ಉಡುಪಿ, ಜೂ. 25: ಹಿರಿಯ ನಾಗರಿಕರ ವೇದಿಕೆ, ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ, ವೈದ್ಯಕೀಯ ಪ್ರತಿನಿಧಿಗಳ ಸಂಘದ ಆಶ್ರಯದಲ್ಲಿ ಸಿ.ಎಸ್.ಐ ಲೋಂಬಾರ್ಡ್ ಮೆಮೋರಿಯಲ್ ಮಿಷನ್ ಆಸ್ಪತ್ರೆಯಲ್ಲಿ ಹಿರಿಯ ನಾಗರಿಕರಿಗೆ ಉಚಿತ ಮೂಳೆ ಸಾಂದ್ರತೆ ಮತ್ತು ಸಾಮಾನ್ಯ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ವೈದ್ಯಾಧಿಕಾರಿ ಡಾ. ಗಣೇಶ್ ಕಾಮತ್, ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುದಕ್ಕಿಂತ ರೋಗ ಬರದಂತೆ ನಿಯಮಿತವಾಗಿ ತಪಾಸಣೆ ಮಾಡಿದರೆ ಉತ್ತಮ ಎಂದರು.
ವೇದಿಕೆಯಲ್ಲಿ ಹಿರಿಯ ನಾಗರಿಕರ ವೇದಿಕೆಯ ಪದಾಧಿಕಾರಿಗಳಾದ ನಾಗರಾಜ್ ರಾವ್, ಮುರಳೀಧರ್, ವಿಶ್ವನಾಥ್ ಹೆಗ್ಡೆ, ರೋಟರಿ ಸಾಯ್ಬ್ರಕಟ್ಟೆ ಅಧ್ಯಕ್ಷ ಅಣ್ಣಯ್ಯದಾಸ್, ಸುಂದರ ಪೂಜಾರಿ, ಪ್ರಸನ್ನ ಕಾರಂತ್, ರೋಹಿ ರತ್ನಾಕರ್ ಮುಂತಾದವರಿದ್ದರು. ಜಯಂಟ್ಸ್ ಸ್ಥಾಪಕರಾದ ನನಾ ಚುಡಾಸ್ಮ ರವರ ಬಗ್ಗೆ ಜಯಂಟ್ಸ್ ಫೆಡರೇಶನ್ ಮಾಜಿ ಅಧ್ಯಕ್ಷ ಮಧುಸೂಧನ್ ಹೇರೂರು ಮಾತನಾಡಿದರು. ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿ ವಂದಿಸಿದರು.