ಕಾರ್ಕಳ, ಜೂನ್ 29: ಬೋಳಾ ಸುರೇಂದ್ರ ಕಾಮತ್ ಚ್ಯಾರಿಟೇಬಲ್ ಟ್ರಸ್ಟ್ (ರಿ.) ಮತ್ತು ಅಮ್ಮನ ನೆರವು ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಕಳ ತಾಲೂಕಿನ ಕಾಬೆಟ್ಟು ಸರಕಾರಿ ಪ್ರೌಢಶಾಲೆಯ ಎಲ್ಲಾ 120 ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್, ನೋಟ್ ಪುಸ್ತಕ ಒಳಗೊಂಡ ಕಲಿಕಾ ಪರಿಕರಗಳ ಹಸ್ತಾಂತರ ಕಾರ್ಯಕ್ರಮವು ಶಾಲಾ ಸಭಾಂಗಣದಲ್ಲಿ ನಡೆಯಿತು. ಚ್ಯಾರಿಟೇಬಲ್ ಟ್ರಸ್ಟ್ ಮುಖ್ಯಸ್ಥರಾದ ಬೋಳ ರಾಹುಲ್ ಕಾಮತ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಕೊಡುಗೆಗಳನ್ನು ಹಸ್ತಾಂತರ ಮಾಡಿದರು. ಬಳಿಕ ಮಾತನಾಡಿದ ಅವರು, ನಮ್ಮ ಚ್ಯಾರಿಟೇಬಲ್ ಟ್ರಸ್ಟ್ ಕಲಿಕೆಯಲ್ಲಿ ಆಸಕ್ತರಾಗಿರುವ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ನೆರವಿಗೆ ಖಂಡಿತವಾಗಿ ನಿಲ್ಲುತ್ತದೆ. ವಿದ್ಯಾರ್ಥಿಗಳು ಈ ಕೊಡುಗೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಅತಿಥಿಯಾಗಿ ಭಾಗವಹಿಸಿದ ಇನ್ನಾ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಾಜೇಂದ್ರ ಭಟ್ ಅವರು, ಸರಕಾರಿ ಶಾಲೆಯ ಮಕ್ಕಳಿಗೆ ಸರಕಾರದ ವತಿಯಿಂದ ಮತ್ತು ಖಾಸಗಿ ಸಂಸ್ಥೆಗಳಿಂದ ಹೆಚ್ಚು ಕೊಡುಗೆಗಳು ಹರಿದು ಬರುತ್ತಿದ್ದು ಅವರು ಕೀಳರಿಮೆಗೆ ಒಳಗಾಗದೆ ಕಲಿಯಬೇಕು ಎಂದರು. ಅಮ್ಮನ ನೆರವು ಸಂಸ್ಥೆಯ ಮುಖ್ಯಸ್ಥರಾದ ಅವಿನಾಶ್ ಶೆಟ್ಟಿ, ನಿವೃತ್ತ ಶಿಕ್ಷಕಿ ತುಳಸಿ ಬಾಯಿ, ಪುರಸಭಾ ಸದಸ್ಯರಾದ ಪ್ರಭಾ ಕಿಶೋರ್, ಉದ್ಯಮಿ ಪ್ರೇಮಾನಂದ ಪೈ, ಎಸ್.ಡಿ.ಎಂ.ಸಿ ಅಧ್ಯಕ್ಷ ಮೋಹನ್ ಕಲಂಬಾಡಿ ಪದವು ಶುಭಾಶಂಸನೆಗೈದರು. ಶಾಲೆಯ ಮುಖ್ಯ ಶಿಕ್ಷಕಿ ಇಂದಿರಾ ಸ್ವಾಗತಿಸಿ, ಶಿಕ್ಷಕಿ ಶಕುಂತಲಾ ವಂದಿಸಿದರು. ಶಿಕ್ಷಕ ಅಶೋಕ ಕುಮಾರ್ ಎಸ್ ನಿರೂಪಿಸಿದರು.