ಮಂಗಳೂರು, ನ.23: ‘ಸಾರ ಸಂಸ್ಥೆ’ ‘ಪರಿಸರಕ್ಕಾಗಿ ನಾವು’ ವೇದಿಕೆಯ ಸಹಯೋಗದೊಂದಿಗೆ ಡಾ. ಪಿ. ದಯಾನಂದ ಪೈ-ಪಿ.ಸತೀಶ್ ಪೈ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು ಇಲ್ಲಿ ‘ಸಹ್ಯಾದ್ರಿ ಸಂವಾದ’ ಎನ್ನುವ ಪರಿಸರದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪಶ್ಚಿಮ ಘಟ್ಟದ ಸಂಕೀರ್ಣ ಪರಿಸರದ ಕುರಿತು, ಅಲ್ಲಿನ ಜೀವ ವೈವಿಧ್ಯತೆಯ ಕುರಿತು ಹಾಗೂ ಇತ್ತೀಚಿನ ದಿನಗಳಲ್ಲಿ ಪಶ್ಚಿಮ ಘಟ್ಟದ ಮೇಲೆ ಮಾನವರಿಂದ ಆಗುತ್ತಿರುವ ಅತಿಕ್ರಮಣ ಹಾಗೂ ಪರಿಸರ ನಾಶದ ಕುರಿತು ವರ್ಣಚಿತ್ರ ಪ್ರದರ್ಶನವನ್ನು ಕಾಲೇಜಿನಲ್ಲಿ ಏರ್ಪಡಿಸಲಾಗಿತ್ತು. ಸುಮಾರು 1500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ವರ್ಣಚಿತ್ರ ಪ್ರದರ್ಶನವನ್ನು ವೀಕ್ಷಿಸಿದರು. ನಂತರ ನಡೆದ ಸಂವಾದದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಸಾರ ಸಂಸ್ಥೆಯ ಸಂಚಾಲಕರಾದ ಧನುಷ್ ಕುಮಾರ್ ಅವರು, ನಮ್ಮ ಉಳಿವಿಗಾಗಿ ಪಶ್ಚಿಮ ಘಟ್ಟವನ್ನು ಸಂರಕ್ಷಿಸುವುದು ಅತ್ಯಗತ್ಯ ಎಂದರು. ಪಶ್ಚಿಮ ಘಟ್ಟದಲ್ಲಿ ಮಾನವನ ಅತಿಕ್ರಮಣ ಮತ್ತು ಅದನ್ನು ತಡೆಗಟ್ಟುವ ಮಾರ್ಗಗಳ ಕುರಿತು ವಿದ್ಯಾರ್ಥಿಗಳು ಸಂಪನ್ಮೂಲ ವ್ಯಕ್ತಿಯವರೊಂದಿಗೆ ಚರ್ಚಿಸಿದರು.
‘ಪರಿಸರಕ್ಕಾಗಿ ನಾವು’ ವೇದಿಕೆಯ ಕಾರ್ಯಕರ್ತರಾದ ಸರೋಜ ಪ್ರಕಾಶ್ ಮತ್ತು ಪ್ರಕಾಶ್ ಎನ್., ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಜಯಕರ ಭಂಡಾರಿ ಎಂ., ಪದವಿ ವಿಭಾಗದ ಸಂಯೋಜಕರಾದ ಪ್ರೊ. ವಸಂತಿ ಪಿ., ಐಕ್ಯೂಎಸಿಯ ಸಂಚಾಲಕರಾದ ದೇವಿಪ್ರಸಾದ್, ವಿಜ್ಞಾನ ಸಂಘದ ಸಂಚಾಲಕರಾದ ಡಾ. ರಮಾಕಾಂತ ಪುರಾಣಿಕ ಎಚ್., ಪ್ರಾಣಿಶಾಸ್ತ್ರ ವಿಭಾಗದ ಡಾ. ಅಶೋಕ ಮೊದಲಾದವರು ಉಪಸ್ಥಿತರಿದ್ದರು.