ಈ ಹಬ್ಬವು ಜನರು ಒಟ್ಟಿಗೆ ಸೇರಲು ಮತ್ತು ಅವರ ಹಂಚಿಕೆಯ ಪರಂಪರೆಯನ್ನು ಆಚರಿಸಲು ಅವಕಾಶವನ್ನು ಒದಗಿಸುತ್ತದೆ. ಹೆಚ್ಚುತ್ತಿರುವ ಜಾಗತೀಕರಣಗೊಂಡ ಜಗತ್ತಿನಲ್ಲಿ, ಸಂಪ್ರದಾಯಗಳು ಸಾಮಾನ್ಯವಾಗಿ ಮರೆಯಾಗಬಹುದು, ಆದರೆ ನವರಾತ್ರಿಯು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಸಂಕೇತವಾಗಿ ದೃಢವಾಗಿ ನಿಂತಿದೆ.

ವಿಶಾಲ್ ರೈ ಕೆ

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಉಡುಪಿ ಶ್ರೀ ಲಕ್ಷ್ಮಿ ವೆಂಕಟೇಶ ದೇವಸ್ಥಾನ: ಶಾರದಾ ದೇವಿ ಸನ್ನಿಧಿಯಲ್ಲಿ ದೀಪಾರಾಧನೆ

ಉಡುಪಿ, ಅ.12: ಉಡುಪಿ ತೆಂಕಪೇಟೆಯ ಶ್ರೀ ಲಕ್ಷ್ಮಿ ವೆಂಕಟೇಶ ದೇವಸ್ಥಾನದಲ್ಲಿ ಜಿ.ಎಸ್.ಬಿ...

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮಲ್ಪೆ: ನವರಾತ್ರಿ ವಿಶೇಷ ಕಾರ್ಯಕ್ರಮ

ಮಲ್ಪೆ, ಅ.12: ಮಲ್ಪೆಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಪರ್ವಕಾಲದಲ್ಲಿ ವಿಶೇಷ...

ನವಶಕ್ತಿ

ಹಿಂದೂ ಹಬ್ಬಗಳಲ್ಲಿ ನವರಾತ್ರಿಯು ಪ್ರಸಿದ್ಧವಾದ ಹಬ್ಬವಾಗಿದೆ. ನವರಾತ್ರಿಯು ಪಾರ್ವತಿ ದೇವಿಯ ಒಂಬತ್ತು...

ಟಾಟಾ ಟ್ರಸ್ಟ್‌ನ ಅಧ್ಯಕ್ಷರಾಗಿ ನೋಯೆಲ್ ಟಾಟಾ ನೇಮಕ

ಮುಂಬಯಿ, ಅ.11: ಟಾಟಾ ಗ್ರೂಪ್‌ನ ಅಂಗವಾದ ಟಾಟಾ ಟ್ರಸ್ಟ್‌ನ ಅಧ್ಯಕ್ಷರಾಗಿ ನೋಯೆಲ್...
error: Content is protected !!