ಉಡುಪಿ, ಜು. 2: ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ, ರೋಟರಿ ಕ್ಲಬ್ ಮಣಿಪಾಲ, ಮಣಿಪಾಲ ಮಹಿಳಾ ಸಮಾಜ ಇವರ ಆಶ್ರಯದಲ್ಲಿ ಭಾನುವಾರ ಪ್ರಸಿದ್ಧ ಕಲಾವಿದರು ಹಾಗೂ ಮನೋವೈದ್ಯರಾದ ಶಿವಮೊಗ್ಗದ ಡಾ. ಪವಿತ್ರ ಕೆ.ಎಸ್ ಅವರಿಂದ ಕನ್ನಡದ ಪ್ರಸಿದ್ಧ ಕವಯಾತ್ರಿಯರಾದ ಅಕ್ಕಮಹಾದೇವಿ, ವೈದೇಹಿ, ಕಮಲಾ ಹಂಪನ, ಪ್ರತಿಭಾ ನಂದಕುಮಾರ್ ಮುಂತಾದ ಮಹಿಳಾ ಕವಯತ್ರಿಯರ ಕಾವ್ಯದ ನೃತ್ಯ ಅಭಿವ್ಯಕ್ತಿ ‘ಕಾವ್ಯ ಕನ್ನಿಕಾ’ ಕಾರ್ಯಕ್ರಮವು ಬುಡ್ನಾರಿನ ಯಕ್ಷ ಸಂಜೀವ ಯಕ್ಷಗಾನ ಕೇಂದ್ರದಲ್ಲಿ ನಡೆಯಿತು.
ಮಹಿಳಾವಾದಿ ಎಂದರೆ ಪುರುಷ ವಿರೋಧಿ ಭಾವನೆಯಲ್ಲ, ಮಹಿಳೆಯರ ಮನಸ್ಸು ಆಕೆಯ ಆಂತರಿಕ ಭಾವನೆಗಳು ಪುರುಷರಲ್ಲಿ ಕೂಡ ಇರುತ್ತವೆ ಎಂದು ಖ್ಯಾತ ಕಲಾವಿದೆ ಡಾ. ಕೆ.ಎಸ್ ಪವಿತ್ರ ಹೇಳಿದರು. ಮಾತು ಮೌನವಾದಾಗ ಸಂಗೀತ ಜನ್ಮ ತಾಳುತ್ತದೆ. ಸಂಗೀತ, ಕಾವ್ಯ ಮುಂತಾದವುಗಳಿಗೆ ವಿಶೇಷ ಶಕ್ತಿ ಇದೆ ಎಂದ ಅವರು, ಹಿಂದಿನ ಕವನಗಳು ಇಂದಿಗೂ ಪ್ರಸ್ತುತವಾಗಿದೆ ಎಂದರು. ಇದೇ ಸಂದರ್ಭದಲ್ಲಿ ಕಲಾವಿದೆಯನ್ನು ಗೌರವಿಸಲಾಯಿತು.
ಯಕ್ಷಗಾನ ಗುರುಗಳಾದ ಬನ್ನಂಜೆ ಸಂಜೀವ ಸುವರ್ಣ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕಲಾವಿದೆ ಪ್ರವೀಣ ಮೋಹನ್, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ವಿಶ್ವನಾಥ ಶೆಣೈ, ಮಣಿಪಾಲ ಮಹಿಳಾ ಸಮಾಜದ ಅಧ್ಯಕ್ಷೆ ಡಾ. ಸುಲತಾ ಭಂಡಾರಿ, ರೋಟರಿ ಕ್ಲಬ್ ಮಣಿಪಾಲದ ಅಧ್ಯಕ್ಷ ಶ್ರೀಪತಿ ಪರಂಪಳ್ಳಿ, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಉಪಾಧ್ಯಕ್ಷೆ ಸಂಧ್ಯಾ ಶೆಣೈ, ಖಜಾಂಚಿ ರಾಜೇಶ್ ಭಟ್ ಪಣಿಯಾಡಿ, ಸಿ.ಎಸ್. ರಾವ್, ರೇಣು ಜಯರಾಮ್, ನರಸಿಂಹಮೂರ್ತಿ, ರಾಘವೇಂದ್ರ ಪ್ರಭು ಕರ್ವಾಲು ಮುಂತಾದವರು ಉಪಸ್ಥಿತರಿದ್ದರು. ಕಲಾವಿದೆ ಶಿಲ್ಪಾ ಜೋಶಿ ಪರಿಚಯಿಸಿದರು. ಸಂಚಾಲಕ ರವಿರಾಜ್ ಎಚ್.ಪಿ ನಿರೂಪಿಸಿದರು.