ಉಡುಪಿ, ಜೂನ್ 28: ಆಸರೆ ಚಾರಿಟೇಬಲ್ ಟ್ರಸ್ಟ್(ರಿ.) ಕಡಿಯಾಳಿ ವತಿಯಿಂದ ಉಡುಪಿಯ ಸುಬ್ರಹ್ಮಣ್ಯನಗರದಲ್ಲಿ 3 ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕವನ್ನು ಒದಗಿಸಲಾಯಿತು. ಫಲಾನುಭವಿಗಳಾದ ಅಮಿತ, ಶೀಲಾ ಹಾಗೂ ಸದಾಶಿವ ಇವರ ಮನೆಗೆ ದಾನಿಗಳಾದ ಖ್ಯಾತಿ ಭಟ್, ಸ್ತುತಿ ಭಟ್, ಮಂಜುಳಾ ಶೆಣೈ ಮತ್ತು ಶೀಲಾ ಅವರ ಮನೆಯ ವಿದ್ಯುತ್ ಸೌಲಭ್ಯವನ್ನು ನಗರಸಭೆ ಸ್ಥಾಯಿ ಸಮಿತಿ ಸದಸ್ಯರಾದ ಶ್ರೀಶ ಭಟ್ ಕೊಡವೂರು ಲೋಕಾರ್ಪಣೆ ಮಾಡಿದರು. ಶೀಲಾ ಅವರ ಮನೆಗೆ ಉಚಿತ ವಿದ್ಯುತ್ ಸೌಲಭ್ಯ ಕಲ್ಪಿಸಲು ಮೂಡುಬೆಳ್ಳೆ ಗೌರಿ ನಾಯಕ್ ಅವರು ತಮ್ಮ ಹುಟ್ಟುಹಬ್ಬದ ಸಲುವಾಗಿ ಈ ಉಚಿತ ವಿದ್ಯುತ್ ಸಂಪರ್ಕದ ಕೊಡುಗೆಯನ್ನು ನೀಡಿದ್ದರು.
ಆಸರೆ ಚಾರಿಟೇಬಲ್ ಟ್ರಸ್ಟ್‌ನ ಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿ ಮಾತನಾಡಿ, ಉಡುಪಿಯಲ್ಲಿ ದಾನಿಗಳ ಸಹಕಾರದಿಂದ 133 ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಿದ್ದೇವೆ. ಈ ಮೂಲಕ ಉಡುಪಿ ಇಡೀ ದೇಶಕ್ಕೆ ಮಾದರಿಯಾಗಿದೆ. ಉಡುಪಿಯನ್ನು ಶೇಕಡ 100 ರಷ್ಟು ವಿದ್ಯುತ್ ಸಂಪರ್ಕವನ್ನಾಗಿ ಪರಿವರ್ತಿಸುವುದು ನಮ್ಮ ಗುರಿ. ಡಿಸೆಂಬರ್ ಮೊದಲು ಉಡುಪಿಯಲ್ಲಿರುವ ಮನೆಗಳಿಗೆ ಶೇಕಡಾ 100 ರಷ್ಟು ವಿದ್ಯುತ್ ಸಂಪರ್ಕವನ್ನು ನೀಡುವ ಗುರಿಯನ್ನು ನಾವು ಹೊಂದಿದ್ದೇವೆ ಎಂದರು.
ದಾನಿಗಳಾದ ವಲ್ಲಭ ಭಟ್ ಮಲ್ಪೆ, ಮಂಜುಳಾ ವಿ ಶೆಣೈ, ನಗರಸಭಾ ಸದಸ್ಯೆ ಜಯಂತಿ ಪೂಜಾರಿ, ಮಾಜಿ ನಗರಸಭಾ ಸದಸ್ಯೆ ಸುಬೇಧಾ, ಆಶಾ ಭಟ್, ಆಸರೆ ಚಾರಿಟೇಬಲ್ ಟ್ರಸ್ಟ್ ಖಜಾಂಚಿ ಸತೀಶ್ ಕುಲಾಲ್, ರಾಕೇಶ್ ಜೋಗಿ, ವಿದ್ಯುತ್ ಸಂಪರ್ಕ ಕಲ್ಪಿಸಿದ ಮಂಜುನಾಥ್ ಎಲೆಕ್ಟ್ರಿಕಲ್ಸ್ ನ ನಾಗರಾಜ ಪ್ರಭು, ಸ್ಥಳೀಯರಾದ ಅನಂತಮೂರ್ತಿ ಭಟ್, ಶ್ರೀನಿವಾಸ ರಾವ್, ಜಯಂತ್ ಪೂಜಾರಿ, ರಾಜಾರಾಮ್, ಲಕ್ಷ್ಮೀ, ಸೌಮ್ಯ ಉಪಸ್ಥಿತರಿದ್ದರು.