ಕೋಟ: ರಕ್ಷಾ ಬಂಧನದ ಪ್ರಯುಕ್ತ ‘ಸ್ವಚ್ಛ ಹಂದಟ್ಟುವಿನತ್ತ ನಮ್ಮ ಚಿತ್ತ’ ಎನ್ನುವ ಧ್ಯೇಯದ ಅಡಿಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಪ್ರಕಾಶ್ ಹಂದಟ್ಟು ಮತ್ತು ಪೂಜಾ ಹಂದಟ್ಟು ಇವರ ನೇತೃತ್ವದಲ್ಲಿ ಹಂದಟ್ಟಿನಲ್ಲಿ ಹಲವು ಸಂಘ ಸಂಸ್ಥೆಗಳ ಸಹಕಾರದಲ್ಲಿ ಸ್ವಚ್ಛತಾ ಕಾರ್ಯ ನಡೆಸಿ ಅದರಿಂದ ದೊರೆತ ಹಸಿ ಹುಲ್ಲನ್ನು ಗೋವಿಗಾಗಿ ಮೇವು ಅಭಿಯಾನಕ್ಕೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಗೋವಿಗಾಗಿ ಮೇವು ಸ್ಥಾಪಕ ಸಂಚಾಲಕ ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ, ಕೋಟ ಶಿವರಾಮ ಕಾರಂತರಂತಹ ವಿಶ್ವ ಶ್ರೇಷ್ಠ ಸಾಹಿತಿಗಳನ್ನು, ಕೋಟ ಶ್ರೀನಿವಾಸ ಪೂಜಾರಿಯವರಂತಹ ನಾಯಕರನ್ನು ದೇಶಕ್ಕೆ ಕೊಟ್ಟ ಕೋಟದ ಪುಣ್ಯ ಭೂಮಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತದ ಪರಿಕಲ್ಪನೆಯೊಂದಿಗೆ ಗೋಮಾತೆಯ ಸೇವೆ ಮಾಡಿರುವ ಯುವ ಸಂಘಟನೆಗಳ ಕಾರ್ಯ ರಾಜ್ಯಕ್ಕೆ ಮಾದರಿ ಎಂದರು.
ಗೋವಿಗಾಗಿ ಮೇವು ಅಭಿಯಾನದ ಕೋಟ ವಲಯಾಧ್ಯಕ್ಷ ಪ್ರದೀಪ್ ಪೂಜಾರಿ, ಸಾಮಾಜಿಕ ಜಾಲತಾಣ ಸಂಚಾಲಕ ಪ್ರದೀಪ್ ಪಡುಕರೆ, ಮಹಿಳಾ ಅಧ್ಯಕ್ಷೆ ವಿದ್ಯಾ ಸಾಲ್ಯಾನ್, ಪಾಂಚಜನ್ಯ ಕ್ರಷ್ಣಮೂರ್ತಿ ಮುಂತಾದವರು ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಕೋಟತಟ್ಟು, ಗೆಳೆಯರ ಬಳಗ, ಯುವಕ ಸಂಘ ದಾನುಗುಂದು, ಅಭಿಯಾನ್ ಫ್ರೆಂಡ್ಸ್ ನಾಗಬನ ಹಂದಟ್ಟು, ಪಾಂಚಜನ್ಯ ಸಂಘ ಪಾರಂಪಳ್ಳಿ, ಮಹಿಳಾ ಸಂಘ ಹಂದಟ್ಟು, ಓಂ ಸ್ಟಾರ್ ಫ್ರೆಂಡ್ಸ್ ಗೊಬ್ನರಬೆಟ್ಟು, ನಿಸ್ವಾರ್ಥ್ ಸೇವಾ ಟ್ರಸ್ಟ್ (ರಿ) ಕೋಟ, ಕಟ್ಟೆ ಗೆಳೆಯರು ಹಂದೆ ದೇವಸ್ಥಾನ ಹಂದಟ್ಟು, ಮುಂತಾದ ಸಂಘಟನೆಗಳು ಭಾಗವಹಿಸಿದವು.