ಬ್ರಹ್ಮಾವರ: ಬಾರ್ಕೂರು ರೈಲ್ವೆ ನಿಲ್ದಾಣದಲ್ಲಿ 15 ವರ್ಷಗಳಿಂದ ನಿಲುಗಡೆಯಾಗುತ್ತಿದ್ದ ಮುಂಬಯಿ – ಮಂಗಳೂರು ಮತ್ಸ್ಯಗಂಧ ರೈಲು ಬಾರ್ಕೂರು ನಿಲ್ದಾಣದ ನಿಲುಗಡೆಯನ್ನು ಇಲಾಖೆ ಸ್ಥಗಿತಗೊಳಿಸಿರುವ ಕುರಿತು ಮತ್ತು ಬೆಂಗಳೂರು ಕಾರವಾರ ವೆಸ್ಟೋಡಾಮ್ ಹಗಲು ರೈಲುಗಳ ನಿಲುಗಡೆ ಹಾಗೂ ಬಾರ್ಕೂರು ರೈಲು ನಿಲ್ದಾಣ ಮೇಲ್ದರ್ಜೆಗೆ ಆಗ್ರಹಿಸಿ ಬಾರ್ಕೂರು ರೈಲು ಹೋರಾಟ ಸಮಿತಿಯ ನೇತೃತ್ವದಲ್ಲಿ ಸಮಾಲೋಚನಾ ಸಭೆಯು ಬಾರ್ಕೂರು ರಾಮಮಂದಿರದಲ್ಲಿ ನಡೆಯಿತು.
ಬಾರ್ಕೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಾಂತಾರಾಮ್ ಶೆಟ್ಟಿ ಅದ್ಯಕ್ಷತೆ ವಹಿಸಿ ಮಾತನಾಡಿದರು. ಬಾರ್ಕೂರು ಇತಿಹಾಸ ಪ್ರಸಿದ್ದ ಪ್ರದೇಶವಾಗಿದ್ದು ದೇವಾಲಯಗಳ ನಗರಿಯಾಗಿದ್ದು ಪ್ರವಾಸಿಗರಿಗೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಇಲಾಖೆಯ ನಿರ್ಧಾರದಿಂದ ತೊಂದರೆಯಾಗಿದ್ದು ಈ ಕುರಿತು ನಾವು ಸಂಘಟಿತರಾಗಿ ಸಮಸ್ಯೆ ಬಗೆಹರಿಸಬೇಕಾಗಿದೆ ಎಂದರು.
ಕಾರ್ಯಕ್ರಮದ ಕುರಿತು ಪ್ರಸ್ಥಾವಿಕವಾಗಿ ಮಾತನಾಡಿದ ಪ್ರಮುಖರಾದ ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ, ಬಾರ್ಕೂರು ರೈಲು ನಿಲ್ದಾಣ ಸುತ್ತಮುತ್ತಲಿನ 15 ಕ್ಕೂ ಹೆಚ್ಚು ಗ್ರಾಮದ ಜನರಿಗೆ ಅನುಕೂಲಕರವಾಗಿದ್ದು ರೈಲ್ವೇ ಇಲಾಖೆ 15 ವರ್ಷಗಳಿಂದ ನಿಲುಗಡೆ ನೀಡುತ್ತಿದ್ದ ಮಂಗಳೂರು- ಮುಂಬಯಿ ಮತ್ಸ್ಯಗಂಧ ರೈಲು ನಿಡುಗಡೆ ನೀಡದಿರುವುದು ಯಾತ್ರಿಕರು ಕುಂದಾಪುರಕ್ಕೆ ಹೋಗುವ ಪರಿಸ್ಥಿತಿ ಎದುರಾಗಿದೆ.
ಹಾಗೆಯೇ ರೈಲು ನಿಲ್ದಾಣ ಮೇಲ್ದರ್ಜೆಗೆ ಏರಿಸಬೇಕಾಗಿದೆ. ಈ ಪ್ರಯುಕ್ತ ಎಲ್ಲಾ ಗ್ರಾಮಗಳ ವಿವಿಧ ಸಂಘಟನೆಗಳು, ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರುಗಳು, ರಿಕ್ಷಾ, ಟ್ಯಾಕ್ಸಿ ಯೂನಿಯನ್ ಗಳು ಸೇರಿ ಸ್ಥಳೀಯ ಶಾಸಕರು, ಸಂಸದರ ಮೂಲಕ ರೈಲ್ವೆ ಇಲಾಖೆಗೆ ಸಮಸ್ಯೆ ಬಗೆಹರಿಸಲು ಮನವಿ ಸಿದ್ದಪಡಿಸಿ ಕ್ರಮ ಕೈಗೊಳ್ಳುವಂತೆ ಅಗ್ರಹಿಸ್ಸಬೇಕಾಗಿದೆ.
ಇಲಾಖೆ 25 ದಿನಗಳ ಒಳಗೆ ಸೂಕ್ತ ಕ್ರಮಕೈಗೊಳ್ಳದೆ ಸಮಸ್ಯೆ ಬಗೆಹರಿಸದಿದದ್ದಲ್ಲಿ ಎಲ್ಲ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಬಾರ್ಕೂರು ರೈಲು ಹೋರಾಟ ಸಮಿತಿಯಿಂದ ಹೋರಾಟಕ್ಕೂ ಸಿದ್ದ ಎಂದರು.
ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾದ ಬೈಕಾಡಿ ಸುಪ್ರಸಾದ್ ಶೆಟ್ಟಿ ಮಾತನಾಡಿ, ಬಾರ್ಕೂರು ಐತಿಹಾಸಿಕ ಸ್ಥಳವಾಗಿದ್ದು ರೈಲ್ವೆ ಸಮಸ್ಯೆಗಳ ಕುರಿತು ಸುತ್ತಮುತ್ತಲಿನ ಗ್ರಾಮಸ್ಥರು ಸೇರಿ ಸಂಘಟಿತ ಪ್ರಯತ್ನಗಳನ್ನು ನಡೆಸಬೇಕಾಗಿದೆ. ಇಲಾಖೆ ತಕ್ಷಣ ಈ ಪರಿಸರದ ಜನರ ಹಿತದೃಷ್ಟಿಯಿಂದ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದರು.
ಹನೆಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಶೇಖರ್ ಶೆಟ್ಟಿ, ಕಾಡೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪಾಂಡುರಂಗ ಶೆಟ್ಟಿ, ಯಡ್ತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಲತಾ, ಹಂದಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಉದಯ್ ಪೂಜಾರಿ, ವಿವಿಧ ಗ್ರಾಮಗಳ ಗ್ರಾ.ಪಂ ಸದಸ್ಯರುಗಳು, 50 ಕ್ಕೂ ಹೆಚ್ಚು ಸಂಘ ಸಂಸ್ಥೆಗಳ ಅಧ್ಯಕ್ಷರು, ವಿವಿಧ ದೇವಸ್ಥಾನಗಳ ಮುಖ್ಯಸ್ಥರು, ರೋಟರಿ ಕ್ಲಬ್ ಗಳ ಅಧ್ಯಕ್ಷರುಗಳು, ರಿಕ್ಷಾ, ಟ್ಯಾಕ್ಸಿ ಯೂನಿಯನ್ ಗಳ ಪ್ರಮುಖರು ಉಪಸ್ಥಿತರಿದ್ದರು.