ಉಡುಪಿ, ಜುಲೈ 15: ಗ್ರಾಮ ಪಂಚಾಯತ್ ಕಚೇರಿಗಳಲ್ಲಿ ಸ್ಥಾಪಿಸಲಾಗಿರುವ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಸರ್ಕಾರದಿಂದ ನೀಡಲಾಗುವ ವಿವಿಧ ನಾಗರಿಕ ಸೇವಾ ಸೌಲಭ್ಯವನ್ನು ಆನ್ಲೈನ್ ಮೂಲಕ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಮುಖ್ಯವಾಗಿ ಗ್ರಾಮ ಪಂಚಾಯತಿಯಿಂದ ಲಭ್ಯವಾಗುವ ವಿವಿಧ ಪರವಾನಿಗೆಗಳು, ನಿರಾಪೇಕ್ಷಣಾ ಪತ್ರಗಳು, ಜನನ ಮರಣ ಪ್ರಮಾಣ ಪತ್ರಗಳು, ಕಂದಾಯ ಇಲಾಖೆಯ ಸೇವೆಯಾದ ಪಹಣಿ ಪತ್ರಿಕೆ ಮತ್ತು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಗೃಹಜ್ಯೋತಿ, ಅನ್ನಭಾಗ್ಯಕ್ಕೆ ನೋಂದಣಿಗಳು ಇತ್ಯಾದಿ ಸೇವಾ ಸೌಲಭ್ಯವನ್ನು ಪಡೆಯಬಹುದಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಗ್ರಾಮ ಪಂಚಾಯತ್ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.