ಉಡುಪಿ: ರೋಟರಿ ಉಡುಪಿ ಮತ್ತು ಶ್ರೀ ಯು.ಎಸ್. ನಾಯಕ್ ಮೆಮೋರಿಯಲ್ ಟ್ರಸ್ಟ್ ಜಂಟಿ ಆಶ್ರಯದಲ್ಲಿ ಕಡಿಯಾಳಿಯ ರೋಟರಿ ಸ್ಕೌಟ್ ಹಾಲ್ ನಲ್ಲಿ ಸಾಮಾಜ ಸೇವಕ, ಕೊಡುಗೈ ದಾನಿ ಪಾಂಗಾಳ ರಬೀಂದ್ರ ನಾಯಕ್ ಸಂಸ್ಮರಣಾ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿ ರೋಟರಿ ವಲಯ ನಾಲ್ಕರ ಸಹಾಯಕ ಗವರ್ನರ್ .ರಾಮಚಂದ್ರ ಉಪಾಧ್ಯಾಯ ಮಾತಾಡುತ್ತಾ, ಪಾಂಗಾಳ ರಬೀಂದ್ರ ನಾಯಕರ ಕೊಡುಗೆ ಉಡುಪಿ ಪರಿಸರದ ಎಲ್ಲಾ ಸಂಸ್ಥೆಗಳಿಗೆ, ಕಾರ್ಯಕ್ರಮಗಳಿಗೆ ಇದ್ದು ಪರಿಸರದ ಬಗ್ಗೆ ಅತೀವ ಕಾಳಜಿ ಹೊಂದಿದ್ದರು. ಇಂತಹ ವ್ಯಕ್ತಿಗಳು ಸಮಾಜಕ್ಕೆ ಯಾವತ್ತಿಗೂ ಮಾದರಿಯಾಗಿದ್ದಾರೆ ಎಂದರು.
ರೋಟರಿ ಉಡುಪಿ ಸಮಾಜ ಸೇವಾ ನಿರ್ದೇಶಕಿ ದೀಪಾ ಭಂಡಾರಿ ಸಂಸ್ಮರಣ ಭಾಷಣ ಮಾಡಿದರು. ಟ್ರಸ್ಟ್ ನ ವಿಶ್ವಸ್ಥರಲ್ಲೊಬ್ಬರಾದ ಸಿ.ಎ.ಸುರೇಶ್ ನಾಯಕ್, ರಬೀಂದ್ರ ನಾಯಕ್ ಅವರ ಸಾಮಾಜಿಕ ಕಳಕಳಿಯ ಬಗ್ಗೆ ನೆನಪನ್ನು ಹಂಚಿಕೊಂಡರು.
ರೋಟರಿ ಗುರುತಿಸಿದ ಎಂಟು ಜನರಿಗೆ ಧನಸಹಾಯವನ್ನು ವಿತರಿಸಲಾಯಿತು. ಉಡುಪಿಯ ಯಕ್ಷಗಾನ ಕಲಾರಂಗ, ಸ್ಪಂದನಾ ವಿಶೇಷ ಮಕ್ಕಳ ಶಾಲೆ ಮತ್ತು ಗಿಳಿಯಾರಿನ ಆಸ್ಪತ್ರೆಗೆ ಸಹಾಯ ಧನ ವಿತರಿಸಲಾಯಿತು. ವಿಶ್ವಸ್ಥರಲ್ಲೊಬ್ಬರಾದ ರವೀಂದ್ರನಾಥ ಶಾನುಭಾಗ್ ಗುರುತಿಸಿದ ಫಲಾನುಭವಿಗಳಿಗೆ ಧನಸಹಾಯವನ್ನು ಹಸ್ತಾಂತರಿಸಲಾಯಿತು.
ರೋಟರಿ ಉಡುಪಿಯಿಂದ ಕಡಿಯಾಳಿ ಕಮಲಾಬಾಯಿ ಹೈಸ್ಕೂಲ್ ನ ಶೌಚಾಲಯ ನವೀಕರಣಕ್ಕಾಗಿ ಧನಸಹಾಯವನ್ನು ನೀಡಲಾಯಿತು. ರೋಟರಿ ಅಧ್ಯಕ್ಷ ಸುಬ್ರಹ್ಮಣ್ಯ ಕಾರಂತ ಸ್ವಾಗತಿಸಿ, ಗೋಪಾಲಕೃಷ್ಣ ಪ್ರಭು ವಂದಿಸಿದರು.
ರೋಟರಿ ಕಾರ್ಯದರ್ಶಿ ಗುರುರಾಜ ಭಟ್ ಕಾರ್ಯಕ್ರಮ ಸಂಯೋಜಿಸಿದ್ದರು. ಟ್ರಸ್ಟ್ ನ ವಿಶ್ವಸ್ಥರಾದ ಗುಜ್ಜಾಡಿ ಪ್ರಭಾಕರ ನಾಯಕ್, ಪಾಂಗಾಳ ನಾಯಕ ಕುಟುಂಬಸ್ಥರು ಮುಂತಾದವರು ಉಪಸ್ಥಿತರಿದ್ದರು