ಉಡುಪಿ: ಬೀದಿ ದೀಪಗಳ ಕಾರ್ಯನಿರ್ವಹಣೆ ಹೆಚ್ಚು ಕಡಿಮೆ ಸಂಜೆಯ ನಂತರ ಆರಂಭವಾಗಿ ಸೂರ್ಯೋದಯದವರೆಗೆ ಇರುತ್ತದೆ. ಆದರೆ ಉಡುಪಿ ನಗರಸಭಾ ವ್ಯಾಪ್ತಿಯ ಗೋಪಾಲಪುರ ವಾರ್ಡಿನ 4ನೇ ಮುಖ್ಯ ರಸ್ತೆಯಲ್ಲಿ ಕಳೆದ 10 ದಿನಗಳಿಂದ ದಿನದ 24 ಗಂಟೆಗಳ ಕಾಲ ಬೀದಿ ದೀಪಗಳು ಉರಿಯುವ ಮೂಲಕ ಜನರಿಗೆ ಹಗಲಿನ ವೇಳೆಯೂ ಕತ್ತಲಿನ ವಾತಾವರಣ ಉಂಟಾಗದಂತೆ ನೋಡಿಕೊಳ್ಳುತ್ತಿವೆ!
ಈ ಬಗ್ಗೆ ಸ್ಥಳೀಯರು ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತರುವ ಪ್ರಯತ್ನ ಮಾಡಿದರೂ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ನಾಗರಿಕರೊಬ್ಬರು ಹೇಳಿದ್ದಾರೆ. ಮುಖ್ಯಮಂತ್ರಿಯವರು ಎಲ್ಲಾ ಇಲಾಖೆಗಳಲ್ಲಿ ಸಂಪನ್ಮೂಲಗಳ ಸದ್ಬಳಕೆಯನ್ನು ಮಾಡಲು ಒತ್ತಿ ಹೇಳುವ ಕಾಲಘಟ್ಟದಲ್ಲಿ ಈ ರೀತಿ ಕಳೆದ ಹತ್ತು ದಿನಗಳಿಂದ ವಿದ್ಯುತ್ ಪೋಲಾಗುತ್ತಿರುವುದು ವಿಪರ್ಯಾಸ.
ವಿದ್ಯುತ್ ಪೋಲಾಗುವುದು ಒಂದೆಡೆಯಾದರೆ ಮತ್ತೊಂದೆಡೆ ನೂತನವಾಗಿ ಅಳವಡಿಸಿದ ದಾರಿ ದೀಪಗಳು ಕೂಡ ತನ್ನ ಕಾರ್ಯಕ್ಷಮತೆಯನ್ನು ಕಳೆದುಕೊಳ್ಳುತ್ತಿವೆ. ಈ ರೀತಿ ಯಾರದ್ದೋ ನಿರ್ಲಕ್ಷತನದಿಂದ ಜನರ ತೆರಿಗೆ ಹಣಕ್ಕೆ ಕತ್ತರಿ ಬೀಳುವ ಘಟನೆ ಇಲ್ಲಿ ಮಾತ್ರವಲ್ಲದೇ ಅದೆಷ್ಟೋ ಕಡೆಗಳಲ್ಲಿ ನಡೆಯುತ್ತಿರುವುದು ಬೇಸರದ ಸಂಗತಿ. ಇನ್ನಾದರೂ ಎಚ್ಚೆತ್ತುಕೊಳ್ಳುವರೇ? ಕಾದು ನೋಡಬೇಕಾಗಿದೆ.