ಉಡುಪಿ: ಮಣಿಪಾಲದ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಮುನಿಯಾಲು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಪ್ರಸೂತಿ ತಂತ್ರ ಮತ್ತು ಸ್ತ್ರೀ ರೋಗ ವಿಭಾಗದ ವತಿಯಿಂದ ನವೆಂಬರ್ 15 ರಿಂದ 20ರವರೆಗೆ ಪೂರ್ವಾಹ್ನ 9.00 ರಿಂದ ಅಪರಾಹ್ನ 4.00 ಗಂಟೆಯವರೆಗೆ ಪ್ರಸೂತಿ ತಂತ್ರ ಮತ್ತು ಸ್ತ್ರೀ ರೋಗಗಳ ಉಚಿತ ಚಿಕಿತ್ಸಾ ಮತ್ತು ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು ಕಾಲೇಜಿನ ಪ್ರಾಂಶುಪಾಲರಾದ ಡಾ. ಸತ್ಯನಾರಾಯಣ ಬಿ ಶಿಬಿರವನ್ನು ಉದ್ಘಾಟಿಸಿದರು.
ಪ್ರಸೂತಿ ತಂತ್ರ ಮತ್ತು ಸ್ತ್ರೀ ರೋಗ ವಿಭಾಗದ ಡಾ. ಪ್ರೀತಿ ಪಾಟೀಲ್, ಡಾ. ಅರ್ಚನಾ ಕಲ್ಲೂರಾಯ, ಡಾ. ಮಾಧವಿ, ಡಾ. ರಶ್ಮಿ ಕಲ್ಕೂರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈಗಾಗಲೇ ಅನೇಕ ಮಂದಿ ಈ ಚಿಕಿತ್ಸಾ ಶಿಬಿರದ ಪ್ರಯೋಜನವನ್ನು ಪಡೆದುಕೊಂಡಿರುತ್ತಾರೆ.
ನವೆಂಬರ್ 20 ಶನಿವಾರದವರೆಗೆ ಮುಂದುವರೆಯುವ ಈ ಚಿಕಿತ್ಸಾ ಶಿಬಿರದಲ್ಲಿ ತಜ್ಞ ವೈದ್ಯರು ಆಯುರ್ವೇದ ರೀತ್ಯಾ ಚಿಕಿತ್ಸೆಗಳನ್ನು ಉಚಿತವಾಗಿ ನೀಡಲಿದ್ದಾರೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.