Home ಓದುಗರ ಮನದಾಳ ಸ್ವಾರ್ಥಿಯಾಗು

ಸ್ವಾರ್ಥಿಯಾಗು

ಕವಿತೆ

473
0

ಸ್ವಾರ್ಥಿಯಾಗು

ಒಂದು ಚಿತ್ರದ ಸೌಂದರ್ಯತೆ
ಅಡಗಿರುವುದು
ಅದು ಅಪೂರ್ಣವಾಗಿದ್ದರೂ
ಪರಿಪೂರ್ಣವಾಗಿದೆ ಎಂದು
ತೋರಿಸುವ ಭಾವದಲ್ಲೋ?
ಅಥವಾ
ಚಿತ್ರ ಪರಿಪೂರ್ಣವಾಗದೇ
ಅದಕ್ಕೆ ಸೌಂದರ್ಯತೆ ಬರುವುದೋ?
ಸುಂದರತೆ ಎನ್ನುವುದು
ಕಲೆಗಾರನ ಕುಂಚದಲ್ಲಿದೆಯೋ?
ಅಥವಾ ನೋಡುಗನ ನೋಟದಲ್ಲಿದೆಯೋ?

ಪ್ರೀತಿ ಎನ್ನುವುದು ನಿನ್ನಲ್ಲಿರುವುದೋ?
ಅಥವಾ ನೀನು ಬೇರೆಯವರಿಂದ ಪಡೆಯುವುದೋ?
ಸಂತೋಷವೆನ್ನುವುದು
ಹೊರ ಜಗತ್ತಿನಿಂದ ಸಿಗುವುದೋ?
ಅಥವಾ ನಿನ್ನೊಳಗೆ ಝುರಿಯಾಗಿ ಹರಿಯುತ್ತಿರುವುದೋ?

ಹಣದ ಹೊಳೆಯಲ್ಲಿ ಹರಿಯುವ
ಮೋಜು ಮಾಡುವವನ ಸುಖ ಶಾಶ್ವತವೋ?
ಅಥವಾ ದೇಶಕ್ಕೋಸ್ಕರ ಬಲಿದಾನ ಮಾಡುವ ಸೈನಿಕ
ಸಾವಿನಲ್ಲಿ ನೋಡುವ ಸುಖ ಶಾಶ್ವತವೋ?

ಬೇರೆಯವರಿಗಾಗಿ ತಾನು
ಬದುಕುವುದು ಬದುಕೋ?
ತನಗಾಗಿ ಬದುಕುವುದು
ನಿಜವಾದ ಬದುಕೋ?

ಬೇರೆಯವರಿಗಾಗಿ ಬದುಕಲು
ತಾನು ಬದುಕಿರಲೇಬೇಕು ತಾನೇ?!
ಆಗ ಆ ಬದುಕಬೇಕೆಂಬ ಭಾವ
ಸ್ವಾರ್ಥವೋ ನಿಸ್ವಾರ್ಥವೋ?

ಸ್ವಾರ್ಥಿಯಾಗು ಓ ಮನುಜ
ಬೇರೆಯವರಿಗೆ ಒಳ್ಳೆಯದನ್ನು ಮಾಡಬೇಕು
ಎಂಬ ಸ್ವಾರ್ಥಿಯಾಗು.
ನೊಂದ ಜೀವಗಳಿಗೆ
ಪ್ರೀತಿ ನೀಡಬೇಕೆಂಬ ಸ್ವಾರ್ಥಿಯಾಗು.

ಆದರೆ ಅತಿಯಾದರೆ ಅಮೃತವೂ ವಿಷ
ಅತಿಯಾಗಿ ಯಾವುದನ್ನೂ ನೀಡಬೇಡ
ನಿಧಾನಿಸು, ನಿಧಾನಿಸು
ಪ್ರೀತಿ, ನಗುವನ್ನು ಹಂಚುತ ಮುನ್ನಡೆ.

– ಜಯಶ್ರೀ ನಾಯಕ್

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.