ಕೊರೊನಾ ಸಾಂಕ್ರಾಮಿಕ ರೋಗದ 1ನೇ ಮತ್ತು ಎರಡನೆಯ ಅಲೆಯು ಮಕ್ಕಳ ಶಿಕ್ಷಣದ ಮೇಲೆ ಅಗಾಧವಾದ ಪರಿಣಾಮ ಬೀರಿದೆ, ಹಿಂದಿನ ಪರಿಸ್ಥಿತಿ ಪುನಃ ಮರುಕಳಿಸಿದೆ. ಇತ್ತೀಚಿನ ದಿನಗಳಲ್ಲಿ ಉಡುಪಿ ನಗರದಲ್ಲಿ ಹೆಚ್ಚಾಗಿ ಮಕ್ಕಳು ಭಿಕ್ಷಾಟನೆಯಲ್ಲಿ ಮತ್ತು ಆಟಿಕೆ ಮಾರಾಟದಲ್ಲಿ ತೊಡಗಿಕೊಂಡಿದ್ದು ಕಂಡುಬರುತ್ತಿರುವುದು ಬೇಸರದ ಸಂಗತಿ. ಈ ವಿಚಾರವಾಗಿ ಖುದ್ದಾಗಿ ನಾನು ಭಿಕ್ಷಾಟನೆ ಮಾಡುವ ಮತ್ತು ಆಟಿಕೆ ಮಾರುತ್ತಿದ್ದ ಮಕ್ಕಳನ್ನು ವಿಚಾರಿಸಿದಾಗ, ಮಗುವಿನಿಂದ ನನಗೆ ಸಿಕ್ಕ ಉತ್ತರ ಕೇಳಿದರೆ, ನಿಜವಾಗಿಯೂ ಒಮ್ಮೆ ದಿಗ್ಬ್ರಮೆಯಾಗುತ್ತೀರಾ.
“ನನ್ನ ತಂದೆ ತಾಯಿಗೆ ಕೆಲಸ ಇಲ್ಲ, ನನ್ನನ್ನು ನನ್ನ ತಂದೆ ತಾಯಿಯವರೇ ಭಿಕ್ಷಾಟನೆಗೆ ಕಳುಹಿಸಿದ್ದಾರೆ. ನಾವು ಭಿಕ್ಷೆ ಬೇಡಿದರೆ ಮಾತ್ರ ನಮಗೆ ಒಂದು ಹೊತ್ತಿನ ಊಟ ಸಿಗುವುದು” ಈ ಮಾತನ್ನು ಕೇಳಿ ನನಗೆ ಬೇರೆ ಮಾತುಗಳೇ ಬರಲಿಲ್ಲ. ಇದಕ್ಕೆಲ್ಲ ನಾವು ಮತ್ತು ಆ ಮಗುವಿನ ತಂದೆ ತಾಯಿಯವರೇ ಕಾರಣ.
ಆದರೂ ನಾನೂ ಅಲ್ಲಿಗೆ ಸುಮ್ಮನ್ನಾಗಲಿಲ್ಲ, ಮಗುವಿನ ಹಿಂದೆಯೇ ಹೊರಟೆ. ಹೊರಟಾಗ ಇನ್ನೂಂದು ಆಶ್ಚರ್ಯದ ವಿಚಾರ ಕಾದಿತ್ತು. ಏನೆಂದರೆ, ಆ ಮಗುವಿನ ತಾಯಿ ಅಲ್ಲಿ ಕುಳಿತು “ನೀನು ತಂದದ್ದು ಹಣ ಕಡಿಮೆಯಾಗಿದೆ, ಇನ್ನೂ ಹೆಚ್ಚು ಭಿಕ್ಷೆ ಬೇಡಿ ತಂದು ಕೊಡು” ಎಂದು ಆ ಮಗುವಿಗೆ ಗದರಿಸುತ್ತಿರುವುದನ್ನು ನೋಡಿದೆ. ಅದನ್ನು ನೋಡಿ ನನಗೆ ಮತ್ತಷ್ಟು ಕೋಪ ಬಂತಾದರೂ ಸುಮ್ಮನಾದೆ. ಇದಕ್ಕೆಲ್ಲಾ ಪರೋಕ್ಷವಾಗಿ ನಾವೇ ಕಾರಣ ಎಂದು ಮನಸ್ಸಿನಲ್ಲಿ ಅಂದುಕೊಂಡೆ.
ಆ ಮಗುವಿನ ತಾಯಿಯನ್ನು ವಿಚಾರಿಸಿದಾಗ, ಇವರು ಉಡುಪಿ ಜಿಲ್ಲೆಗೆ ವಲಸೆ ಬಂದು ಇಲ್ಲಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದವರು. ಕೊರೊನಾ ಕಾರಣದಿಂದ ಕೆಲಸ ಇಲ್ಲದೆ ಭಿಕ್ಷೆ ಬೇಡುತ್ತಿದ್ದಾರೆ. ಇವರು ಬೇಡುವುದಲ್ಲದೆ, ಮಕ್ಕಳಿಗೂ ಅದೇ ಪಾಠವನ್ನು ಹೇಳಿಕೊಡುತ್ತಿದ್ದಾರೆ. ಇದು ಮಕ್ಕಳ ಭವಿಷ್ಯಕ್ಕೆ ಕಂಟಕವಾಗಲಿದೆ.
ಆದಷ್ಟೂ ಬೇಗ ಸರಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿದೆ. 6-10 ವರ್ಷದೊಳಗಿನ ಒಟ್ಟು 5 ಮಕ್ಕಳು ಅದರಲ್ಲಿ, ಹೆಣ್ಣು ಮಕ್ಕಳೇ ಈ ಭಿಕ್ಷಾಟನೆಯಲ್ಲಿ ತೊಡಗಿದ್ದಾರೆ ಮತ್ತು ತಾಯಂದಿರು ಕೂಡ 2-4 ವರ್ಷದ ಮಗುವನ್ನು ಎತ್ತಿಕೊಂಡು ಭಿಕ್ಷೆ ಬೇಡುತ್ತಿರುವುದು ಕಂಡು ಬಂದಿದ್ದು, ಇದು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅವರಿಗೆ ಎಷ್ಟು ಬುದ್ದಿವಾದ ಹೇಳಿದರೂ ಕೇಳುತ್ತಿಲ್ಲ. ಈ ಬಗ್ಗೆ ಮಕ್ಕಳ ಸಹಾಯವಾಣಿಗೂ ದೂರು ನೀಡಲಾಗಿದೆ. ಅವರು ಬುದ್ದಿವಾದ ಹೇಳಿ ಮತ್ತು ಈ ಕುರಿತು ಸಂಬಂಧಪಟ್ಟ ಇಲಾಖೆಗೆ ತಿಳಿಸಿದರೂ ಕೂಡ ಇದು ಹೆಚ್ಚುತಲೇ ಇದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತುರ್ತಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು.
-ವಿವೇಕ ಕುಂದಾಪುರ