ಉಡುಪಿ: ಸರ್ಕಾರದ ಅನುದಾನವಿಲ್ಲದೇ ದಾನಿಗಳ ನೆರವಿನೊಂದಿಗೆ ಸಭಾಭವನದ ನಿರ್ಮಾಣ ಕಾರ್ಯವನ್ನು ಅತ್ಯಲ್ಪ ಅವಧಿಯಲ್ಲಿಯೇ ನವೀಕರಣಗೊಳಿಸಿರುವುದು ಪ್ರಶಂಸನೀಯ ಕಾರ್ಯ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಹೇಳಿದರು.
ಅವರು ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಮಹಾಲಿಂಗೇಶ್ವರ ಸಭಾಭವನ ನವೀಕೃತ ಕಾಮಗಾರಿಯನ್ನು ಉದ್ಘಾಟಿಸಿ ಮಾತನಾಡಿದರು.
ನಗರದ ಮಧ್ಯ ಭಾಗದಲ್ಲಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಸಭಾಭವನವನ್ನು ದಾನಿಗಳು ಹಾಗೂ ಭಕ್ತರ ಸಹಕಾರದೊಂದಿಗೆ ಕಡಿಮೆ ಅವಧಿಯಲ್ಲಿಯೇ ಸುಂದರ, ಸುಸಜ್ಜಿತವಾಗ ಅಗತ್ಯ ಮೂಲಭೂತ ಸೌಕರ್ಯಗಳನ್ನೊಳಗೊಂಡ ಕಟ್ಟಡ ನವೀಕರಣ ಮಾಡಿರುವುದು ಮನೋಬಲ ಮತ್ತು ಪ್ರಬಲ ಇಚ್ಛಾಶಕ್ತಿಯನ್ನು ತೋರುತ್ತದೆ ಎಂದರು.
ಮುಂದಿನ ದಿನಗಳಲ್ಲಿ ಸಭಾಭವನದ ಬಳಕೆಯನ್ನು ಒಳ್ಳೆಯ ರೀತಿಯಲ್ಲಿ ಸಾರ್ವಜನಿಕರು ಬಳಕೆ ಮಾಡಿಕೊಳ್ಳುವುದರ ಜೊತೆಗೆ ಶುಚಿತ್ವಚಾಗಿ ಇಟ್ಟುಕೊಂಡು, ಪ್ರತೀ ಸೋಮವಾರ ನಡೆಯುವ ಅನ್ನಸಂತರ್ಪಣೆ ಕಾರ್ಯಕ್ಕೆ ಸಹ ಬಳಕೆ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ದಾನಿಗಳಾದ ಉಜ್ವಲ ಡೆವಲಪರ್ಸ್ನ ಪುರುಷೋತ್ತಮ ಶೆಟ್ಟಿ, ಅಮೃತಾ ಶೆಟ್ಟಿ ಹಾಗೂ ಗ್ರಾಸ್ ಲ್ಯಾಂಡ್ ಡೆವಲಪರ್ಸ್ನ ವಿನೀತ್ ಎಸ್. ಅಮೀನ್ ಬನ್ನಂಜೆ ಅವರನ್ನು ಸನ್ಮಾನಿಸಲಾಯಿತು.
ಎಂಜಿನಿಯರ್ಗಳಾದ ಪ್ರವೀಣ್ ಹೆಗ್ಡೆ, ಸುರೇಶ್ ನಾಣಯ್ಯ ಹಾಗೂ ದೇವಳದ ಆಡಳಿತಾಧಿಕಾರಿ ಡಾ. ರೋಶನ್ ಕುಮಾರ್ ಶೆಟ್ಟಿ ಅವರನ್ನು ಗೌರವಿಸಲಾಯಿತು.
ವಾಸುದೇವ ಭಟ್ ಪ್ರಾರ್ಥಿಸಿದರು. ಡಾ. ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿ, ನಿತ್ಯಾನಂದ ನಿರೂಪಿಸಿ, ವಂದಿಸಿದರು.