ಗಣಿತನಗರ, ನ.7: ಭಾರತದಲ್ಲಿ ಬದುಕಿದವ ಭಾರತೀಯನಲ್ಲ. ಭಾರತವನ್ನು ಪ್ರೀತಿಸುವವನು ನಿಜವಾದ ಭಾರತೀಯ ಎಂದು ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಶ್ರೀ ಶ್ರೀ ಈಶವಿಠಲದಾಸ ಸ್ವಾಮೀಜಿ ಹೇಳಿದರು. ಅವರು ಗಣಿತನಗರದ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ನಡೆದ ಜ್ಞಾನಭಾರತ್ ವೃಂದ ಪ್ರಾಯೋಜಿತ ಬಾಲ ಸಂಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಕೃಷಿಯಲ್ಲಿ ನಮ್ಮ ಸಂಸ್ಕೃತಿ ಅಡಗಿದೆ. ಇದರಿಂದ ದೇಶಕ್ಕೆ ಶ್ರೀಮಂತ ಪರಂಪರೆಯಿದೆ. ಆಧುನಿಕ ವಿಚಾರಧಾರೆಗಳಿಂದ ಸಂಸ್ಕೃತಿ ಮರೆಯಾಗುತ್ತಿರವುದು ವಿಷಾಧನೀಯ. ಅದರ ನಡುವೆ ಪ್ರೀತಿಯನ್ನು ಬಿತ್ತರಿಸುವ ಸಂಸ್ಕಾರ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರೆಯ ಬೇಕು. ಈ ನಿಟ್ಟಿನಲ್ಲಿ ಜ್ಞಾನ ಭಾರತ್ ವೃಂದ ಬಾಲಸಂಸ್ಕಾರದ ಮೂಲಕ ಆಚಾರ, ವಿಚಾರ ಧಾರೆಯನ್ನು ನೀಡಲು ಕಾರ್ಯಪ್ರಾವೃತ್ತರಾಗಿರುವುದು ಶ್ಲಾಘನೀಯ ಎಂದರು.
ಉಪನ್ಯಾಸಕಿ ಅಕ್ಷಯ ಗೋಖಲೆ ದಿಕ್ಸೂಚಿ ಮಾತುಗಳನ್ನಾಡುತ್ತಾ, ಶೈಕ್ಷಣಿಕ ಅಂಕಗಳಿಂದ ಕೂಡಿದ ಪ್ರಮಾಣಪತ್ರಕ್ಕಿಂತ ವ್ಯಕ್ತಿತ್ವ ನಿರ್ಮಾಣದ ಪ್ರಮಾಣ ಪತ್ರ ಬಹುಮುಖ್ಯ. ಈ ಸಂಸ್ಕಾರದಲ್ಲೇ ದೇಶದ ಸುಭದ್ರತೆ ಅಡಗಿದೆ. ಇಲ್ಲಿನ ಬಾಲ ಸಂಸ್ಕಾರದಿಂದ ದೊರೆಯುವ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪ್ರತಿಯೊಬ್ಬ ಮಗುವೂ ದೇಶದ ಸತ್ಪ್ರಜೆಯಾಗಿ ಹೊರಹೊಮ್ಮಬೇಕು ಎಂದರು. ಜ್ಞಾನಭಾರತ್ ವೃಂದದ ಗೌರವಾಧ್ಯಕ್ಷರಾದ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿಯವರು, ಭಾರತ ದೇಶ ಮೌಲ್ಯಗಳ ಸಮುದ್ರ. ನಾವು ಅದರಲ್ಲಿ ಸಣ್ಣಬಿಂದು. ಜ್ಞಾನ ಭಾರತ್ ವೃಂದ ಕಲ್ಪನೆಯಡಿ ಬಾಲ ಸಂಸ್ಕಾರ ರೂಪುಗೊಂಡಿದೆ. ಸಂಸ್ಕಾರ, ಜೀವನ ಮೌಲ್ಯಗಳ ಮೂಲಕ ಮನುಕುಲಕ್ಕೆ
ಕೊಡುಗೆಯನ್ನು ನೀಡುವ ಕಾರ್ಯವಾಗಲಿದೆ ಎಂದರು. ವೃಂದದ ಅಧ್ಯಕ್ಷರಾದ ದಿನೇಶ್ ಎಂ ಕೊಡವೂರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ವೇದಿಕೆಯಲ್ಲಿ ನಿವೃತ್ತಿ ಫೌಂಡೇಶನ್ ಸಿ.ಎ. ಶ್ರೀನಿವಾಸ್, ಮಾಜಿ ಸೈನಿಕ ಲಕ್ಷ್ಮೀಶ ಎಚ್.ಜಿ., ವೃಂದದ ಸದಸ್ಯೆಮೋಹಿನಿ ಉಪಸ್ಥಿತರಿದ್ದರು. ವೃಂದದ ಕಾರ್ಯದರ್ಶಿ ಸಂಗೀತಾ ಬೋಳ ನಿರೂಪಿಸಿದರು.