ನವದೆಹಲಿ: ದೇಶಾದ್ಯಂತ ಬರುವ ಅಕ್ಟೋಬರ್ ತಿಂಗಳಿನಲ್ಲಿ ಕೊರೊನಾ ಮೂರನೇ ಅಲೆಯ ಅಬ್ಬರ ತೀವ್ರವಾಗಲಿದೆ. ಇದು ಕೇಂದ್ರ ಗೃಹ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ (ಎನ್.ಐ.ಡಿ.ಎಮ್) ಪ್ರಧಾನಿ ಕಛೇರಿಗೆ ಸಲ್ಲಿಸಿದ ವರದಿ.
ಜುಲೈ 15 ಮತ್ತು ಅಕ್ಟೋಬರ್ 13 ಮಧ್ಯಭಾಗದಲ್ಲಿ ಕೊರೊನಾ ಮೂರನೇ ಅಲೆ ಭಾರತಕ್ಕೆ ಅಪ್ಪಳಿಸಲಿದೆ ಎಂಬ ರೀಚರ್ಸ್ ಸಮೀಕ್ಷಾ ವರದಿಯನ್ನೂ ಇದರಲ್ಲಿ ಉಲ್ಲೇಖಿಸಲಾಗಿದೆ.
ಮೂರನೇ ಅಲೆಯ ಸಂದರ್ಭದಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿಯ ಬಗ್ಗೆಯೂ ನಿರ್ಲಕ್ಷಿಸುವಂತಿಲ್ಲ ಎಂಬ ಉಲ್ಲೇಖ ವರದಿಯಲ್ಲಿದೆ. ಡೆಲ್ಟಾ ಕ್ಕಿಂತ ಡೆಲ್ಟಾ ಪ್ಲಸ್ ಅತ್ಯಂತ ಅಪಾಯಕಾರಿಯಾಗಲಿದೆ ಎಂಬುದಕ್ಕೆ ಯಾವುದೇ ಆಧಾರವು ಇಲ್ಲಿಯವರೆಗೆ ಲಭಿಸಿಲ್ಲ. ದೇಶಾದ್ಯಂತ ಪರೀಕ್ಷಿಸಲಾದ 58,240 ಮಾದರಿಗಳಲ್ಲಿ 16 ರಾಜ್ಯಗಳಲ್ಲಿ 70 ಡೆಲ್ಟಾ ಪ್ಲಸ್ ಪ್ರಕರಣ ಪತ್ತೆಯಾಗಿವೆ.
ಮಕ್ಕಳಿಗಿಲ್ಲ ತೊಂದರೆ:
ಕೊರೊನಾ ಮೂರನೇ ಅಲೆಯು ಮಕ್ಕಳಿಗೆ ಮಾರಕವಾಗಲಿದೆ ಎಂಬ ಸುದ್ಧಿಯು ಹರಿದಾಡುತ್ತಿರುವ ಬೆನ್ನಲ್ಲೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯ ವರದಿ ಒಂದು ಮಹತ್ವದ ಸಂಗತಿಯನ್ನು ಹೇಳಿದ್ದು, ವಯಸ್ಕರಿಗಿಂತ ಮಕ್ಕಳಿಗೆ ಮೂರನೇ ಅಲೆ ಹೆಚ್ಚು ಬಾಧಿಸಲಿದೆ ಎಂಬುದಕ್ಕೆ ಯಾವುದೇ ಜೈವಿಕ ಪುರಾವೆ ಇಲ್ಲ ಎಂದು ಮಕ್ಕಳ ತಜ್ಞರು ಹೇಳಿದ ವಿಚಾರವು ಈ ವರದಿಯಲ್ಲಿದೆ.
ಇಂದಿನ ಕೊರೊನಾ ಪ್ರಕರಣ:
24 ಗಂಟೆಗಳಲ್ಲಿ ದೇಶಾದ್ಯಂತ 25,072 ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ತಿಳಿಸಿದೆ.
ಇದೇ ವೇಳೆ 44,157 ಮಂದಿ ಕಳೆದ 24 ತಾಸಿನಲ್ಲಿ ಗುಣಮುಖರಾಗಿದ್ದಾರೆ. ದೇಶದಲ್ಲಿ ಒಟ್ಟು 3,33,924 ಸಕ್ರಿಯ ಪ್ರಕರಣಗಳಿವೆ. ಇಲ್ಲಿಯವರೆಗೆ 3,16,80,626 ಮಂದಿ ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 389 ಮಂದಿ ಸಾವನ್ನಪ್ಪಿದ್ದಾರೆ. ಇಲ್ಲಿಯವರೆಗೆ ಒಟ್ಟು 4,34,756 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.
ಕಳೆದ 24 ಗಂಟೆಗಳಲ್ಲಿ 7,95,543 ಡೋಸ್ ಲಸಿಕೆ ನೀಡಲಾಗಿದೆ, ಇಲ್ಲಿಯವರೆಗೆ 58,25,49,595 ಡೋಸ್ ಲಸಿಕೆ ನೀಡಲಾಗಿದೆ.