ಉಡುಪಿ: ನಿಟ್ಟೂರು ಪ್ರೌಢಶಾಲೆಯ ಇಂಟರಾಕ್ಟ್ ಕ್ಲಬ್ ಪದಗ್ರಹಣ ಕಾರ್ಯಕ್ರಮ ನೆರವೇರಿಸಿದ ರೋಟರಿ ಅಧ್ಯಕ್ಷ ಹೇಮಂತ ಯು. ಕಾಂತ್ ಅವರು ಇಂಟರಾಕ್ಟ ಕ್ಲಬ್ ನ ಮೂಲಕ ನಡೆಸುವ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ ವ್ಯಕ್ತಿತ್ವವನ್ನು ವಿಕಸನಗೊಳಿಸಲು ಮುಂದಾಗಬೇಕೆಂದರು. ರೋಟರಿ ಜಿಲ್ಲಾ ಸಾಕ್ಷರತಾ ಸಮಿತಿಯ ಸಭಾಪತಿ ಸುಬ್ರಹ್ಮಣ್ಯ ಬಾಸ್ರಿ ಹತ್ತನೆಯ ತರಗತಿಯ ವಿದ್ಯಾರ್ಥಿಗಳಿಗೆ ಅವರ ಜ್ಞಾನಾಭಿವೃದ್ದಿಗೆ ಉಪಯುಕ್ತವಾದ ವಿದ್ಯಾಸೇತು ಪುಸ್ತಕವನ್ನು ವಿತರಿಸಿ ಇದರ ಸದುಪಯೋಗ ಪಡೆಯಬೇಕೆಂದರು.
ನಿಟ್ಟೂರು ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಮುರಳಿ ಕಡೆಕಾರ್ ಅವರು, ರೋಟರಿ ಉಡುಪಿ ನಿಟ್ಟೂರು ವಿದ್ಯಾಸಂಸ್ಥೆಗೆ ನೀಡಿದ ಕೊಡುಗೆಯನ್ನು ಸ್ಮರಿಸಿ ವಿದ್ಯಾರ್ಥಿಗಳು ಇಂಟರಾಕ್ಟ್ ಕ್ಲಬ್ ನ ಮೂಲಕ ತಮ್ಮ ಚಟುವಟಿಕೆಗಳನ್ನು ನಡೆಸಿ ಕ್ರಿಯಾಶೀಲರಾಗಬೇಕೆಂದು ಕರೆ ನೀಡಿದರು.
ಇಂಟರಾಕ್ಟ ಸಭಾಪತಿ ವನಿತಾ ಉಪಾಧ್ಯಾಯ, ಈ ವರ್ಷ ಇಂಟರಾಕ್ಟ ಕ್ಲಬ್ ಗಳು ನಡೆಸಬಹುದಾದ ಕಾರ್ಯಕ್ರಮಗಳ ಬಗ್ಗೆ ತಿಳಿಸಿ ಶುಭ ಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಅನಸೂಯ ಅವರು ನೂತನ ತಂಡಕ್ಕೆ ಶುಭ ಹಾರೈಸಿದರು. ರೋಟರಿ ಕಾರ್ಯದರ್ಶಿ ಗೋಪಾಲಕೃಷ್ಣ ಪ್ರಭು, ರಾಮಚಂದ್ರ ಉಪಾಧ್ಯಾಯ, ಗುರುರಾಜ ಭಟ್ ಮುಂತಾದವರು ಉಪಸ್ಥಿತರಿದ್ದರು. ಕಾರ್ತಿಕ್ ಭಟ್ ಸ್ವಾಗತಿಸಿ, ಸಂಧ್ಯಾ ನಾಯ್ಕ್ ವಂದಿಸಿದರು. ನಿಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.