ಕಾರ್ಕಳ: ಹುಟ್ಟು ಹಬ್ಬವನ್ನು ಅವರವರ ಇಚ್ಛೆಗನುಸಾರವಾಗಿ ಆಚರಿಸುವುದನ್ನು ನಾವು ನೋಡಿದ್ದೇವೆ. ಆದರೆ ಜ್ಞಾನಸುಧಾ ಸಂಸ್ಥಾಪಕರ ಹುಟ್ಟುಹಬ್ಬವನ್ನು ಹತ್ತಾರು ಸಮಾಜಮುಖಿ ಚಟುವಟಿಕೆಯ ಮೂಲಕ ಆಚರಿಸುತ್ತಿರುವುದು ಅತ್ಯಂತ ಪ್ರಶಂಸನೀಯವೆಂದು ಕರ್ನಾಟಕ ಸರಕಾರದ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ಹೇಳಿದರು.
ಅವರು ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಗೋಪಶೆಟ್ಟಿಯವರ ಜನ್ಮಶತಾಬ್ದಿ ನುಡಿನಮನ – ಸ್ನೇಹಕೂಟ ಹಾಗೂ ಅಟಲ್ ಟಿಂಕರಿಂಗ್ ಲ್ಯಾಬ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಂತಃಕರಣ ಶುದ್ಧವಿದ್ದಾಗ ಮಾತ್ರ ಇಂತಹ ಸಮಾಜಮುಖಿ ಕಾರ್ಯ ಮಾಡಲು ಸಾಧ್ಯ. ಪೋಷಕರ ಆಶಯದಂತೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಿ ಹೆತ್ತವರ ಪ್ರಶಂಸೆಗೆ ಒಳಗಾಗಿ, ರಾಜ್ಯಾದಾದ್ಯಂತ ಪ್ರಸಿದ್ದಿಯನ್ನು ಹೊಂದಿರುವಂತಹ ಜ್ಞಾನಸುಧಾ, ಕಾರ್ಕಳ ತಾಲೂಕಿಗೊಂದು ಗೌರವದ ಹೆಮ್ಮೆಯ ಸಂಸ್ಥೆಯಾಗಿದೆ ಎಂದರು.
ಇನ್ನೋರ್ವ ಮುಖ್ಯ ಅತಿಥಿಯಾಗಿದ್ದ ಉದ್ಯಮಿ ಬೋಳ ಪ್ರಭಾಕರ್ ಕಾಮತ್ ಮಾತನಾಡುತ್ತಾ, ಪ್ರತಿಭೆ ಬೆಳಕಿಗೆ ಬರಬೇಕಾದರೆ ಅದಕ್ಕೊಂದು ಸೂಕ್ತ ವೇದಿಕೆ ಬೇಕು. ಅಂತಹ ವೇದಿಕೆಯನ್ನು ಜ್ಞಾನಸುಧಾ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಗೆ ನೀಡಿ ಅವರ ಪ್ರತಿಭೆಯನ್ನು ಅನಾವರಣಗೊಳಿಸುವ ಕಾರ್ಯದಲ್ಲಿ ತೊಡಗಿರುವುದು ಅಭಿನಂದನೀಯ ಎಂದರು.
ಇದೇ ಸಂದರ್ಭದಲ್ಲಿ ಕಾರ್ಕಳ ಪುರಸಭೆ ಹಾಗೂ ಕುಕ್ಕುಂದೂರು ಮತ್ತು ಅಜೆಕಾರು ವ್ಯಾಪ್ತಿಯ 47 ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಜೆ.ಇ.ಇ.ಮೈನ್ ಪರೀಕ್ಷೆಯಲ್ಲಿ 98ಕ್ಕಿಂತ ಹೆಚ್ಚು ಪರ್ಸೆಂಟೈಲ್ ಗಳಿಸಿದ ವಿದ್ಯಾರ್ಥಿಗಳನ್ನು ಮತ್ತು
ದ್ವಿತೀಯ ಪಿಯುಸಿಯಲ್ಲಿ 600ಕ್ಕೆ 600 ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಜ್ಞಾನಸುಧಾ ಪತ್ರಿಕೆಯ 30ನೇ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಜ್ಞಾನಸುಧಾದ ದಶಮಾನೋತ್ಸವದ ಸಂಭ್ರಮದಲ್ಲಿ ಕಳೆದ ಹತ್ತು ವರ್ಷಗಳಿಂದ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಉದ್ಯೋಗಿಗಳನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭ ಕಾರ್ಕಳ ಪುರಸಭೆ ವ್ಯಾಪ್ತಿಯ ಪೌರ ಕಾರ್ಮಿಕರ ಮಕ್ಕಳು ಮುಂದಿನ ದಿನಗಳಲ್ಲಿ ಇಂಜಿನಿಯರಿಂಗ್ ಪ್ರವೇಶಾತಿಯನ್ನು ಗಳಿಸಿದರೆ ರೂ.10ಸಾವಿರ ಹಾಗೂ ವೈದ್ಯಕೀಯ ಪದವಿಗೆ ಪ್ರವೇಶಾತಿಯನ್ನು ಗಳಿಸಿದರೆ ರೂ.20ಸಾವಿರವನ್ನು ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ವತಿಯಿಂದ ನೀಡಲಾಗುವುದೆಂದು ಟ್ರಸ್ಟ್ ನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಘೋಷಿಸಿದರು.
ಎ.ಪಿ.ಜಿ.ಇ.ಟಿ ವತಿಯಿಂದ ಡಾ.ಸುಧಾಕರ್ ಶೆಟ್ಟಿಯವರು ನೂತನ ಸಚಿವರಿಗೆ ಅಭಿನಂದನೆಯನ್ನು ಸಲ್ಲಿಸಿದರು. ಎ.ಪಿ.ಜಿ.ಇ.ಟಿ ಟ್ರಸ್ಟಿ ಕರುಣಾಕರ್ ಶೆಟ್ಟಿ ಸ್ವಾಗತಿಸಿ, ಪಿ.ಆರ್.ಓ ಜ್ಯೋತಿ ಪದ್ಮನಾಭ ಭಂಡಿ ವಂದಿಸಿದರು. ಉಪನ್ಯಾಸಕಿ ಸಂಗೀತಾ ಕಾರ್ಯಕ್ರಮ ನಿರೂಪಿಸಿದರು.