ಉಡುಪಿ: ಹಿರಿಯ ನಾಗರಿಕರ ಹಾಗೂ ಅಬಲೆಯರ ಪುನರ್ವಸತಿ ಕೇಂದ್ರ ಬೇಬಿ ಸೇವಾಶ್ರಮದ ಉದ್ಗಾಟನಾ ಸಮಾರಂಭ ಅಂಬಲಪಾಡಿಯಲ್ಲಿ ನಡೆಯಿತು. ಜನರ ಸೇವೆ ಜನಾರ್ದನನ ಸೇವೆ. ಸದಾ ತಾಯಿ ಅಂಬಲಪಾಡಿ ಮಹಾಕಾಳಿಯ ಅನುಗ್ರಹ ಈ ಬೇಬಿ ಸೇವಾಶ್ರಮಕ್ಕಿರಲಿ ಎಂದು ಅಂಬಲಪಾಡಿ ಕ್ಷೇತ್ರದ ಧರ್ಮದರ್ಶಿಗಳಾದ ವಿಜಯ ಬಲ್ಲಾಳ್ ಶುಭ ಹಾರೈಸಿದರು.
ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದ ಮಾನವ ಹಕ್ಕು ಸಂರಕ್ಷಣಾ ವೇದಿಕೆ ಅಧ್ಯಕ್ಷ ರವೀಂದ್ರನಾಥ ಶ್ಯಾನುಭಾಗ್, ಸನ್ಮಾರ್ಗದ ಸಮಾಜಸೇವೆಯಲ್ಲಿ ದೇವತಾನುಗ್ರಹವಿದೆ. ಬೇಬಿ ಸೇವಾಶ್ರಮಕ್ಕೆ ಸದಾ ತನ್ನ ಸಹಕಾರವಿದೆ ಎಂದರು. ಅಬಲೆ ಹಿರಿಯ ನಾಗರಿಕರಿಗೆ ಪ್ರೀತಿಯಿಂದ ಪ್ರಾಮಾಣಿಕ ಸೇವಾ ಕೇಂದ್ರಗಳು ಬೇಕಿದೆ. ಈ ಕಾರ್ಯಕ್ಕೆ ಸರಕಾರ ಪ್ರೋತ್ಸಾಹ ಕೊಡಬೇಕಿದೆ ಎಂದು ನಿಕಟಪೂರ್ವ ಅಧ್ಯಕ್ಷ ಬಿ.ಕೆ ನಾರಾಯಣ ಅವರು ಹೇಳಿದರು.
ಹಿರಿಯ ನಾಗರಿಕರು ಕಾರಣಾಂತರಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಅದು ಕ್ರಮೇಣ ಮನೋರೋಗಕ್ಕೆ ತುತ್ತಾಗುವ ಸಾಧ್ಯತೆಯಿದೆ. ಇಂತಹ ಪುನರ್ವಸತಿ ಕೇಂದ್ರಗಳು ಅವರುಗಳ ಅರೈಕೆ, ನಿರ್ವಹಣೆಗೆ ಅದರ ಸೇವಾ ತರಬೇತಿ ಸಿಬ್ಬಂದಿಗೆ ಅಗತ್ಯವಿದೆ. ಇದನ್ನು ತಮ್ಮ ಆಸ್ಪತ್ರೆಯ ವತಿಯಿಂದ ನೀಡಿ ಬೇಬಿ ಸೇವಾಶ್ರಮಕ್ಕೆ ಸಹಕರಿಸಲಾಗುವುದು ಎಂದು ಡಾ. ಎ.ವಿ. ಬಾಳಿಗಾ ಸ್ಮಾರಕ ಅಸ್ಪತ್ರೆಯ ವೈದ್ಯಕೀಯ ನಿರ್ದೇಶಕ, ಖ್ಯಾತ ಮನೋವೈದ್ಯರಾದ ಡಾ. ಪಿ.ವಿ ಭಂಡಾರಿ ಹೇಳಿದರು.
ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ, ಐರಿನ್ ಕ್ಯಾಸ್ಟಲಿನೊ, ಪದ್ಮ ಉಂತಾದವರು ಉಪಸ್ಥಿತರಿದ್ದರು.
ಬೇಬಿ ಸೇವಾಶ್ರಮದ ಆಡಳಿತ ನಿರ್ದೇಶಕರಾದ ಬಬಿತಾ ರಾಜೇಶ್ ಶೆಟ್ಟಿ ಸ್ವಾಗತಿಸಿ ವಂದಿಸಿದರು. ಶ್ರೀ ಗುರು ಚೈತನ್ಯ ಸೇವಾ ಪ್ರತಿಷ್ಠಾನದ ಹೊನ್ನಯ್ಯ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.