ನಮ್ಮ ಅವಿಭಜಿತ ಜಿಲ್ಲೆಯವರೇ ಆದ ಯು.ಟಿ.ಖಾದರ್ ರವರು ಕರ್ನಾಟಕ ವಿಧಾನಸಭೆಯ ನೂತನ ಸ್ಪೀಕರ್ ಆದ ತಕ್ಷಣವೇ ಮಾಡಿದ ಮೊದಲ ಕಾರ್ಯವೆಂದರೆ ಈ ಬಾರಿ ಹೊಸದಾಗಿ ಚುನಾಯಿತರಾದ ಶಾಸಕರುಗಳಿಗೆಯೇ ಹಮ್ಮಿಕೊಂಡ ಮೂರು ದಿನಗಳ ತರಬೇತಿ ಕಾರ್ಯಗಾರ. ಈ ಮೂರು ದಿನಗಳಲ್ಲಿ ವಿಷಯ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದ ಪ್ರಮುಖರುಗಳಲ್ಲಿ ವಿಶೇಷವಾಗಿ ನಮ್ಮ ಗಮನ ಸೆಳೆದ ಮಾತುಗಳೆಂದರೆ ಹೆಡ್ ಮಾಸ್ಟರ್ ಸಿದ್ದರಾಮಯ್ಯನವರ ಮಾತು. ತಮ್ಮ ಮೂರುವರೆ ದಶಕಗಳ ಶಾಸನ ಸಭೆಯ ಸಮಗ್ರ ಅನುಭವಗಳನ್ನು ರಾಜಕೀಯ ಮೀರಿ ಹಂಚಿಕೊಂಡಿದ್ದು ಹೊಸದಾಗಿ ಆಯ್ಕೆಗೊಂಡು ಶಾಸನ ಸಭೆಯನ್ನು ಪ್ರವೇಶಿಸಿದ ಶಾಸಕರುಗಳಿಗೆ ಹೊಸ ಅನುಭವವನ್ನೆ ನೀಡಿತು ಅಂದರೂ ತಪ್ಪಾಗಲಾರದು.
ಸಿದ್ದರಾಮಯ್ಯ ಉಲ್ಲೇಖ ಮಾಡಿದ ಪ್ರಸಂಗಗಳು ಅಂದರೆ, ವಾಟಾಳ್ ನಾಗರಾಜ್ ರವರು ಶಾಸನ ಸಭೆಯಲ್ಲಿ ತೇೂರುತ್ತಿದ್ದ ತನ್ಮಯತೆ, ಗೇೂಪಾಲ ಗೌಡರು ವಿಪಕ್ಷದಲ್ಲಿದರೂ ಸರ್ಕಾರವನ್ನು ಪ್ರಶ್ನೆ ಮಾಡುತ್ತಿದ್ದ ರೀತಿ; ದೇವೇಗೌಡರು ಮೊದಲ ಬಾರಿಗೆ ತನ್ನನ್ನು ಹಣಕಾಸು ಸಚಿವರನ್ನಾಗಿ ಮಾಡಿದಾಗ ತನ್ನ ಕುರಿತಾಗಿ ಲಂಕೇಶ್ ಪತ್ರಿಕೆಯಲ್ಲಿ ಬರೆದ ವರದಿ ಉಲ್ಲೇಖಿಸಿದ ರೀತಿ..ಇವೆಲ್ಲವೂ ತನ್ನ ಶಾಸಕ ತನದ ಅನುಭವಕ್ಕೆ ಹೇಗೆ ದಾರಿ ತೇೂರಿತು ಅನ್ನುವುದನ್ಮು ಮುಚ್ಚು ಮರೆಯಿಲ್ಲದೆ ಹೊಸ ಶಾಸಕರ ಮುಂದೆ ಅಭಿವ್ಯಕ್ತಿಪಡಿಸಿದ ರೀತಿ ನಿಜಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಅನುಭವದ ಪ್ರಬುದ್ಧತೆಗೆ ಹಿಡಿದ ಕೈ ಕನ್ನಡಿಯಾಗಿತ್ತು.
ನಮ್ಮ ಶಾಸಕರುಗಳಿಗೆ ಪುಸ್ತಕ ಓದುವ ಅಭ್ಯಾಸವಿಲ್ಲ ಅನ್ನುವುದನ್ನು ಹೇಳುವಾಗ ಜಮೀರ್ ಕಡೆಗೆ ಕೈ ತೇೂರಿಸಿ ಬೊಟ್ಟು ಮಾಡಿದ ರೀತಿ ನಿಜಕ್ಕೂ ಪಕ್ಷ ಮೀರಿ ಸಿದ್ದರಾಮಯ್ಯ ನವರು ಪಾಠ ಮಾಡಬಲ್ಲರು ಅನ್ನುವುದಕ್ಕೆ ಸಾಕ್ಷಿಯಾಯಿತು. ಅನಂತರದಲ್ಲಿ ಶಾಸಕರು ಕೇಳಿದ ಅತ್ಯಂತ ಮುಜುಗರ ತರಬಲ್ಲ ಕೆಲವೊಂದು ಪ್ರಶ್ನೆಗಳಿಗೆ ಉತ್ತರ ನೀಡುವಾಗ ಎಲ್ಲೂ ವಿಚಲಿತರಾಗದೆ ಸಿಟ್ಟುಗೊಳ್ಳದೆ ಒಬ್ಬ ಮೇಷ್ಟ್ರು ತನ್ನ ಕ್ಲಾಸ್ ನಲ್ಲಿ ಯಾವ ರೀತಿಯಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಬೇಕು ಅನ್ನುವ ರೀತಿಯಲ್ಲಿ ಉತ್ತರಿಸಿದ ಪರಿ ಸಿದ್ದರಾಮಯ್ಯನವರ ವ್ಯಕ್ತಿತ್ವ ಅನುಕರಣೀಯವಾಗಿತ್ತು.
ಒಂದಂತೂ ಸತ್ಯ, ಚುನಾವಣಾ ಸಂದರ್ಭದಲ್ಲಿ ಸಿದ್ದರಾಮಯ್ಯನವರ ಮಾತು, ಮುಖ್ಯಮಂತ್ರಿಗಳ ಸ್ಥಾನವನ್ನು ಅಲಂಕರಿಸಿದ ನಂತರದಲ್ಲಿನ ಮಾತುಗಳ ಅಜಗಜಾಂತರ ವ್ಯತ್ಯಾಸ ಕಾಣುತ್ತಿತ್ತು. ಅಂತೂ ಯು.ಟಿ.ಖಾದರ್ ಸ್ಪೀಕರ್ ಹುದ್ದೆ ಸ್ವೀಕರಿಸಿದ ನಂತರದ ಮೊದಲ ನಡೆಯೇ ಅವರ ಸ್ಪೀಕರ್ ತನದ ಹುದ್ದೆಗೆ ಇನ್ನಷ್ಟು ಗೌರವ ತಂದುಕೊಡುವಲ್ಲಿ ಯಶಸ್ವಿಯಾಗಿದೆ ಅನ್ನುವುದರಲ್ಲಿ ಎರಡು ಮಾತಿಲ್ಲ. ಜಾತಿ, ಧರ್ಮ, ಪಕ್ಷ ಪ್ರಾದೇಶಿಕತೆ ಮೀರಿ ತೆಗೆದುಕೊಂಡ ನಿರ್ಣಯ ಒಬ್ಬ ಸಭಾಧ್ಯಕ್ಷ ಹೇಗಿರಬೇಕು ಅನ್ನುವುದಕ್ಕೆ ಮುನ್ನುಡಿ. ತರಬೇತಿ ಕಾರ್ಯಗಾರಕ್ಕೆ ಹಾಜರಾದ ಶಾಸಕರುಗಳ ಹಾಜರಾತಿ 90% ಅನ್ನುವುದು ಬೇಸರ ತಂದಿದೆ. ಅದರಲ್ಲೂ ನಮ್ಮ ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಎಷ್ಟು ಮಂದಿ ಗೈರು ಹಾಜರಿದ್ದರು ಗೊತ್ತಿಲ್ಲ.? ಬಾಕಿ ಉಳಿದಿರುವ ಹಿರಿಯ ಕಿರಿಯ ಎಲ್ಲಾ ಶಾಸಕರುಗಳಿಗೆ ಸಚಿವರುಗಳಿಗೆ ಕನಿಷ್ಠ ಪಕ್ಷ ವರ್ಷಕ್ಕೆ ಎರಡು ತರಬೇತಿಗಳನ್ನು ಸಂಸದೀಯ ನಡವಳಿಕೆ ಸಂವಿಧಾನದ ವಿಷಯಗಳ ಕುರಿತಾಗಿ ನಡೆಸುವುದು ಅತೀ ಅಗತ್ಯ ಅನ್ನುವುದು ನನ್ನ ಖಚಿತ ಅಭಿಪ್ರಾಯ.
ಈ ವಿನೂತನ ಪ್ರಯೇೂಗದಿಂದ ಸಂತೃಪ್ತರಾದ ಸ್ಪೀಕರ್ ಯು.ಟಿ.ಖಾದರ್ ಅನಂತರ ಹೇಳಿದ ಒಂದು ಸದಾಶಯದ ಮಾತು, “ರಾಜಕೀಯಕ್ಕೆ ಬರುವ ಆಸಕ್ತಿಯುಳ್ಳ ಯುವಜನತೆಗೆ ಒಂದು ವರ್ಷದ ತರಬೇತಿ ಶಿಕ್ಷಣ ನೀಡುವ ಯೇೂಜನೆ ರೂಪಿಸುವುದು ಅನಿವಾರ್ಯ ಅನ್ನುವುದನ್ನು ಶಿಕ್ಷಣ ಮತ್ತು ರಾಜಕೀಯ ಕ್ಷೇತ್ರದಲ್ಲಿ ಗಂಭೀರವಾಗಿ ಚಿಂತನೆ ಮಾಡಬೇಕಾದ ವಿಚಾರ. ನಮ್ಮಲ್ಲಿ ಒಂದು ಮಾತಿದೆ ರಾಜಕೀಯ ಶಾಸ್ತ್ರವನ್ನು ಹೃದಯಕ್ಕೆ ಇಳಿಸಿಕೊಂಡು ಓದಿದವರು ರಾಜಕೀಯಕ್ಕೆ ಬರುವುದು ಕಷ್ಟ. ಯಾಕೆಂದರೆ ಇಂದಿನ ರಾಜಕೀಯದ ವಾಸ್ತವಿಕ ಪರಿಸ್ಥಿತಿಯಲ್ಲಿ ಈಜಾಡುವುದೇ ಕಷ್ಟವಾಗಬಹುದು. ಹಾಗಾಗಿ ಧನ ಬಲ, ಜನ ಬಲ, ದಪ್ಪ ಚರ್ಮದವರೇ ಇಂದಿನ ರಾಜಕೀಯಕ್ಕೆ ಸೂಕ್ತ ಅನ್ನುವ ಮಟ್ಟಿಗೆ ಯುವಜನಾಂಗ ಬಂದು ಬಿಟ್ಟಿದೆ. ಇದನ್ನು ಮೊದಲು ದೂರ ಮಾಡಿ ರಾಜಕೀಯ ತ್ಯಾಜ್ಯವಲ್ಲ ಪೂಜ್ಯ ಅನ್ನುವುದನ್ನು ಮನವರಿಕೆ ಮಾಡಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಅಂತೂ ಯು.ಟಿ ಖಾದರ್ ರವರ ಚಿಂತನೆ ನಿಜಕ್ಕೂ ಶ್ಲಾಘನೀಯ. ರಾಜ್ಯ ವಿಧಾನಸಭೆಗೆ ಮೇರು ವ್ಯಕ್ತಿತ್ವದ ವೈಕುಂಠ ಬಾಳಿಗರಂತಹ ಸಭಾಧ್ಯಕ್ಷರನ್ನು ನೀಡಿದ ಕೀರ್ತಿ ನಮ್ಮಗಿದೆ. ಅಂತಹ ಕಾರ್ಯಸಾಧನೆಯನ್ನು ಮಾಡುವಲ್ಲಿ ಯು.ಟಿ.ಖಾದರ್ ಸಫಲರಾಗಲಿ ಅನ್ನುವುದು ನಮ್ಮೆಲ್ಲರ ಆಶಯವೂ ಹೌದು.
-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ