ಶಿರ್ವ: ಸಂತ ಮೇರಿ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ವತಿಯಿಂದ ಬೇಸಿಕ್ ಅಕೌಂಟಿಂಗ್ ವಿಶೇಷ ಉಪನ್ಯಾಸ ಕಾರ್ಯಕ್ರಮ ಇಂದು ನಡೆಯಿತು. ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕ ಸ್ಯಾಮ್ ಜೋಯಲ್ ಡೈಸ್ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು. ಇಂದಿನ ವಾಣಿಜ್ಯ ಕ್ಷೇತ್ರಗಳಲ್ಲಿ ಲೆಕ್ಕಪತ್ರಗಳ ನಿರ್ವಹಣೆ ಮಾಡಲು ಬೇಸಿಕ್ ಅಕೌಂಟಿಂಗ್ ಬಗ್ಗೆ ಜ್ಞಾನದ ಅರಿವು ಇರಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಹೆರಾಲ್ಡ್ ಐವನ್ ಮೋನಿಸ್ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಸ್ಪರ್ಧಾತ್ಮಕ ಯುಗದಲ್ಲಿ ವಾಣಿಜ್ಯ ಉದ್ಯೋಗ ಕ್ಷೇತ್ರದಲ್ಲಿ ಅಕೌಂಟಿಂಗ್ ತಜ್ಞರಿಗೆ ವಿಫುಲ ಅವಕಾಶಗಳಿವೆ.
ಸರಿಯಾದ ಮಾರ್ಗದರ್ಶನ ಮತ್ತು ಮಾಹಿತಿ ಪಡೆದು ಅಕೌಂಟಿಂಗ್ ವಿಷಯದಲ್ಲಿ ವಿದ್ಯಾರ್ಥಿಗಳು ಸಂಶೋಧನಾ ಮನಸ್ಥಿತಿಯನ್ನು ಬೆಳೆಸಿಕೊಂಡು ದೇಶಕ್ಕೆ ಅಮೂಲ್ಯ ಕೊಡುಗೆಗಳನ್ನು ನೀಡಬೇಕು ಎಂದರು.
ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಮಾಹಿತಿ ತಂತ್ರಜ್ಞಾನ ಕ್ಲಬ್ ನ ನಿರ್ದೇಶಕ ಲೆಫ್ಟಿನೆಂಟ್ ಕೆ. ಪ್ರವೀಣ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಆಧುನಿಕ ತಂತ್ರಜ್ಞಾನದ ಪ್ರಸ್ತುತ ಕಾಲಘಟ್ಟದಲ್ಲಿ ಕಂಪ್ಯೂಟರ್ ವಿದ್ಯಾರ್ಥಿಗಳಿಗೆ ವಿವಿಧ ಅವಕಾಶಗಳಿದ್ದು, ವಾಣಿಜ್ಯ ಕ್ಷೇತ್ರದಲ್ಲಿಯೂ ಚಾರ್ಟರ್ಡ್ ಅಕೌಂಟೆನ್ಸಿ, ಟ್ಯಾಲಿ ಮತ್ತು ಎಸ್ಎಪಿ ವಿಷಯಗಳಲ್ಲಿ ಜ್ಞಾನ ಪಡೆಯಲು ಬೇಸಿಕ್ ಅಕೌಂಟಿಂಗ್ ಸಹಾಯಕಾರಿ.
ವಿವಿಧ ಸಂಸ್ಥೆಯಲ್ಲಿ ಲಭ್ಯವಿರುವ ಅಕೌಂಟೆಂಟ್ ಹಾಗೂ ಎಸ್ಎಪಿ ಇಂಜಿನಿಯರ್ ಉದ್ಯೋಗ ಪಡೆಯಲು ಬಿಸಿಎ ವಿದ್ಯಾರ್ಥಿಗಳಿಗೆ ಅವರ ಶೈಕ್ಷಣಿಕ ವಿದ್ಯಾಭ್ಯಾಸದ ಜೊತೆಗೆ ಇದು ಅತ್ಯಗತ್ಯ ಎಂದರು.
ಉಪನ್ಯಾಸಕ ಪ್ರಕಾಶ್, ಬಿಸಿಎ ವಿಭಾಗದ ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಸುರೇಖಾ ಪ್ರಾರ್ಥಿಸಿ, ದ್ಯುತಿಶ್ರೀ ಸ್ವಾಗತಿಸಿದರು. ದೀಕ್ಷಾ ಪಿ ಜಿ ವಂದಿಸಿ, ಪ್ರೀತಿಕಾ ನಿರೂಪಿಸಿದರು.