Home ಸುದ್ಧಿಗಳು ಪ್ರಾದೇಶಿಕ ಉಡುಪಿ ಸೀರೆ ವಿಶ್ವಮಾನ್ಯತೆ ಪಡೆಯುವಂತಾಗಲಿ: ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

ಉಡುಪಿ ಸೀರೆ ವಿಶ್ವಮಾನ್ಯತೆ ಪಡೆಯುವಂತಾಗಲಿ: ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

274
0

ಉಡುಪಿ, ಮಾ. 26: ಉಡುಪಿಯ ಹೆಮ್ಮಯೆ ಕೈಮಗ್ಗದ ಸೀರೆ ಆದ ಭೌಗೋಳಿಕ ವಿಶಿಷ್ಠತೆ ಮಾನ್ಯತೆ ಪಡೆದಿರುವ ಉಡುಪಿ ಸೀರೆಯ ಉತ್ಪಾದನೆಯು ಅಧಿಕಗೊಂಡು, ವಿಶ್ವ ಮಾನ್ಯತೆ ಪಡೆಯುವಂತಾಗಲಿ ಎಂದು ಜಿಲ್ಲಾಧಿಕಾರಿ ಕೂರ್ಮರಾವ್ ಎಂ ಹೇಳಿದರು. ಅವರು ಭಾನುವಾರ ರಜತಾದ್ರಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ , ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ- ಸಂಜೀವಿನಿ, ಜಿಲ್ಲಾ ಖಜಿನ ಪ್ರತಿಷ್ಠಾನ ಟ್ರಸ್ಟ್, ಕೈಮಗ್ಗ ಮತ್ತು ಜವಳಿ ಇಲಾಖೆ, ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಗ ಇವರ ಸಹಯೋಗದಲ್ಲಿ ನಡೆದ, ಉಡುಪಿ ಕೈ ಮಗ್ಗ ಸೀರೆ ನೇಯ್ಗೆ ತರಬೇತಿಯ ಉದ್ಘಾಟನೆಯನು ನೆರವೇರಿಸಿ ಮಾತನಾಡಿದರು.

ಉಡುಪಿಯ ವಿಶಿಷ್ಠ ಹಾಗೂ ಹೆಮ್ಮಯಾದ ಉಡುಪಿ ಸೀರೆಯ ಬಗ್ಗೆ ದೇಶದ ವಿತ್ತ ಸಚಿವರು ಕೂಡಾ ಅದನ್ನು ಧರಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದು ಇಂತಹ ಸೀರೆಯನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಉತ್ಪಾದಿಸಿ ಎಲ್ಲಡೆ ದೊರೆಯುವಂತೆ ಮಾಡುವ ಉದ್ದೇಶದಿಂದ ಆರಂಭಿಸಿರುವ ಈ ನೇಯ್ಗೆ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿದ್ದು, ಇಲ್ಲಿ ತರಬೇತಿ ಪಡೆದವರು ಇನ್ನೂ ಹೆಚ್ಚು ಬದ್ದತೆಯಿಂದ ಅತ್ಯುತ್ತಮ ರೀತಿಯ ಉಡುಪಿ ಸೀರೆಗಳನ್ನು ತಯಾರಿಸುವ ಮೂಲಕ ವಿಶ್ವದಾದ್ಯಂತ ಇದನ್ನು ಪ್ರಸಿದ್ದಿಗೊಳಿಸುವಂತೆ ತಿಳಿಸಿದರು.

ತರಬೇತಿ ನಿರತ ಐ.ಎ.ಎಸ್ ಅಧಿಕಾರಿ ಯತೀಶ್ ಮಾತನಾಡಿ, ಭೌಗೋಳಿಕ ವಿಶಿಷ್ಠತೆ, ಮಾನ್ಯತೆ ಪಡೆದಿರುವ ಉಡುಪಿ ಸೀರೆಗಳು ಉಡುಪಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ದೊರೆಯದೇ ಇರುವುದನ್ನು ಗಮನಿಸಿ, ಆಸಕ್ತರನ್ನು ಗುರುತಿಸಿ ಈ ತರಬೇತಿ ನೀಡುತ್ತಿದ್ದು, ಇವರಿಗೆ 6 ತಿಂಗಳ ಕಾಲ ಇವರಿಗೆ ಅಗತ್ಯ ತರಬೇತಿ ನೀಡುವುದರ ಜೊತೆಗೆ ಕೇಂದ್ರ ಮತ್ತು ರಾಜ್ಯ ಜವಳಿ ಇಲಾಖೆಯಲ್ಲಿ ಲಭ್ಯವಿರುವ ಹಲವು ಸೌಲಭ್ಯಗಳನ್ನು ದೊರಕಿಸಲಗುವುದು. ಹಾಗೂ ಇವರು ತಯಾರಿಸಿದ ಸೀರೆಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆಯನ್ನು ಒದಗಿಸಿ ಹೆಚ್ಚಿನ ಲಾಭದಾಯಕ ಚಟುವಟಿಕೆಯನ್ನಾಗಿ ಮಾಡುವ ಗುರಿ ಹೊಂದಲಾಗಿದೆ ಎಂದರು.

ಉಡುಪಿ ಪ್ರಾಥಮಿಕ ನೇಕಾರರ ಸಹಕಾರ ಸಂಘದ ಅಧ್ಯಕ್ಷ ರತ್ನಾಕರ ಇಂದ್ರಾಳಿ ಮಾತನಾಡಿ, ಅಪೂರ್ವ ಕರಕುಶಲ ಕಲೆಯಾದ ನೇಕಾರಿಕೆಯನ್ನು ಉಳಿಸಿ, ಬೆಳಸುವುದು ಅಗತ್ಯವಿದೆ. ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಈ ಕ್ಷೇತ್ರಕ್ಕೆ ಬರುವ ನಿಟ್ಟಿನಲ್ಲಿ ನೇಕಾರಿಕೆ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಹಾಗೂ ಹೆಚ್ಚಿನ ಲಾಭದಾಯಕ ಉದ್ಯಮವನ್ನಾಗಿಸಬೇಕು ಎಂದರು. ಕೇಂದ್ರ ಸರ್ಕಾರದ ಮುದ್ರಾ ಯೋಜನೆಯಡಿ ಸಾಲ ಸೌಲಭ್ಯದ ಚೆಕ್ ಹಾಗೂ ಜವಳಿ ಇಲಾಖೆವತಿಯಿಂದ ನೀಡಲಾದ ಸವಲತ್ತುಗಳನ್ನು ವಿತರಿಸಲಾಯಿತು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್., ಜಿಲ್ಲಾ ಜವಳಿ ಮತ್ತು ಕೈಮಗ್ಗ ಇಲಾಖೆಯ ಸಹಾಯಕ ನಿರ್ದೇಶಕ ಶಿವಶಂಕರ್, ದಕ್ಷಿಣ ಕನ್ನಡ ಪದ್ಮಶಾಲಿ ಸಂಘದ ಅಧ್ಯಕ್ಷ ರಾಮದಾಸ ಶೆಟ್ಟಿಗಾರ್, ವಿದ್ಯಾವರ್ಧಕ ಸಂಘದ ಅಧ್ಯಕ್ಷ ಲಕ್ಷ್ಮಣ ಕೊಡಿಯಾಲಬೈಲು, ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ನಾಮ ನಿರ್ದೇಶಿತ ಸದಸ್ಯ ಮಾದವ ಶೆಟ್ಟಿಗಾರ್ ಕೆರೆಕಾಡು ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.