ಉಡುಪಿ: ಚೈಲ್ಡ್ ಲೈನ್-1098 ಉಡುಪಿಯ ವತಿಯಿಂದ ಮಕ್ಕಳ ದಿನಾಚರಣೆ ಮತ್ತು ಚೈಲ್ಡ್ ಲೈನ್ ಸೇ ದೋಸ್ತಿ ಸಪ್ತಾಹದ ಅಂಗವಾಗಿ ಮಕ್ಕಳ ಭಿಕ್ಷಾಟನೆ ನಿರ್ಮೂಲನೆಗೊಳಿಸುವ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಭಿತ್ತಿಪತ್ರಗಳನ್ನು ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸದಸ್ಯರು, ಪೇಜಾವರ ಮಠಾಧೀಶರು ಮತ್ತು ಶ್ರೀಕೃಷ್ಣ ಸೇವಾಧಾಮ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಬಿಡುಗಡೆಗೊಳಿಸಿದರು.
ಭಿಕ್ಷಾಟನೆ ಎನ್ನುವುದು ಸಮಾಜದ ಒಂದು ದೊಡ್ಡ ಪಿಡುಗು. ಇದರ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ ಮಕ್ಕಳ ಭಿಕ್ಷಾಟನೆಯನ್ನು ಹೋಗಲಾಡಿಸುವ ಸಲುವಾಗಿ ಉಡುಪಿ ಚೈಲ್ಡ್ ಲೈನ್-1098 ತೆಗೆದುಕೊಂಡ ನಿರ್ಣಯ ಅತ್ಯಂತ ಶ್ಲಾಘನೀಯ.
ಭಿಕ್ಷೆ ಬೇಡುವ ಮಕ್ಕಳಿಗೆ ಹಣವನ್ನು ನೀಡಿದರೆ ಅದು ಸದುಪಯೋಗವಾಗದೇ, ದುರುಪಯೋಗದ ಮೂಲವಾಗುತ್ತಿದೆ. ಆದ್ದರಿಂದ ಯಾರೂ ಕೂಡ ಭಿಕ್ಷೆ ಬೇಡುವ ಮಕ್ಕಳಿಗೆ ಹಣವನ್ನು ನೀಡದೆ, ಸಹಾಯ ಮಾಡುವ ಇಚ್ಛೆಯುಳ್ಳವರು ಆಹಾರ ಮತ್ತು ಬಟ್ಟೆ ನೀಡಬೇಕು ಅಥವಾ ಅಂತಹ ಮಕ್ಕಳಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಬೇಕು.
ಹೀಗೆ ಮಾಡಿದಲ್ಲಿ ಮಕ್ಕಳ ಭಿಕ್ಷಾಟನೆ ಅವಶ್ಯವಾಗಿ ನಿರ್ಮೂಲನೆಯಾಗುತ್ತದೆ. ಈ ದಿಸೆಯಲ್ಲಿ ಸಮಾಜದ ಎಲ್ಲರೂ ಕೈ ಜೋಡಿಸೋಣ, ಈ ಮೂಲಕ ಮಕ್ಕಳ ಭಿಕ್ಷಾಟನೆ ಹೋಗಲಾಡಿಸುವ ಪ್ರಕ್ರಿಯೆ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ನಂತರ ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ಸಿಟಿ ಬಸ್ ನಿಲ್ದಾಣ, ಸರ್ವಿಸ್ ಬಸ್ ನಿಲ್ದಾಣ ಹಾಗೂ ಕೆ.ಎಸ್. ಆರ್.ಟಿ.ಸಿ. ಬಸ್ ಸ್ಟ್ಯಾಂಡ್ ನಲ್ಲಿರುವ ಬಸ್ಸುಗಳ ಚಾಲಕರಿಗೆ, ಆಟೋ ಚಾಲಕರಿಗೆ ಮಾಹಿತಿಯನ್ನು ನೀಡಿ ಭಿತ್ತಿ ಪತ್ರವನ್ನು ಹಂಚಲಾಯಿತು. ಮಕ್ಕಳು ಭಿಕ್ಷಾಟನೆಯಲ್ಲಿ ನಿರತರಾಗಿರುವುದನ್ನು ಕಂಡಲ್ಲಿ ಚೈಲ್ಡ್ ಲೈನ್-1098 ಕರೆ ಮಾಡಿ ತಿಳಿಸುವಂತೆ ಕೋರಲಾಯಿತು.
ಚೈಲ್ಡ್ ಲೈನ್-1098 ಉಡುಪಿಯ ನಿರ್ದೇಶಕರಾದ ರಾಮಚಂದ್ರ ಉಪಾಧ್ಯಾಯ, ಸಹ ನಿರ್ದೇಶಕರಾದ ಗುರುರಾಜ್ ಭಟ್ ಮತ್ತು ಚೈಲ್ಡ್ ಲೈನ್-1098 ಸಿಬ್ಬಂದಿಗಳು ಉಪಸ್ಥಿತರಿದ್ದರು.