ಉಡುಪಿ, ಜು.12: ಜನಸಾಮಾನ್ಯರು ಜನಸ್ಪಂದನ ಕಾರ್ಯಕ್ರಮದಲ್ಲಿ ನೀಡಿರುವ ಅಹವಾಲುಗಳನ್ನು ಕಾಲಮಿತಿಯೊಳಗೆ ನಿಯಮಾನುಸಾರ ಇತ್ಯರ್ಥಪಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು. ಅವರು ಶುಕ್ರವಾರ ಕಾರ್ಕಳದ ಪೆರ್ವಾಜೆ ಶ್ರೀ ನಾರಾಯಣಗುರು ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲೂಕು ಆಡಳಿತ, ತಾಲೂಕು ಪಂಚಾಯತ್ ಹಾಗೂ ಪುರಸಭೆ ಕಾರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಕಳ ತಾಲೂಕು ಮಟ್ಟದ ಜನಸ್ಪಂದನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಸಾರ್ವಜನಿಕರಿಂದ ಸ್ಪೀಕೃತಗೊಂಡ ಅರ್ಜಿಯನ್ನು ಅಲ್ಪಕಾಲದಲ್ಲಿಯೇ ಪರಿಹಾರ ಒದಗಿಸಲಾಗುವುದು. ಅಲ್ಲದೇ ಯಾವ ಕ್ರಮಗಳನ್ನು ಕೈಗೊಂಡಿದ್ದಾರೆ ಎಂಬುದನ್ನು ಜನರು ಆನ್‌ಲೈನ್ ಮೂಲಕ ಪರಿಶೀಲಿಸಲು ಅನುಕೂಲವಾಗುವಂತೆ ಐ.ಪಿ.ಜಿ.ಆರ್.ಎಸ್‌ನಲ್ಲಿ ಅಪ್‌ಲೋಡ್ ಮಾಡಲಾಗುವುದು ಎಂದ ಅವರು, ಅನುದಾನ ಹಾಗೂ ಇನ್ನಿತರ ರಾಜ್ಯ ಮಟ್ಟದಲ್ಲಿ ಬಗೆಹರಿಯುವಂತಹ ಸಮಸ್ಯೆಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ
ಸಲ್ಲಿಸಲಾಗುವುದು ಹಾಗೂ ಸ್ಥಳೀಯವಾಗಿ ಬಗೆಹರಿಯುವಂತಹ ಸಮಸ್ಯೆಗಳಿಗೆ ಶೀಘ್ರವಾಗಿ ಪರಿಹಾರ ಒದಗಿಸಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಕಾರ್ಕಳ ಶಾಸಕ ಸುನಿಲ್ ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರತೀಕ್ ಬಾಯಲ್, ಎಸ್‌ಪಿ ಡಾ. ಅರುಣ್ ಕೆ, ಡಿಎಫ್‌ಓ ಗಣಪತಿ, ಎಎಸ್‌ಪಿ ಸಿದ್ದಲಿಂಗಪ್ಪ, ಸಹಾಯಕ ಕಮೀಷನರ್ ರಶ್ಮಿ, ತಹಶೀಲ್ದಾರ್ ನರಸಪ್ಪ, ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ 92 ಅರ್ಜಿಗಳು ಸಲ್ಲಿಕೆಯಾಗಿದ್ದು, ಕಂದಾಯ ಇಲಾಖೆಯ 30, ಪುರಸಭೆಯ 4, ಸಮಾಜ ಕಲ್ಯಾಣ -6, ತಾಲೂಕು ಪಂಚಾಯತ್‌ನ -24, ಮೆಸ್ಕಾಂನ -1, ಆರ್.ಎಫ್.ಓ-3, ಪಶುಸಂಗೋಪನಾ ಇಲಾಖೆಯ-1, ಸಣ್ಣ ನೀರಾವರಿ ಇಲಾಖೆಯ-2, ಪೊಲೀಸ್ ಇಲಾಖೆಯ-5, ಭೂ ವಿಜ್ಞಾನ ಇಲಾಖೆಯ-1, ತಾಲೂಕು ಆರೋಗ್ಯಾಧಿಕಾರಿ-2, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ-1, ಆಹಾರ ಇಲಾಖೆಯ-3, ಪ್ರವಾಸೋದ್ಯಮ ಇಲಾಖೆಯ-1, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ-1, ಪಿ.ಡಬ್ಲೂö್ಯಡಿಯ-2, ಕರಕೌಶಲ್ಯ-1, ಕೆ.ಎಸ್.ಆರ್.ಟಿ.ಸಿ ಯ -2, ಆರ್.ಟಿ.ಓ-2 ಅರ್ಜಿಗಳು ಸಲ್ಲಿಕೆಯಾಗಿದ್ದವು. ಕಾರ್ಕಳ ತಾಲೂಕಿನ ನಂದಳಿಕೆ ಗ್ರಾಮದಲ್ಲಿ ಲತಾ ಅವರು, ನಾನು ಸುಮಾರು ವರ್ಷಗಳಿಂದ ತಗಡು ಶೀಟಿನ ಮನೆಯಲ್ಲಿ ವಾಸವಿದ್ದು ಆದರೆ ಇಲ್ಲಿಯವರೆಗೆ ವಾಸದ ಮನೆಗೆ ಡೋರ್ ನಂಬರ್ ಹಾಗೂ ವಿದ್ಯುತ್‌ಚಕ್ತಿ ವ್ಯವಸ್ಥೆ ಲಭಿಸಿಲ್ಲ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದ್ದು, ಪ್ರಸ್ತುತ ಈ ತೊಂದರೆಯಿಂದ ಬಾಡಿಗೆ ಮನೆಯಲ್ಲಿ ವಾಸವಿದ್ದು, ವಾಸಿಸಲು ಅನುಕೂಲವಾಗುವಂತೆ ಡೋರ್ ನಂಬರ್ ಹಾಗೂ ವಿದ್ಯುತ್‌ಚಕ್ತಿಯನ್ನು ಒದಗಿಸುವಂತೆ ಸಲ್ಲಿಸಲಾದ ಅರ್ಜಿಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ, ವಿದ್ಯುತ್ ಸಂಪರ್ಕವನ್ನು ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕರ್ನಾಟಕ ಭೋವಿ ವಡ್ಡರ ಕ್ಷೇಮಾಭಿವೃದ್ಧಿ ಸಂಘದಿಂದ ಬಂದ ಅರ್ಜಿಯಂತೆ ಜಿಲ್ಲೆಯಲ್ಲಿ ಭೋವಿ ವಡ್ಡರ ಸಮಾಜದ ಜನಸಂಖ್ಯೆ ಸುಮಾರು 20000 ಇದ್ದು, ಇದರಲ್ಲಿ 8 ಸಾವಿರದಿಂದ 10 ಸಾವಿರ ಜನರು ನಮ್ಮ ಕುಲಕಸುಬಾದ ಕಲ್ಲು ಒಡೆಯುವ ಕೆಲಸವನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಈಗಾಗಲೇ ಪರವಾನಿಗೆ ಇರುವ ಬೇರೆ ಬೇರೆ ಕಲ್ಲುಕೋರೆಗಳಲ್ಲಿ ಕೆಲಸ ಮಾಡುತ್ತಿದ್ದು, ನಮ್ಮ ಕುಲಕಸುಬನ್ನು ಸ್ವಂತವಾಗಿ ಮಾಡಲು ಇರುವಂತಹ ಯಾವುದಾದರೂ ಪರವಾನಿಗೆ ನೀಡಬಹುದಾದ ಬಂಡೆಗಳನ್ನು ನಮ್ಮವರಿಗೆ ಗಣಿ ಇಲಾಖೆಯ ಮೂಲಕ ಪರವಾನಿಗೆ ನೀಡಿವಂತೆ ಸಲ್ಲಿಸಲಾದ ಅರ್ಜಿಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ, ಅರ್ಜಿಗಳನ್ನು ಪರಿಶೀಲಿಸಿ ಪರವಾನಿಗೆ ನೀಡವಂತೆ ಗಣಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ ಅವರು ಬಂಡೆ ಒಡೆಯುವ ಸಂದರ್ಭದಲ್ಲಿ ಬ್ಲಾಸ್ಟ್ ಮಾಡದಂತೆ ಸೂಚನೆ ನೀಡಿದರು. ಕಾರ್ಕಳ ತಾಲೂಕು ಇನ್ನಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಣ್ಣಾಜಿಗೋಳಿ ಪ್ರದೇಶದಲ್ಲಿರುವ ಸುಮಾರು 2 ಕಿ.ಮೀ ರಸ್ತೆಯು ಸಂಪೂರ್ಣ ದುರಸ್ತಿಯಲ್ಲಿದ್ದು, ಜನ ಹಾಗೂ ವಾಹನ ಸಂಚಾರಕ್ಕೆ ತುಂಬಾ ಅನಾನುಕೂಲವಾಗಿರುತ್ತದೆ.
ರಸ್ತೆಯು ಕಾರ್ಕಳ ಪಡುಬಿದ್ರೆ ರಾಜ್ಯ ಹೆದ್ದಾರಿಯ ಸನಿಹದಲ್ಲಿದ್ದು ರಾಜ್ಯಹೆದ್ದಾರಿಯನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾಗಿರುತ್ತದೆ. ರಸ್ತೆಯ ಅಭಿವೃದ್ಧಿ ಕಾಮಗಾರಿಗಾಗಿ ಸುಮಾರು 25 ಲಕ್ಷ ರೂ. ಅನುದಾನವನ್ನು ಮೀಸಲಿರಿಸಿ ರಸ್ತೆ ಕಾಮಗಾರಿಯನ್ನು ಅನುಷ್ಠಾನಗೊಳಿಸಬೇಕಾಗಿ ಸಲ್ಲಿಸಲಾದ ಅರ್ಜಿಗೆ ಉತ್ತರಿಸಿದ ಜಿಲ್ಲಾಧಿಕಾರಿ, ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು. ಕಾರ್ಕಳ ತಾಲೂಕಿನ ಸಾವಿತ್ರಿ ಹರೀಶಕುಮಾರ್ ಅವರು, ನಾನು 8 ತಿಂಗಳ ಹಿಂದೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಸ್ವ-ಉದ್ಯೋಗ ನಿಮಿತ್ತ ಅರ್ಜಿ ಸಲ್ಲಿಸಿದ್ದು, ಈವರೆಗೂ ಯಾವುದೇ ಪ್ರತಿ ಉತ್ತರ ಬಂದಿರುವುದಿಲ್ಲ, ನನ್ನ ಸ್ವ-ಉದ್ಯೋಗ ಅರ್ಜಿಯನ್ನು ಶೀಘ್ರದಲ್ಲೇ ಮಂಜೂರು ಮಾಡುವಂತೆ ಸಲ್ಲಿಸಲಾದ ಅರ್ಜಿಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ, ಅವರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಿ, ನಂತರ ಸ್ವ-ಉದ್ಯೋಗ ಕಲ್ಪಿಸಿಕೊಳ್ಳಲು ಕ್ರಮ
ಕೈಗೊಳ್ಳುವಂತೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಾಳ ಗ್ರಾಮದ ಪೇರಡ್ಕ ಗುಡ್ಡೆಮನೆ ವಾಸಿ ಸುಜಾತ ಅವರು, ದನಕರುಗಳಿಂದ ವಾಹನ ಸಂಚಾರಕ್ಕೆ ತೊಂದರೆಯುಂಟಾಗುತ್ತಿದ್ದು, ಅವುಗಳಿಗೆ ಸುಸಜ್ಜಿತ ಗೋಶಾಲೆಯನ್ನು ನಿರ್ಮಿಸಿ, ಅಗತ್ಯವಿರುವ ಸೌಲಭ್ಯ ಕಲ್ಪಿಸುವಂತೆ ಮನವಿ ಸಲ್ಲಿಸಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಪಶು ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮವಹಿಸುವಂತೆ ತಿಳಿಸಿದರು. ಮಾಳ ಗ್ರಾಮದ ಮಲೆಕುಡಿಯ ಗಿರಿಜನ ಕಾಲೋನಿಯ ಗೋವಿಂದ ಗೌಡ ಅವರು, ಗಿರಿಜನ ಕಾಲೋನಿಗೆ ರಸ್ತೆ ಹಾಗೂ ಚರಂಡಿಯನ್ನು ನಿರ್ಮಿಸಿಕೊಡುವಂತೆ ಪಂಚಾಯತ್‌ಗೆ ಈ ಹಿಂದೆ ಮನವಿ ಸಲ್ಲಿಸಿದ್ದು, ಸರಿಯಾದ ಸ್ಪಂದನೆ ದೊರೆತಿಲ್ಲ. ಆದ್ದರಿಂದ ತಾವುಗಳು ಈ ಬಗ್ಗೆ ಕ್ರಮ ವಹಿಸುವಂತೆ ಸಲ್ಲಿಸಿದ ಮನವಿಗೆ ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಈ ಕೂಡಲೇ ಕ್ರಮಕೈಗೊಳ್ಳುವಂತೆ ತಿಳಿಸಿದರು.