ಉಡುಪಿ: ಇದೇ ತಿಂಗಳ 27 ರಂದು ದೇಶಾದ್ಯಂತ 500ಕ್ಕೂ ಹೆಚ್ಚು ರೈತ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ ಗೆ ಸಿಐಟಿಯು ಉಡುಪಿ ಜಿಲ್ಲಾ ಸಮಿತಿ ಬೆಂಬಲ ವ್ಯಕ್ತಪಡಿಸಿದೆ. ಬಿಜೆಪಿ ಸರಕಾರ ಜಾರಿಗೆ ತಂದಿರುವ ಮೂರು ಕರಾಳ ಕ್ರಷಿ ಕಾಯ್ದೆಗಳು, ವಿದ್ಯುತ್ ಮಸೂದೆ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿಗಳು ರೈತರಿಗೆ ಮಾರಕವಾಗಿರುವುದು ಮಾತ್ರವಲ್ಲದೆ ಜನಸಾಮಾನ್ಯರ ಆದಾಯಕ್ಕೂ ಕತ್ತರಿ ಬೀಳುತ್ತದೆ. ವಿದ್ಯುತ್ ಕಾಯಿದೆಗೆ ತಿದ್ದುಪಡಿ ತಂದು ಪ್ರಸರಣ ಮತ್ತು ವಿತರಣೆಯನ್ನು ಸಹ ಖಾಸಗಿ ತಿಮಿಂಗಲಗಳಿಗೆ ನೀಡಲಾಗುವುದು. ಈ ಹಿನ್ನಲೆಯಲ್ಲಿ ಹೊಸತಾಗಿ ಇಂಧನ ಸಚಿವರಾದ ಸುನಿಲ್ ಕುಮಾರ್ ಅವರು, “ಪ್ರಿ ಪೈಡ್ ಮೀಟರ್ ಅಳವಡಿಸಲಾಗುವುದು” ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.
ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಬಸ್ ದರ ಮೊದಲಾದ ಬೆಲೆ ಏರಿಕೆಯಿಂದ ಜನ ಕಂಗಾಲಾಗಿದ್ದಾರೆ. ಒಂದೆಡೆ ಕೊರೋನಾದಿಂದ ವ್ಯಾಪಾರ ವಹಿವಾಟು, ಕೆಲಸದ ಭದ್ರತೆ ಕುಂಠಿತಗೊಂಡಿದೆ. ಇನ್ನೊಂದೆಡೆ ಆದಾಯಕ್ಕೆ ಕತ್ತರಿ. 44 ಕಾರ್ಮಿಕ ಕಾಯಿದೆಗಳಲ್ಲಿ 15 ಕಾಯಿದೆ ರದ್ದುಗೊಳಿಸಿ, 29 ಕಾಯಿದೆಗಳನ್ನು 4 ಸಂಹಿತೆಗಳನ್ನಾಗಿ ಮಾಡಿ ಕೊರ್ಪೊರೇಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ. ಇಂತಹ ಸಂದರ್ಭದಲ್ಲಿ ಹಲವು ಸಮಾನ ಮನಸ್ಕ ಜನಪರ ಸಂಘಟನೆಗಳೊಂದಿಗೆ ಕೂಡಿಕೊಂಡು 27 ರಂದು ಬ್ರಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಅಂದು ಉಡುಪಿ, ಕುಂದಾಪುರ, ಬೈಂದೂರು, ಕಾರ್ಕಳದಲ್ಲಿ ಪ್ರತಿಭಟನೆ ನಡೆಯಲಿದೆ.
ಉಡುಪಿಯಲ್ಲಿ ಜೋಡುಕಟ್ಟೆಯಿಂದ ಬ್ರಹತ್ ಪ್ರತಿಭಟನಾ ಮೆರವಣಿಗೆಗೆ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಿಐಟಿಯು ಅಧ್ಯಕ್ಷರಾದ ಕೆ.ಶಂಕರ್, ಅಧ್ಯಕ್ಷರು, ಉಪಾಧ್ಯಕ್ಷ ಬಾಲಕ್ರಷ್ಣ ಶೆಟ್ಟಿ, ಶಶಿಧರ ಗೊಲ್ಲ, ಉಡುಪಿ ತಾಲೂಕು ಕಾರ್ಯದರ್ಶಿ ಕವಿರಾಜ್, ತಾಲೂಕು ಅಧ್ಯಕ್ಷ ರಾಮ ಕಾರ್ಕಡ ಮನವಿ ಮಾಡಿದ್ದಾರೆ.