ಕೋಟ: ಮನಸ್ಸು ಕೆಟ್ಟ ಆಲೋಚನೆಗಳಿಂದ ಹೊರಬರಬೇಕಾದರೆ ಒಳ್ಳೆಯ ಚಿಂತನೆಗಳನ್ನು ತಮ್ಮ ಜೀವನದಲ್ಲಿ ನಿರಂತರವಾಗಿ ಅಳವಡಿಸಿಕೊಳ್ಳುವುದರಿಂದ ಧಾರ್ಮಿಕವಾಗಿ ಹಾಗೂ ಸಾಮಾಜಿಕವಾಗಿ ಮುಂಚೂಣಿಗೆ ನಿಲ್ಲಲು ಸಾಧ್ಯವಾಗುತ್ತದೆ ಎಂದು ಬಾಳೆಕುದ್ರು ಶ್ರೀಮಠದ ಶ್ರೀ ಶ್ರೀ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಹೇಳಿದ್ದಾರೆ.
ಬಾಳೆಕುದ್ರು ಶ್ರೀ ಮಠದಲ್ಲಿ ಅಜಪುರ ಕೊಂಕಣಿಖಾರ್ವಿ ಸಮುದಾಯದಿಂದ ಭಿಕ್ಷಾವಂದನೆ, ಗೋಗ್ರಾಸ, ಶ್ರೀ ಲಕ್ಷ್ಮೀ ನರಸಿಂಹ ದೇವರಿಗೆ ಅರ್ಚನೆ ಸಮರ್ಪಣಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ರಾಮಾಯಣದಲ್ಲಿ ಬರುವ ರಾವಣನ ಕೆಟ್ಟ ಗುಣಗಳನ್ನು ನಾಶಮಾಡಲು ಶ್ರೀರಾಮ ಅವತರಿಸಬೇಕಾಯಿತು. ಅಂತಯೇ ಕೆಟ್ಟಗುಣಗಳನ್ನು ಈ ಜಗತ್ತಿನಿಂದ ಹೋಗಲಾಡಿಸಲು ನಾನಾ ರೀತಿಯಲ್ಲಿ ಭಗವಂತ ಅವತರಿಸಿ ಸರಿಪಡಿಸಿಕೊಳ್ಳುತ್ತಾನೆ. ಇಂದಿನ ಕಾಲಘಟ್ಟದಲ್ಲಿ ಆಧ್ಯಾತ್ಮಿಕ ಚಿಂತನೆಗೆ ಬೆಳೆಸಿಕೊಂಡರೆ ಧನಾತ್ಮಕ ಶ್ರೇಯಸ್ಸು ತನ್ನಿಂತ್ತಾನೆ ಲಭ್ಯವಾಗುತ್ತದೆ.
ಶ್ರೀರಾಮ ಧರ್ಮದ ಪ್ರತೀಕ. ಅವನ ಆದರ್ಶ ಜಗತ್ತಿನಲ್ಲಿ ಪ್ರಚಲಿತವಾಗಿದೆ. ಅದೇ ರೀತಿ ನಮ್ಮ ಜೀವನದಲ್ಲೂ ಧಾರ್ಮಿಕ ಪ್ರಜ್ಞೆ, ದಾನ ಧರ್ಮ ಶ್ರೇಷ್ಠತೆಯನ್ನು ಪಡೆದುಕೊಂಡಿದೆ.
ನಮ್ಮ ನಮ್ಮ ಮನೆಯ ಮಕ್ಕಳಿಗೆ ಸಂಸ್ಕಾರದ ಬೀಜ ಬಿತ್ತಿ ಜ್ಞಾನದ ಹೊಳೆಯನ್ನು ಹರಿಸಿ, ಗುರುಹಿರಿಯರಿಗೆ ಗೌರವ ನೀಡುವ ದಾರಿ ತೋರಿಸಿದರೆ ಧರ್ಮ ಸಂರಕ್ಷಣೆ ಸಾಧ್ಯ. ಆ ಮೂಲಕ ಅಧರ್ಮದ ದಾರಿ ಬಿಟ್ಟು ಧರ್ಮದ ದಾರಿಯಲ್ಲಿ ನಡೆದರೆ ಯಾವುದೇ ದುಷ್ಟ ಶಕ್ತಿಗಳು ನಮ್ಮ ಹತ್ತಿರ ಸುಳಿದಾಡುವುದಿಲ್ಲ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಸಮಯದಾಯದ ಮುಖಂಡರುಗಳಾದ ಬ್ರಹ್ಮಾವರದ ತಾಲೂಕು ಅಜಪುರ ಕೊಂಕಣಿಖಾರ್ವಿ ಸಂಘದ ಮಾಜಿ ಅಧ್ಯಕ್ಷ ಬಿ.ಮಾಧವ ಖಾರ್ವಿ, ವಿನಾಯಕ ಕುಮಾರ್ ಖಾರ್ವಿ, ರೋಶನಿ ವಿ.ಖಾರ್ವಿ, ಬಿ.ಮಂಜುನಾಥ ಖಾರ್ವಿ, ಸತೀಶ್ ಎಮ್ ಮೇಸ್ತಾ ಇವರುಗಳಿಗೆ ಸ್ವಾಮೀಜಿಗಳು ಪ್ರಸಾದ ವಿತರಿಸಿ ಮಂತ್ರಾಕ್ಷತೆ ನೀಡಿ ಗೌರವಿಸಿದರು.