ಉಡುಪಿ: ಶ್ರೀ ವಿಬುಧೇಶತೀರ್ಥ ಶ್ರೀಪಾದರು ಘನ ವಿದ್ವಾಂಸ ಯತಿಗಳಾಗಿದ್ದುಕೊಂಡು, ಸಮಾಜದ ಅಗತ್ಯತೆಯನ್ನು ಮನಗಂಡು ದೇಶದಾದ್ಯಂತ ಮಾದರಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಲಕ್ಷಾಂತರ ಕುಟುಂಬವನ್ನು ಬೆಳಗಿಸಿದ್ದಾರೆ. ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸುವಲ್ಲಿ ಅಹರ್ನಿಶಿ ಶ್ರಮಿಸಿದ ಶ್ರೀಗಳ ಕೃತುಶಕ್ತಿ ಅನ್ಯಾದೃಶವಾದುದಾಗಿದೆ. ಅವರು ರೂಪಿಸಿದ ಶಿಕ್ಷಣ ಸಂಸ್ಥೆಗಳ ಗುಣಮಟ್ಟವನ್ನು ಉಳಿಸಿ ಬೆಳೆಸಲು ಎಲ್ಲ ಹಳೆ ವಿದ್ಯಾರ್ಥಿಗಳ ಸಹಕಾರ ನಮಗಿರಲೆಂದು ಅದಮಾರು ಮಠಾಧೀಶ ರಾದ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಇಂದು ನಡೆದ ಪೂರ್ಣಪ್ರಜ್ಞ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅನುಗ್ರಹ ಸಂದೇಶ ನೀಡಿ ನುಡಿದರು.
ಜೊತೆ ಕಾರ್ಯದರ್ಶಿ ಮಂಜುನಾಥ, ಕಾರ್ಯದರ್ಶಿ ಮುರಲಿ ಕಡೆಕಾರ್, ಕೋಶಾಧಿಕಾರಿ ಸೌಮ್ಯ ಶೆಟ್ಟಿ ಕ್ರಮವಾಗಿ ಗತಸಭೆ ವರದಿ, ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿನಿ ಪೂಜಾ ಕಾಮತ್ ವಿಶ್ವವಿದ್ಯಾನಿಲಯದ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದು, ಬಹುಮಾನವಾಗಿ ಬಂದ ರೂಪಾಯಿ ಹತ್ತು ಸಾವಿರ ಮೊತ್ತವನ್ನು ಹಳೆ ವಿದ್ಯಾರ್ಥಿ ಸಂಘಕ್ಕೆ ನೀಡಿದರು. ಶ್ರೀಗಳು ಪೂಜಾ ಕಾಮತ್ ಹಾಗೂ ಚಾಣಕ್ಯ ಪ್ರಶಸ್ತಿ ಗಳಿಸಿದ ಹಳೆವಿದ್ಯಾರ್ಥಿ ನಾಗರಾಜ್ ಹೆಬ್ಬಾರ್ ಇವರನ್ನು ಗೌರವಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಎ. ರಾಘವೇಂದ್ರ ಅವರು ಹಳೆ ವಿದ್ಯಾರ್ಥಿಗಳ ಸಂಪೂರ್ಣ ಸಹಕಾರವನ್ನು ಕೋರಿದರು. ಉಪಾಧ್ಯಕ್ಷರುಗಳಾದ ವಿಮಲಾ ಚಂದ್ರಶೇಖರ್ ಮತ್ತು ಮೀನಾ ಲಕ್ಷಿಣಿ ಅಡ್ಯಂತಾಯ ಸಭೆಯಲ್ಲಿ ಉಪಸ್ಥಿತರಿದ್ದರು.
ಮುಂದಿನ ವರ್ಷಕ್ಕೆ ಡಾ. ಬಿ.ಎಂ.ಸೋಮಯಾಜಿ ಅವರ ಅಧ್ಯಕ್ಷತೆಯ ತಂಡವನ್ನೇ ಮುಂದುವರಿಸಲಾಯಿತು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ. ಬಿ.ಎಂ.ಸೋಮಯಾಜಿ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ತೇಜಸ್ವಿ ಶಂಕರ್ ವಂದನಾರ್ಪಣೆಗೈದರು.