ಹಿರಿಯಡಕ, ಏ.17: ಬದುಕಿನ ಏರಿಳಿತಗಳನ್ನು ಅನುಭವಿಸುತ್ತಾ ಅದರ ಸಿಹಿ-ಕಹಿಗಳನ್ನು ಕರಗಿಸಿ ಎರಕ ಹೊಯ್ದಂತೆ ನೆಲಕ್ಕೆ ಅಂಟಿಕೊಂಡು ಬದುಕಿದ ಶ್ರಮ ಜೀವಿಗಳ ಶ್ರಮ ಸಂಭ್ರಮದ ಸತ್ಫಲವೇ ಜಾನಪದ ಎಂದು ನಿವೃತ್ತ ಕನ್ನಡ ಪ್ರಾಧ್ಯಾಪಕ ರಘುರಾಮ್ ಶೆಟ್ಟಿ ಊರಬೈಲು ಹೇಳಿದರು. ಅವರು ಹಿರಿಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಮತ್ತು ಸಾಂಸ್ಕೃತಿಕ ವೇದಿಕೆಗಳು ಜಂಟಿಯಾಗಿ ಆಯೋಜಿಸಿದ ಜಾನಪದ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ. ಜಯಪ್ರಕಾಶ್ ಶೆಟ್ಟಿ ಹೆಚ್ ಅವರು, ಕೋಟೆ ಕಟ್ಟಿಕೊಂಡು ಬದುಕಿದ ರಾಜರು ಮತ್ತು ಸಿರಿವಂತರ ಬಾಳಿಗಿಂತ ಭಿನ್ನವಾಗಿ ಬಾಗಿಲು ತೆರೆದುಕೊಂಡು ಬದುಕಿದ ಜಾನಪದ ಜಗತ್ತು ಒಳಗೊಳ್ಳುವಿಕೆಯ ಪ್ರಜಾಸತ್ತಾತ್ಮಕ ಮಾದರಿಯ ಜೀವಪರ ಗುಣವುಳ್ಳದ್ದು ಎಂದರು.
ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಭಟ್, ಐಕ್ಯುಎಸಿ ಸಂಚಾಲಕ ಡಾ. ಲಿತಿನ್ ಬಿ ಎಂ., ವಿದ್ಯಾರ್ಥಿ ನಾಯಕರುಗಳಾದ ರಕ್ಷಿತ್, ವಿನುತಾ, ಓಂಕಾರ್, ಕೌಶಿಕ್ ಹಾಗೂ ದೀಕ್ಷಾ ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಸಂಚಾಲಕಿ ಡಾ. ಸೌಮ್ಯಲತಾ ಪಿ ಸ್ವಾಗತಿಸಿ, ಸಾಂಸ್ಕೃತಿಕ ವೇದಿಕೆ ಸಂಚಾಲಕಿ ಮೀನಾಕ್ಷಿ ನಾಯ್ಕ್ ವಂದಿಸಿ, ವಿಖ್ಯಾತ್ ಕುಲಾಲ್ ಪ್ರಾರ್ಥಿಸಿದರು. ರವಿಚಂದ್ರ ಬಾಯಿರಿ ಕೆ ನಿರೂಪಿಸಿದರು. ಜಾನಪದ ಉತ್ಸವದ ಅಂಗವಾಗಿ ಸ್ಥಳೀಯ ಆಹಾರ ವೈವಿಧ್ಯಗಳ ಆಹಾರಮೇಳ, ಜಾನಪದ ವಸ್ತು ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.




By
ForthFocus™