ಕೈರೋ, ಜೂ. 25: ಈಜಿಪ್ಟ್ನ ಕೈರೋಗೆ ಬಂದಿಳಿದ ಕೂಡಲೇ ಪ್ರಧಾನಿ ನರೇಂದ್ರ ಮೋದಿ ಅವರು ಈಜಿಪ್ಟ್ ಪ್ರಧಾನಿ ಮುಸ್ತಫಾ ಮಡ್ಬೌಲಿ ಮತ್ತು ಇತರ ಸಚಿವರೊಂದಿಗೆ ಮಹತ್ವದ ಸಭೆ ನಡೆಸಿದರು. ಭಾರತ-ಈಜಿಪ್ಟ್ ವ್ಯಾಪಾರ ಮತ್ತು ಆರ್ಥಿಕ ಸಂಬಂಧಗಳನ್ನು ಬಲಪಡಿಸುವ ಬಗ್ಗೆ ಮಾತುಕತೆ ನಡೆದವು. ಸಭೆಯಲ್ಲಿ ಈಜಿಪ್ಟ್ ಕ್ಯಾಬಿನೆಟ್ನ ಏಳು ಸದಸ್ಯರು ಭಾಗವಹಿಸಿದ್ದರು. ಚರ್ಚೆಗಳು ಮುಖ್ಯವಾಗಿ ವ್ಯಾಪಾರ ಮತ್ತು ಹೂಡಿಕೆ, ನವೀಕರಿಸಬಹುದಾದ ಇಂಧನ, ಹಸಿರು ಹೈಡ್ರೋಜನ್, ಐಟಿ, ಡಿಜಿಟಲ್ ಪಾವತಿ ವೇದಿಕೆಗಳು, ಫಾರ್ಮಾ ಮತ್ತು ಜನರ ನಡುವಿನ ಸಂಬಂಧಗಳ ಮೇಲೆ ಕೇಂದ್ರೀಕರಿಸಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದರು.
ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಈಜಿಪ್ಟ್ ಪ್ರಧಾನಿ ನಡುವೆ ದುಂಡುಮೇಜಿನ ಸಭೆ ನಡೆಯಿತು ಎಂದು ಈಜಿಪ್ಟ್ನಲ್ಲಿನ ಭಾರತೀಯ ರಾಯಭಾರಿ ಅಜಿತ್ ಗುಪ್ತೆ ತಿಳಿಸಿದ್ದಾರೆ. ಭಾನುವಾರ ಪ್ರಧಾನಿ ಮೋದಿ ಅಲ್-ಹಕೀಮ್ ಮಸೀದಿಗೆ ಭೇಟಿ ನೀಡಲಿದ್ದಾರೆ. 16 ನೇ ಫಾತಿಮಿದ್ ಖಲೀಫರಾದ ಅಲ್-ಹಕೀಮ್ ಬಿ-ಅಮ್ರ್ ಅಲ್ಲಾಹ್ (985-1021) ಅವರ ಹೆಸರಿನಲ್ಲಿರುವ ಕೈರೋದ ಐತಿಹಾಸಿಕ ಮತ್ತು ಪ್ರಮುಖ ಮಸೀದಿಯಾದ ಅಲ್-ಹಕೀಮ್ ಮಸೀದಿಯಲ್ಲಿ ಪ್ರಧಾನಿ ಸುಮಾರು ಅರ್ಧ ಗಂಟೆ ಕಳೆಯಲಿದ್ದಾರೆ.
ತಮ್ಮ ಈಜಿಪ್ಟ್ ಪ್ರವಾಸದ ಸಮಯದಲ್ಲಿ, ಪ್ರಧಾನಿ ಮೋದಿ ಮೊದಲ ಮಹಾಯುದ್ಧದ ಸಮಯದಲ್ಲಿ ಈಜಿಪ್ಟ್ಗಾಗಿ ಹೋರಾಡಿ ತ್ಯಾಗ ಮಾಡಿದ ಭಾರತೀಯ ಸೈನಿಕರಿಗೆ ಗೌರವ ಸಲ್ಲಿಸಲು ಹೆಲಿಯೋಪೊಲಿಸ್ ಯುದ್ಧ ಸಮಾಧಿಗೆ ಭೇಟಿ ನೀಡಲಿದ್ದಾರೆ. ಈಜಿಪ್ಟ್ ಸಾಂಪ್ರದಾಯಿಕವಾಗಿ ಆಫ್ರಿಕಾ ಖಂಡದಲ್ಲಿ ಭಾರತದ ಪ್ರಮುಖ ವ್ಯಾಪಾರ ಪಾಲುದಾರರಲ್ಲಿ ಒಂದಾಗಿರುವುದರಿಂದ ಪ್ರಧಾನಿ ಮೋದಿ ಅವರ ಮಹತ್ವದ್ದಾಗಿದೆ. ಭಾರತ-ಈಜಿಪ್ಟ್ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವು ಮಾರ್ಚ್ 1978 ರಿಂದ ಜಾರಿಯಲ್ಲಿದೆ ಮತ್ತು ಇದು ಮೋಸ್ಟ್ ಫೇವರ್ಡ್ ನೇಷನ್ ಷರತ್ತು ಆಧರಿಸಿದೆ ಎಂದು ಈಜಿಪ್ಟ್ ಸೆಂಟ್ರಲ್ ಏಜೆನ್ಸಿ ಫಾರ್ ಪಬ್ಲಿಕ್ ಮೊಬಿಲೈಸೇಶನ್ ಅಂಡ್ ಸ್ಟ್ಯಾಟಿಸ್ಟಿಕ್ಸ್ (ಸಿಎಪಿಎಂಎಎಸ್) ತಿಳಿಸಿದೆ. ಇದಲ್ಲದೆ, ಭಾರತ ಮತ್ತು ಈಜಿಪ್ಟ್ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳಲ್ಲಿ ಸಂಪರ್ಕ ಮತ್ತು ಸಹಕಾರದ ಸುದೀರ್ಘ ಇತಿಹಾಸದ ಆಧಾರದ ಮೇಲೆ ನಿಕಟ ರಾಜಕೀಯ ತಿಳುವಳಿಕೆಯನ್ನು ಹಂಚಿಕೊಂಡಿವೆ.