ಉಡುಪಿ: ಮಹಿಳೆಯರು ತಮ್ಮ ಹಕ್ಕನ್ನು ಸರಿಯಾದ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳುವುದರ ಜೊತೆಗೆ ಮನೆಯಿಂದಲೇ ಮಕ್ಕಳಲ್ಲಿ ಉತ್ತಮ ಸಂಸ್ಕಾರದ ಜೊತೆಗೆ ಮೌಲ್ಯಯುತವಾದ ಶಿಕ್ಷಣದ ಬೋಧನೆ ಮಾಡಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್ ತಿಳಿಸಿದರು.
ಅವರು ಗುರುವಾರ ನಗರದ ಬೋರ್ಡ್ ಹೈಸ್ಕೂಲ್‌ನಲ್ಲಿ ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರ, ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ದೆಹಲಿ, ಭಾರತ್ ರಾಷ್ಟ್ರೀಯ ಮಹಿಳಾ ಆಯೋಗ, ರಾಜ್ಯ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರ ಉಡುಪಿ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ಶಿಕ್ಷಣ ಹಕ್ಕು ಕಾಯ್ದೆ ಹಾಗೂ ಮಹಿಳೆಯರಿಗಾಗಿ ಕಾನೂನು ಅರಿವು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳಾ ಹಕ್ಕುಗಳು ಮತ್ತು ಕಾನೂನುಗಳ ಕುರಿತು ಮಹಿಳೆಯರು ಅರಿತುಕೊಳ್ಳುವುದರ ಜೊತೆಗೆ ಸಮಾಜದಲ್ಲಿ ಇರುವ ಅನಕ್ಷರಸ್ತರಿಗೂ ಈ ಕುರಿತು ಅರಿವು ಮೂಡಿಸಬೇಕು ಎಂದ ಅವರು, ಮಹಿಳೆಯರು ತಮ್ಮ ಸಂಸ್ಕೃತಿ ಮತ್ತು ಕಾನೂನಿನ ಚೌಕಟ್ಟಿನಲ್ಲಿ ಬೇಕಾದ ನ್ಯಾಯವನ್ನು ಪಡೆಯಬೇಕೇ ಹೊರತು ಕಾನೂನಿನ ದುರ್ಬಳಕೆ ಮಾಡಿಕೊಳ್ಳಬಾರದು ಎಂದರು.
ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಮಹಿಳೆಯರ ಹಿತರಕ್ಷಣೆಗೆ ಶ್ರಮಿಸುತ್ತಿದ್ದು, ತಮಗೆ ಏನಾದರೂ ತೊಂದರೆಗಳು ಉಂಟಾದಲ್ಲಿ ಜಿಲ್ಲೆಯಲ್ಲಿ ಸಖಿ ಒನ್ ಸರ್ವಿಸ್‌ನ್ನು ಸಂಪರ್ಕಿಸಬಹುದು ಮತ್ತು ಉಚಿತ ಕಾನೂನು ನೆರವನ್ನು ಸಹ ಪಡೆಯಲು ಅವಕಾಶವಿದೆ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್ ಮಾತನಾಡಿ, ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕಾನೂನಿನ ಅರಿವು ಅತ್ಯವಶ್ಯವಾಗಿದ್ದು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಮನೆ ಬಾಗಿಲಿಗೆ ತೆರಳಿ ಈ ಕುರಿತು ಅರಿವು ಮೂಡಿಸುವ ಕಾರ್ಯ ಮಾಡುತ್ತದೆ.
ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳಲ್ಲಿ ಇದರ ಅವಶ್ಯಕತೆ ಹೆಚ್ಚು ಇರುವುದರಿಂದ ಶಾಲಾ-ಕಾಲೇಜುಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಹೆಚ್ಚು-ಹೆಚ್ಚು ಏರ್ಪಡಿಸಿ ಅರಿವು ಮೂಡಿಸಲಾಗುವುದು ಎಂದರು.
ಮಹಿಳೆಯರು ಮತ್ತು ಆರ್ಥಿಕವಾಗಿ ಬಡತನ ರೇಖೆಗಿಂತ ಕೆಳಗಿರುವವರು ಉಚಿತವಾಗಿ ಕಾನೂನಿನ ನೆರವು ಪಡೆಯಲು ಅವಕಾವಿದ್ದು, ಲೋಕ್ ಅದಾಲತ್, ಸಂತ್ರಸ್ಥರ ಪರಿಹಾರ ಯೋಜನೆಗಳನ್ನು ಕಾನೂನು ಸೇವಾ ಪ್ರಾಧಿಕಾರದಲ್ಲಿರುತ್ತವೆ ಸಾರ್ವಜನಿಕರು ಇದನ್ನು ಸದುಪಯೋಗ ಪಡಿಸಿಕೊಳ್ಳುವಂತಾಗಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯ ನ್ಯಾಯಾವಾದಿಗಳಾದ, ವಾಣಿ ವಿ ರಾವ್ ಮತ್ತು ಮೇರಿ ಅನ್ನೆ ರಂಜನಿ ಶ್ರೇಷ್ಟ ಭಾಗವಹಿಸಿದ್ದರು.
ಉಡುಪಿ ಜಿಲ್ಲಾ ಬಾಲನ್ಯಾಯ ಮಂಡಳಿಯ ಸದಸ್ಯೆ ಅಮೃತಕಲಾ, ಸಹ ಶಿಕ್ಷಕ ಸುರೇಶ್ ಎಸ್, ಹಾಗೂ ವಿವಿಧ ಶಾಲೆಗಳ ಮಹಿಳಾ ಶಿಕ್ಷಕಿಯರು ಉಪಸ್ಥಿತರಿದ್ದರು.
ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರದ ಉಪಾಧ್ಯಕ್ಷೆ ತಿಲೊತ್ತಮ ನಾಯಕ್ ನಿರೂಪಿಸಿ, ಉಡುಪಿ ಬಿ.ಆರ್.ಪಿ ಮೀನಾಕುಮಾರಿ ವಂದಿಸಿದರು.