ಕೋಟ: ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರಗ ಕಾಲೋನಿಯೊಂದರಲ್ಲಿ ನಡೆದ ಮೆಹೆಂದಿ ಕಾರ್ಯಕ್ರಮದಲ್ಲಿ ಡಿಜೆ ಅಳವಡಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಕೋಟ ಪೊಲೀಸರು ಸೋಮವಾರ ರಾತ್ರಿ ಲಾಟಿ ಚಾರ್ಜ್ ನಡೆಸಿದ್ದಾರೆ ಎನ್ನಲಾಗಿದೆ.
ಕೋಟತಟ್ಟು ಕೊರಗ ಕಾಲೋನಿಯ ಕೊರಗ ಸಮುದಾಯದ ರಾಜೇಶ್ ಎಂಬವರ ಮದುವೆಯ ಪ್ರಯುಕ್ತ ಸೋಮವಾರ ರಾತ್ರಿ ಮೆಹಂದಿ ಕಾರ್ಯಕ್ರಮದಲ್ಲಿ ಡಿಜೆ ಅಳವಡಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಸ್ಥಳೀಯರೋರ್ವರ ದೂರಿನ ಅನ್ವಯ ಸ್ಥಳಕ್ಕೆ ದೌಡಾಯಿಸಿ ಕೋಟ ಪೊಲೀಸ್ ಲಾಟಿ ಚಾರ್ಜ್ ನೊಂದಿಗೆ ಹಲ್ಲೆ ನಡೆಸಿದಲ್ಲದೆ ಮದುಮಗ ರಾಜೇಶ ಹಾಗೂ ಮತ್ತಿತರರನ್ನು ಠಾಣೆಗೆ ಕರೆದೊಯ್ದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ರಾತ್ರಿ ಠಾಣೆಯಲ್ಲಿ ಸ್ಥಳೀಯರೊಂದಿಗೆ ಕೊರಗ ಸಮುದಾಯ ಪ್ರತಿಭಟನೆ ನಡೆಸಿ ಆ ನಾಲ್ವರೊಂದಿಗೆ ಮನೆಗೆ ಹಿಂತಿರುಗಿದ್ದಾರೆ.
ಮೆಹಂದಿ ಕಾರ್ಯಕ್ರಮದಲ್ಲಿ ಕೊರಗ ಸಮುದಾಯದ ಮೇಲಿನ ದಾಳಿಯನ್ನು ಖಂಡಿಸಿ ಸ್ಥಳೀಯರು ಮಂಗಳವಾರ ಕೊರಗ ಕಾಲೋನಿಗೆ ಭೇಟಿ ನೀಡಿ ಸಮಸ್ಯೆ ಬಗ್ಗೆ ಅವಲೋಕಿಸಿ ಮುಂದಿನ ತೀರ್ಮಾನದ ಬಗ್ಗೆ ಚರ್ಚಿಸಲಾಗಿದ್ದು ಅದರಂತೆ ಶೀಘ್ರದಲ್ಲೇ ಈ ಪ್ರಕರಣದಲ್ಲಿ ಭಾಗಿಯಾದ ಠಾಣಾಧಿಕಾರಿ ಹಾಗೂ ಅವರ ತಂಡದ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.
ಈ ಪ್ರಕರಣದಲ್ಲಿ ವಿಳಂಬ ನೀತಿ ಅನುಸರಿಸಿದರೆ ಉಗ್ರ ಹೋರಾಟ ನಡೆಸುವುದಾಗಿ ಕೊರಗ ಸಮುದಾಯದ ಮುಖಂಡ ಗಣೇಶ್ ಕೊರಗ ಹಾಗೂ ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.
ಮಂಗಳವಾರ ಸ್ಥಳಕ್ಕೆ ಬ್ರಹ್ಮವಾರ ವೃತ್ತ ನಿರೀಕ್ಷಕ ಅನಂತಪದ್ಮನಾಭ ಅವರು ಭೇಟಿ ನೀಡಿ ಪ್ರಕರಣದ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಪೂರ್ಣ ಪ್ರಮಾಣದ ತನಿಖೆ ನಡಸಿ ನ್ಯಾಯ ದೊರಕಿಸಿ ಕೊಡಲಾಗುವುದು ಎಂದು ಪ್ರತಿಕ್ರಯಿಸಿದ್ದಾರೆ.
ದಲಿತ ಸಂಘರ್ಷದ ಮುಖಂಡ ಶಾಮ್ ಸುಂದರ್ ತೆಕ್ಕಟ್ಟೆ ಮಾತನಾಡಿ, ಕೋಟತಟ್ಟು ಕೊರಗ ಕಾಲೋನಿಯದಲ್ಲಿ ರಾಜೇಶ್ ಅವರ ಮೆಹಂದಿ ಕಾರ್ಯಕ್ರಮದಲ್ಲಿ ಡಿಜೆ ಹಾಕಿದ್ದರಿಂದ ಬಂದ್ ಮಾಡುವಂತೆ ಕೋಟ ಠಾಣಾಧಿಕಾರಿ ಹಾಗೂ ಸಿಬ್ಬಂದಿಗಳು ಹೆಂಗಸರು, ಮಕ್ಕಳು ನೋಡದೆ ಲಾಠಿ ಚಾರ್ಜ್ ಮಾಡಿ ಹಲ್ಲೆ ಮಾಡಿದ್ದಾರೆ. ಇದರಿಂದ ಹಲವರಿಗೆ ಗಾಯಗಳಾಗಿವೆ.
ಈ ಹಲ್ಲೆಯನ್ನು ದಲಿತ ಸಂಘರ್ಷ ಸಮಿತಿ ಬಲವಾಗಿ ಖಂಡಿಸುತ್ತದೆ. ಅಲ್ಲದೆ ಠಾಣಾಧಿಕಾರಿಯನ್ನು ಅಮಾನತುಗೊಳಿಸಿ ತಪ್ಪಿತಸ್ಥ ಪೊಲೀಸ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೇಳಿಕೊಂಡರು.
ಕೋಟತಟ್ಟು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊರಗ ಕಾಲನಿಯ ಕೊರಗ ಸಮುದಾಯದವರ ಮನೆಯಲ್ಲಿ ನಡೆಯುತ್ತಿರುವ ಮದರಂಗಿ ಕಾರ್ಯಕ್ರಮಕ್ಕೆ ಏಕಾಏಕಿ ಪೊಲೀಸ್ ತಂಡದೊಂದಿಗೆ ನುಗ್ಗಿ ಲಾಠಿ ಪ್ರಹಾರ ನಡೆಸಿದ ಘಟನೆಯನ್ನು ಖಂಡಿಸುತ್ತಾ ದುರ್ವರ್ತನೆ ತೋರಿದ ಠಾಣಾಧಿಕಾರಿ ಹಾಗು ಸಿಬ್ಬಂದಿಗಳ ಮೇಲೆ ಶಿಸ್ತುಕ್ರಮ ಕೈಗೊಂಡು ಕೆಲಸದಿಂದ ವಜಾಗೊಳಿಸಬೇಕು ಎಂದು ಸ್ಥಳೀಯ ಶಾಸಕರು, ಸಚಿವರು ಹಾಗು ಜಿಲ್ಲಾಧಿಕಾರಿಯವರಲ್ಲಿ ಪ್ರಕಟಣೆಯ ಮೂಲಕ ಭಾರತೀಯ ಜನತಾ ಪಾರ್ಟಿ ಹಿಂ.ವ.ಮೊರ್ಚಾ ರಾಜ್ಯ ಕಾರ್ಯದರ್ಶಿ ಐರೋಡಿ ವಿಠ್ಠಲ ಪೂಜಾರಿ ಆಗ್ರಹಿಸಿದ್ದಾರೆ.
ಲಾಠಿ ಚಾರ್ಜ್ ಮಾಡಿ, ಬೆದರಿಸಿದ ಠಾಣಾಧಿಕಾರಿ ಹಾಗೂ ಪೊಲೀಸ್ ಸಿಬ್ಬಂದಿಗಳನ್ನು ಕೂಡಲೇ ಅಮಾನತು ಮಾಡಬೇಕು ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ ಮಾಸ್ತರ್ ಆಗ್ರಹಿಸಿದ್ದಾರೆ.
ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾಧ್ಯಮದವರೊಂದಿಗೆ ಹೇಳಿಕೆ ಬಿಡುಗಡೆಗೊಳಿಸಿ ಇದೇ ಬರುವ 30ರಂದು ಸಮಸ್ಯೆಗಿಡಾದ ಕೊರಗ ಕುಟುಂಬದ ರಾಜೇಶ್ ಮನೆಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಲಿದ್ದೇನೆ ಎಂದಿದ್ದಾರೆ.