ಉಡುಪಿ: ಉಡುಪಿಯಲ್ಲಿ ಆರಂಭಿಸಿದ “ಕೇದಾರೋತ್ಥಾನ ರೈತ ಉತ್ಪಾದಕರ ಕಂಪನಿ” ಇದರ ನೂತನ ಕಚೇರಿ ಹಾಗೂ ಹಡಿಲು ಭೂಮಿ ಕೃಷಿ ಅಂದೋಲನ”ದಡಿ ಬೆಳೆದ ಭತ್ತದಿಂದ ಉತ್ಪಾದಿಸಿದ ಅಕ್ಕಿ “ಉಡುಪಿ ಕೇದಾರ ಕಜೆ” ಮಾರಾಟ ಕೇಂದ್ರದ ಉದ್ಘಾಟನೆ ಇಂದು ಹಿರಣ್ಯ ಫೈನಾನ್ಸ್ ಕಟ್ಟಡದಲ್ಲಿ ನಡೆಯಿತು.
ಪಶುಸಂಗೋಪನೆ ಸಚಿವರಾದ ಪ್ರಭು ಚವ್ಹಾಣ್ ಅವರು ಉದ್ಘಾಟನೆ ನೆರವೇರಿಸಿ ಗ್ರಾಹಕರಾದ ಸಿ. ಎ. ನಾರಾಯಣ ಅವರಿಗೆ “ಉಡುಪಿ ಕೇದಾರ ಕಜೆ” ಅಕ್ಕಿ ವಿತರಿಸಿದರು.
ಕೇದಾರೋತ್ಥಾನ ಟ್ರಸ್ಟ್ ಉಡುಪಿ ಮೂಲಕ ಉಡುಪಿಯಲ್ಲಿ ಕೈಗೊಂಡ “ಹಡಿಲು ಭೂಮಿ ಕೃಷಿ ಅಂದೋಲನ”ದಡಿ ಬೆಳೆದ ಭತ್ತದಿಂದ ಉತ್ಪಾದಿಸಿದ ಸಂಪೂರ್ಣ ಸಾವಯವ ಕುಚ್ಚಲಕ್ಕಿಯನ್ನು “ಉಡುಪಿ ಕೇದಾರ ಕಜೆ” ಹೆಸರಿನಲ್ಲಿ ಮಾರುಕಟ್ಟೆಗೆ ತರಲಾಗಿದೆ.
ಈ ಅಕ್ಕಿಯನ್ನು “ಕೇದಾರೋತ್ಥಾನ ರೈತ ಉತ್ಪಾದಕರ ಕಂಪನಿ” ಮೂಲಕ ಮಾರಾಟ ಮಾಡಲಾಗುತ್ತಿದ್ದು, ಅದರ ನೂತನ ಕಚೇರಿಯನ್ನು ಉಡುಪಿಯ ಹಿರಣ್ಯ ಫೈನಾನ್ಸ್ ಕಟ್ಟಡದಲ್ಲಿ ಆರಂಭಿಸಲಾಗಿದೆ. ಗ್ರಾಹಕರು ಅಲ್ಲಿ ಅಕ್ಕಿಯನ್ನು ಖರೀದಿಸುವ ಮೂಲಕ ರೈತರನ್ನು ಪ್ರೋತ್ಸಾಹಿಸಬೇಕು.
ಮುಂದಿನ ಬಾರಿ ರೈತರೇ ತಮ್ಮ ಭೂಮಿಯಲ್ಲಿ ಕೃಷಿ ಮಾಡುವಂತೆ ಪ್ರೇರೇಪಿಸಿ ಅವರು ಬೆಳೆದ ಭತ್ತವನ್ನು “ಕೇದಾರೋತ್ಥಾನ ರೈತ ಉತ್ಪಾದಕರ ಕಂಪನಿ” ಮೂಲಕ ರೈತರಿಗೆ ಉತ್ತಮ ಬೆಲೆಯನ್ನು ನೀಡಿ ಖರೀದಿಸಿ ರೈತರಿಗೆ ಸಹಕಾರವನ್ನು ನೀಡಲಾಗುವುದು ಎಂದು ಶಾಸಕ ಕೆ ರಘುಪತಿ ಭಟ್ ಹೇಳಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕೆ. ರಾಘವೇಂದ್ರ ಕಿಣಿ ಕಾರ್ಯಕ್ರಮ ನಿರೂಪಿಸಿದರು.