ಉಡುಪಿ: ಇಂದು ಕಾರ್ಗಿಲ್ ವಿಜಯ ದಿನ. ಯೋಧರೆಂದರೆ ಪ್ರಾತಃಸ್ಮರಣೀಯರು. ಯೋಧರ ತ್ಯಾಗವನ್ನು ವರ್ಣಿಸಲು ಅಸಾಧ್ಯ. ದೇಶದ ಒಳಿತಿಗಾಗಿ ತನ್ನ ಸರ್ವಸ್ವವನ್ನು ತ್ಯಾಗಮಾಡುವ ಭಾರತ ಮಾತೆಯ ಹೆಮ್ಮೆಯ ಸುಪುತ್ರರಲ್ಲಿ ಓರ್ವರಾದ ಉಡುಪಿ ಜಿಲ್ಲೆಯ ಜಗದೀಶ್ ಪ್ರಭು ಹಿರಿಯಡ್ಕ ಇವರೊಂದಿಗೆ ‘ಉಡುಪಿ ಬುಲೆಟಿನ್’ ನಡೆಸಿದ ವಿಶೇಷ ಸಂದರ್ಶನದ ಸಂಪೂರ್ಣ ವಿವರ.
ಪ್ರಶ್ನೆ: ನಮಸ್ಕಾರ ಸರ್. ಸೈನ್ಯಕ್ಕೆ ಸೇರಲು ನಿಮಗೆ ಪ್ರೇರಣೆ ಹೇಗೆ ಸಿಕ್ಕಿತು?
ಜಗದೀಶ್ ಪ್ರಭು: ನಮಸ್ಕಾರ. ಸೈನ್ಯಕ್ಕೆ ಸೇರಿ ದೇಶಸೇವೆ ಮಾಡಬೇಕೆಂಬ ಮಹದಾಸೆಯು ಬಾಲ್ಯದಲ್ಲಿಯೇ ನನ್ನಲ್ಲಿ ಮೊಳಕೆಯೊಡೆಯಿತು. ಹತ್ತನೇ ತರಗತಿಯಲ್ಲಿ ಇರುವಾಗಲೇ ಬೆಳಿಗ್ಗೆ 5 ಗಂಟೆಗೆ ಎದ್ದು ಓಟ, ನಡಿಗೆ ಇನ್ನಿತರ ವ್ಯಾಯಾಮವನ್ನು ಸ್ವಯಂ ಪ್ರೇರಣೆಯಿಂದ ನಡೆಸಲು ಆರಂಭಿಸಿದೆ. ಸೈನ್ಯಕ್ಕೆ ಬೇಕಾದ ಪೂರ್ವಸಿದ್ಧತೆಗಳು ಅಚ್ಚುಕಟ್ಟಾಗಿ ನಡೆಸಿ 1986 ರಲ್ಲಿ ಸೈನ್ಯಕ್ಕೆ ಸೇರ್ಪಡೆಯಾದೆ. ದೈಹಿಕ ಮತ್ತು ಮಾನಸಿಕವಾಗಿ ಸಿದ್ಧತೆಗಳನ್ನು ಆಸಕ್ತಿಯಿಂದಲೇ ನಡೆಸಿ ಸೈನ್ಯಕ್ಕೆ ಸೇರುವಲ್ಲಿ ಯಶಸ್ವಿಯಾದೆ.
ಪ್ರಶ್ನೆ: ನೀವು ಸೈನ್ಯಕ್ಕೆ ಸೇರ್ಪಡೆಯಾದ ಬಳಿಕ ನಿಮಗೆ ಯಾವೆಲ್ಲಾ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ಅವಕಾಶಗಳು ಒದಗಿಬಂತು?
ಉತ್ತರ: ಕಾರ್ಗಿಲ್ ಯುದ್ಧದ ಸಮಯದಲ್ಲಿ ಉರಿ ಸೆಕ್ಟರ್ ನಲ್ಲಿ ಕಾರ್ಯನಿರ್ವಹಿಸಿದ್ದೇನೆ, ಜೋಧಪುರ್, ಬಬಿನಾ, ಫತೇಗಢ, ದೆಹಲಿ, ಝಾನ್ಸಿ, ಕಲ್ಕತ್ತ ಮತ್ತು ಪುಣೆಯಲ್ಲಿ ಕಾರ್ಯನಿರ್ವಹಿಸಿದ್ದೇನೆ. ಇವುಗಳಲ್ಲಿ ಕಾರ್ಗಿಲ್ ಯುದ್ಧದ ಸಮಯದಲ್ಲಿ ಉರಿ ಸೆಕ್ಟರ್ ನಲ್ಲಿ ನಾನು ಕಾರ್ಯನಿರ್ವಹಿಸಿದ ರೀತಿ ಮತ್ತು ಸಾವಿನ ದವಡೆಯಿಂದ ಪಾರಾಗಿ ಬಂದಿರುವ ಘಟನೆ ಇಂದಿಗೂ ನನ್ನ ಕಣ್ಣ ಮುಂದೆ ಸ್ಪಷ್ಟವಾಗಿ ಬರುತ್ತದೆ.
ಪ್ರಶ್ನೆ: ಕಾರ್ಗಿಲ್ ಯುದ್ಧದ ಸಮಯದಲ್ಲಿ ನಿಮ್ಮ ದಿನಚರಿ ಯಾವ ರೀತಿ ಇತ್ತು?
ಉತ್ತರ: ಕಾರ್ಗಿಲ್ ಯುದ್ಧದ ಸಮಯದಲ್ಲಿ ನನ್ನನ್ನು ಉರಿ ಸೆಕ್ಟರ್ ನಲ್ಲಿ ನಿಯೋಜನೆ ಮಾಡಲಾಗಿತ್ತು. ಉರಿ ಸೆಕ್ಟರ್ ಭೌಗೋಳಿಕವಾಗಿ ಹೆಚ್ಚು ಕಡಿಮೆ ಸಿಯಾಚಿನ್ ಹಾಗೆನೇ ಇತ್ತು. ತೀವ್ರವಾದ ಹಿಮಪಾತ, ಈ ಪ್ರದೇಶದಲ್ಲಿ ಮೂರು ತಿಂಗಳು ಹಿಮಪಾತ ನಡೆಯುತ್ತದೆ. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಭೀಕರವಾದ ಶೆಲ್ಲಿಂಗ್ ಉಭಯ ಕಡೆಗಳಿಂದಲೂ ನಡೆಯುತ್ತಿತ್ತು. ನಮ್ಮ ಕಡೆಯಿಂದ ದಿನಗಳು ಕಳೆದಂತೆ ಪ್ರತಿರೋಧದ ತೀವ್ರತೆ ಹೆಚ್ಚತೊಡಗಿತು.
ನಾನು 21 ದಿನಗಳ ಕಾಲ ಕೇವಲ ನೀರು ಮತ್ತು ಬ್ರೆಡ್ ಸೇವಿಸಿ ಬಂಕರ್ ನಲ್ಲಿ ಅವಿತುಕೂತುಕೊಂಡು ದಾಳಿಯನ್ನು ನಡೆಸುತ್ತಿದ್ದೆ. ನನ್ನ ಸುತ್ತಮುತ್ತಲೂ ಶೆಲ್ ಗಳು ಹಾದುಹೋಗುತ್ತಿದ್ಧ ದೃಶ್ಯಗಳು ಈಗ ಕೂಡ ನೆನಪಿಗೆ ಬರುತ್ತದೆ. ನಮ್ಮವರು ಗಾಯಗೊಂಡಾಗ, ಸಾವನ್ನಪ್ಪಿದ್ದಾಗ ಅವರನ್ನು ಹೆಲಿಕಾಪ್ಟರ್ ಮೂಲಕ ಸಾಗಾಟ ಮಾಡುವ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದೆ. ಎಲ್ಲಿಯವರೆಗೆ ಅಂದರೆ ಶೆಲ್ಲಿಂಗ್ ನಿಂತಿದೆ ಎಂದು ಸಂದೇಶ ಬಂದಾಗ ವಯಕ್ತಿಕ ಕೆಲಸಗಳನ್ನು ನಿರ್ವಹಿಸಲು ಹೋಗುತ್ತಿದ್ದೆ.
ನಿದ್ದೆ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಅಲ್ಲಿ ಉದ್ಭವಿಸಿತ್ತು. ಕಣ್ಣಿನಲ್ಲಿ ಎಣ್ಣೆಯನ್ನು ಹಾಕಿದ ಹಾಗೆ 24 ಗಂಟೆಯೂ ಅಲೆರ್ಟ್ ಆಗಿ ಗಡಿಯನ್ನು ಕಾಯಲು ನಿಂತಿದ್ದೆ. ಕಾರ್ಗಿಲ್ ಯುದ್ಧ ಗೆದ್ದ ದಿನ ನಮ್ಮ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ಅಂದು ಉರಿ ಸೆಕ್ಟರ್ ನಲ್ಲಿ ನಾವು ಕುಣಿದು ಕುಪ್ಪಳಿಸಿದ ನೆನಪು ಇನ್ನೂ ಅಳಿಸಿಹೋಗಿಲ್ಲ, ಹೋಗುವುದು ಕೂಡ ಇಲ್ಲ ಬಿಡಿ. (ನಗುತ್ತಲೇ ಉತ್ತರಿಸಿದರು)
ಪ್ರಶ್ನೆ: ನಿಮಗೆ ಸೈನ್ಯದಲ್ಲಿ ಸಿಕ್ಕಿರುವ ಪದಕಗಳ ಬಗ್ಗೆ ಸ್ವಲ್ಪ ಹೇಳಿ?
ಉತ್ತರ: ಹೆಚ್ಚಿನವರು ಮಧ್ಯದಲ್ಲಿ ಸೇನೆಯನ್ನು ಬಿಟ್ಟು ವಾಪಾಸಾಗುತ್ತಾರೆ. ಆದರೆ ನಾನು ಸುದೀರ್ಘವಾದ ಅವಧಿಯನ್ನು ಸೈನ್ಯದಲ್ಲಿ ಕಳೆದ ಕಾರಣ ನನಗೆ ’ಲಾಂಗ್ ಸರ್ವಿಸ್ ಮೆಡಲ್’ ಸಿಕ್ಕಿದೆ. ಇದರ ಜೊತೆಯಲ್ಲಿ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದಕ್ಕಾಗಿ ’ಆಪರೇಶನ್ ವಿಜಯ್ ಮೆಡಲ್’ ಮತ್ತು ’ಜಮ್ಮು ಕಾಶ್ಮೀರ್ ಮೆಡಲ್’ ಸಿಕ್ಕಿದೆ. ಈ ಪದಕಗಳಿಗಿಂತ ದೇಶಸೇವೆ ಮಾಡಲು ಅವಕಾಶ ಸಿಕ್ಕಿರುದೇ ನನ್ನ ಪಾಲಿಗೆ ದೊಡ್ಡ ಪದಕ.
ಪ್ರಶ್ನೆ: ಯುವಜನತೆಗೆ ಯಾವ ಸಂದೇಶ ನೀಡಲು ಬಯಸುತ್ತೀರಿ?
ಉತ್ತರ: ಯುವಜನತೆ ನಮ್ಮ ದೇಶಕ್ಕೆ ದೊಡ್ಡ ಆಸ್ತಿ. ಯುವಜನತೆ ತಮ್ಮ ಜೀವನದಲ್ಲಿ ವಿಜಯವನ್ನು ಪಡೆಯಬೇಕು. ದೇಶಸೇವೆ ಮಾಡುವ ದೃಢಸಂಕಲ್ಪವನ್ನು ಮಾಡುವ ಮೂಲಕ ದೇಶಕ್ಕಾಗಿ ತಮ್ಮ ಪಾತ್ರವನ್ನು ಪರಿಣಾಮಕಾರಿಯಾಗಿ ನಿಭಾಯಿಸಬೇಕು. ಸೈನ್ಯಕ್ಕೆ ಸೇರಲು ಗಟ್ಟಿ ಮನಸ್ಸು ಮಾಡಿ ಅದಕ್ಕೆ ಬೇಕಾದ ಪೂರ್ವತಯಾರಿಗಳನ್ನು ನಡೆಸಿ. ಜೀವನದಲ್ಲಿ ಶಿಸ್ತನ್ನು ಮೈಗೂಡಿಸಿಕೊಳ್ಳುವ ಮೂಲಕ ಒಳ್ಳೆಯ ಜೀವನವನ್ನು ನಡೆಸಲು ಮುನ್ನುಡಿ ಬರೆಯಬೇಕು. ಜೈ ಹಿಂದ್, ವಂದೇ ಮಾತರಂ.