ಅಭಿವೃದ್ಧಿ ಎಂದರೇನು? ಭೌತಿಕ ಅಥವಾ ಆರ್ಥಿಕ ಪರಿಪೂರ್ಣತೆ ಸಾಧಿಸುವುದೇ? ಇದೇನಾ ಯಶಸ್ಸು? ಯಾವುದೇ ವ್ಯಕ್ತಿ ತನ್ನನ್ನು ಯಶಸ್ವಿ ಎಂದು ಯಾವತ್ತೂ ಸ್ವೀಕರಿಸುವುದಿಲ್ಲ. ಆಶ್ಚರ್ಯವಾಯಿತೇ! ಹೌದು, ಇದು ನಿಜ. ಏಕೆ ಹೇಳಿ? ಹಣ ಸಂಪಾದನೆ ಮುಂದಿಟ್ಟು ಇದೇ ಯಶಸ್ಸು ಎಂದು ಹೇಳಬಹುದೇ? ಇಲ್ಲ. ನಿಮಗಿಂತ ಎಷ್ಟೋ ವ್ಯಕ್ತಿಗಳು ಇನ್ನಷ್ಟು ಮುಂದಿದ್ದಾರಲ್ಲ. ಹಾಗಾದರೆ ಜಗತ್ತಿನ ಹಣವಂತ ವ್ಯಕ್ತಿ ತನ್ನನ್ನು ಯಶಸ್ವಿ ಎಂದು ಪರಿಗಣಿಸುತ್ತಾನೆಯೇ? ಯಾವತ್ತೂ ಇಲ್ಲ. ಏಕೆ ಹೀಗೆ? ಪ್ರತಿ ವ್ಯಕ್ತಿಯು ತನಗಿಂತ ಅಧಿಕ ಹಣವಂತ ಇರುವ ವ್ಯಕ್ತಿಯನ್ನೇ ಯಶಸ್ವಿ ಎಂದು ಪರಿಗಣಿಸುತ್ತಾನೆ. ಜಾಸ್ತಿ ಹಣ ಇದ್ದರೆ ಮಾತ್ರ ತನ್ನನ್ನು ಯಶಸ್ವಿ ಎಂದು ಸ್ವೀಕರಿಸುತ್ತಾನೆ. ಹೀಗೆ ಸಾಯುವವರೆಗೂ ಯಾವತ್ತೂ ಅವನು ಯಶಸ್ವಿಯಾಗುವುದೇ ಇಲ್ಲ. ಈ ರೀತಿ ಯೋಚಿಸಿದರೆ ನಾವು ಯಶಸ್ವಿ ಆಗುವುದು ಕನಸಿನ ಮಾತಾಗುತ್ತದೆ.
ಹಾಗಾದರೆ ನಾವು ಏನು ಮಾಡಬೇಕು? ನಾವು ಇನ್ನೊಂದು ದೃಷ್ಟಿಕೋನದಿಂದ ಯಶಸ್ಸನ್ನು ನೋಡಬೇಕಷ್ಟೆ. ನಾವು ನಮ್ಮನ್ನು ಇನ್ನೊಬ್ಬರಿಗೆ ಹೋಲಿಸುವುದನ್ನು ನಿಲ್ಲಿಸಬೇಕು. ಯಶಸ್ಸು ಎಂದರೆ ಏನು ಎಂದು ಶಾಂತ ಮನಸ್ಸಿನಿಂದ ಯೋಚಿಸಬೇಕು. ನಮ್ಮ ಈ ಜೀವನದ ಹಾದಿಯಲ್ಲಿ ಹಿಂದಿನಕ್ಕಿಂತ ನಾವು ಎಷ್ಟು ಬದಲಾಗಿದ್ದೇವೆ, ಸುಧಾರಿಸಿದ್ದೇವೆ ಎಂದು ಪರೀಕ್ಷಿಸಬೇಕು. ಸುಧಾರಿಸುತ್ತಾ ಇದ್ದೇವೆ ಎಂದಾದರೆ, ನಾವು ಯಶಸ್ಸಿನ ಹಾದಿಯಲ್ಲಿ ಮುಂದೆ ಸಾಗುತ್ತಿದ್ದೇವೆ ಎಂದರ್ಥ. ಅದಕ್ಕೆ ಖುಷಿ ಪಡಿ. ಇನ್ನೊಂದು ವಿಷಯ ಏನೆಂದರೆ, ನಾವು ಏನನ್ನು ಪಡೆದರೆ ನಮ್ಮನ್ನು ನಾವು ಯಶಸ್ವಿ ಎಂದು ಪರಿಗಣಿಸುತ್ತೇವೆ ಎಂದು ಪಟ್ಟಿ ಮಾಡಿಕೊಳ್ಳಿ. ಬಹಳ ಉದ್ದ ಪಟ್ಟಿ ಬೇಡ. ವೈಯಕ್ತಿಕ, ಸಾಮಾಜಿಕ, ಕೌಟುಂಬಿಕ, ವ್ಯಾವಹಾರಿಕ ಯಶಸ್ಸಿನ ಪಟ್ಟಿ ಮಾಡಿ. ಪ್ರತಿಯೊಂದರಲ್ಲಿ ಐದು ಪ್ರಮುಖ ವಿಷಯಗಳನ್ನು ಆರಿಸಿ ಅದನ್ನು ಗುರಿಯಾಗಿಟ್ಟುಕೊಂಡು ಮುಂದುವರಿಸಿ. ಯಾವುದಕ್ಕೆ ಎಷ್ಟು ಹೊತ್ತು ಬೇಕೆಂದು ನೋಡಿ.
ಜೀವನದಲ್ಲಿ ಖುಷಿಯಾಗಿರಬೇಕಾದರೆ ಬ್ಯಾಲೆನ್ಸ್ ಇರಬೇಕು. ಮಾನಸಿಕ ನೆಮ್ಮದಿಗೆ ಸಾಮಾಜಿಕ, ಕೌಟುಂಬಿಕ, ವೈಯಕ್ತಿಕ, ಈ ವಿಚಾರಗಳಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಅಗತ್ಯ. ಆಗ ಮಾತ್ರ ನಾವು ಸಂತೋಷದಿಂದಿರಲು ಸಾಧ್ಯ. ಬೇರೆಯವರ ಜೊತೆ ಹೋಲಿಸಿ ಅಲ್ಲ. ನಿಮಗೆ ಯಶಸ್ಸು ಎಂದರೇನು ಎಂಬುದು ನಿಮಗೆ ವೈಯಕ್ತಿಕ ಆಗಬೇಕೆ ಹೊರತು ಬೇರೆಯವರ ಅಭಿಪ್ರಾಯವಲ್ಲ. ಜಾಸ್ತಿ ಸಂಪಾದನೆ ಗುರಿ ಇಟ್ಟುಕೊಳ್ಳಬೇಡಿ, ನಿಮ್ಮ ಜೀವನಕ್ಕೆ ಎಷ್ಟು ಹಣ ಬೇಕು ಎಂದು ನಿರ್ಧರಿಸಿ. ಖುಷಿಯಾಗಿರಲು ಕೋಟ್ಯಾಧಿಪತಿಯಾಗಬೇಕಿಲ್ಲ ಚಿಕ್ಕ ಮನೆ ಇದ್ದರೂ ನೆಮ್ಮದಿಯ ಬದುಕು ಬದುಕಬಹುದು. ಅದು ನಮ್ಮ ಮೆಂಟಾಲಿಟಿ ಮೇಲೆ ಅವಲಂಬಿತವಾಗಿರುತ್ತದೆ. ಯಶಸ್ಸು ನಮ್ಮ ಕೈಯಲ್ಲಿದೆ. ಚಿಕ್ಕಪುಟ್ಟ ಗೆಲುವನ್ನು ಸಂಭ್ರಮಿಸಿ. ನಾವು ಸುಧಾರಿಸುತ್ತಾ ಇದ್ದೇವೆ ಎಂದಾದರೆ ನಾವು ಯಶಸ್ವಿಯೇ. ಅದು ನಮ್ಮ ನಮ್ಮ ಮೆಂಟಾಲಿಟಿಗೆ ಬಿಟ್ಟದ್ದು. ಒಳ್ಳೆಯ ಪೋಷಕ, ಒಳ್ಳೆಯ ವ್ಯಕ್ತಿ, ಎಲ್ಲರಿಗೂ ಒಳ್ಳೆಯದನ್ನು ಬಯಸುವ ವ್ಯಕ್ತಿ ನೀವಾದರೆ ಅದೇ ಯಶಸ್ಸು.
-ಡಾ.ಹರ್ಷಾ ಕಾಮತ್