ಉಡುಪಿ: ರಾಜ್ಯ ವಿಧಾನ ಪರಿಷತ್ ಚುನಾವಣೆಯ ಪೂರ್ವಭಾವಿಯಾಗಿ ನವೆಂಬರ್ 19ರಂದು ಬೆಳಿಗ್ಗೆ 10.30ಕ್ಕೆ ಉಡುಪಿ ಪುರಭವನದಲ್ಲಿ ನಡೆಯಲಿರುವ ಜನಸ್ವರಾಜ್ ಸಮಾವೇಶದಲ್ಲಿ ಪ್ರತಿಯೊಂದು ಗ್ರಾಮ ಪಂಚಾಯತ್ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳ ಎಲ್ಲಾ ಬಿಜೆಪಿ ಬೆಂಬಲಿತ ಸದಸ್ಯರು ಕಡ್ಡಾಯವಾಗಿ ಭಾಗವಹಿಸುವ ಜೊತೆಗೆ ಡಿ.10ರಂದು ನಡೆಯುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಮಾತ್ರ ಪ್ರಾಶಸ್ತ್ಯದ ಮತವನ್ನು ನೀಡುವ ಮೂಲಕ ಭರ್ಜರಿ ಅಂತರದ ವಿಜಯ ದಾಖಲಿಸುವಂತೆ ಎಲ್ಲಾ ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿಗಳು ಕೈಜೋಡಿಸಬೇಕು ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್ ಕರೆ ನೀಡಿದರು.
ಅವರು ಉಡುಪಿ ಗ್ರಾಮಾಂತರ ಬಿಜೆಪಿ ಅಧ್ಯಕ್ಷೆ ವೀಣಾ ನಾಯ್ಕ್ ಅಧ್ಯಕ್ಷತೆಯಲ್ಲಿ ಬ್ರಹ್ಮಾವರದ ಉನ್ನತಿ ಸಭಾಂಗಣದಲ್ಲಿ ನಡೆದ ಜನಸ್ವರಾಜ್ ಸಮಾವೇಶದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಪ್ರಸಕ್ತ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಬಿಜೆಪಿಯ ಸಂಭಾವ್ಯ ಅಭ್ಯರ್ಥಿಯಾಗಿದ್ದು ಪಕ್ಷ ಸೂಕ್ತ ಸೂಚನೆ ನೀಡಲಿದೆ. ಪಕ್ಷನಿಷ್ಠೆ ಮತ್ತು ಬದ್ಧತೆಯಿಂದ ಎಲ್ಲಾ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿಗಳು ಜನಸ್ವರಾಜ್ ಸಮಾವೇಶದಲ್ಲಿ ಪ್ರತಿಶತ ನೂರರಷ್ಟು ಉಪಸ್ಥಿತರಿದ್ದು, ಮುಂದೆ ಪಕ್ಷದ ತೀರ್ಮಾನದಂತೆ ಪ್ರಾಶಸ್ತ್ಯದ ಮತವನ್ನು ಪಕ್ಷದ ಅಭ್ಯರ್ಥಿಗೆ ಮಾತ್ರ ನೀಡುವ ಬಗ್ಗೆ ನಿಗಾ ವಹಿಸಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮಾತನಾಡಿ, ಜನಸ್ವರಾಜ್ ಸಮಾವೇಶದಲ್ಲಿ ಪಕ್ಷದ ವಿವಿಧ ಸ್ತರದ ಪದಾಧಿಕಾರಿಗಳ ಸಹಿತ ಭಾಗವಹಿಸುವ ಗ್ರಾಮ ಪಂಚಾಯತ್ ಸದಸ್ಯರು ಮಂಡಲವಾರು ತಮ್ಮ ಗ್ರಾಮ ಪಂಚಾಯತ್ ಹೆಸರು ನೊಂದಾಯಿಸಿ ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿಯೋರ್ವ ಬಿಜೆಪಿ ಬೆಂಬಲಿತ ಸದಸ್ಯರು ಸಕ್ರಿಯವಾಗಿ ಪಾಲ್ಗೊಳ್ಳುವ ಜೊತೆಗೆ ಕಡ್ಡಾಯವಾಗಿ ಬಿಜೆಪಿ ಅಭ್ಯರ್ಥಿಗೆ ಮಾತ್ರ 1ನೇ ಪ್ರಾಶಸ್ತ್ಯದ ಮತವನ್ನು ನೀಡಿ ಪ್ರಚಂಡ ಗೆಲುವು ಸಾಧಿಸಲು ಸಹಕರಿಸಬೇಕು ಎಂದರು.
ವಿಧಾನ ಪರಿಷತ್ ಚುನಾವಣೆಯ ಸಂಭಾವ್ಯ ಅಭ್ಯರ್ಥಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಜನ ಸ್ವರಾಜ್ ಸಮಾವೇಶದಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ಬಿಜೆಪಿ ಬೆಂಬಲಿತ ಸದಸ್ಯರ ಒಗ್ಗಟ್ಟಿನ ಪ್ರದರ್ಶನವಾಗಬೇಕು. ಪಕ್ಷದ ಒಂದೇ ಒಂದು ಮತವೂ ಕೂಡ ಇತರರ ಪಾಲಾಗದಂತೆ ಬಹಳ ಎಚ್ಚರ ವಹಿಸಬೇಕು.
ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿಯಾಗಿ ಸುದೀರ್ಘ ಅವಧಿಗೆ ದೊರೆತ ಅವಕಾಶ ಹಾಗೂ ಅನುಭವ ಪಂಚಾಯತ್ ರಾಜ್ ವ್ಯವಸ್ಥೆಗಳ ಬಗ್ಗೆ ಇನ್ನಷ್ಟು ಪರಿಣಾಮಕಾರಿ ಸುಧಾರಣೆಯ ಚಿಂತನೆಗೆ ಪೂರಕವಾಗಲಿದೆ.
ಮುಜರಾಯಿ ಸಚಿವನಾಗಿ ವಿನೂತನ ಸಪ್ತಪದಿ ಸಾಮೂಹಿಕ ವಿವಾಹ ಯೋಜನೆಯ ಮೂಲಕ ಹಾಗೂ ಪ್ರಸಕ್ತ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವನಾಗಿ ಬಡವರ ಪರ ಕಲ್ಯಾಣ ಯೋಜನೆಗಳನ್ನು ರೂಪಿಸುವ ಸದವಕಾಶ ದೊರೆತಿರುವುದು ಸುಯೋಗ.
ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿ ಸದಸ್ಯರ ಪ್ರತಿಯೊಂದು ಅಮೂಲ್ಯ ಮತವೂ ದೊಡ್ಡ ಅಂತರದ ಗೆಲುವು ಸಾಧಿಸಲು ಶಕ್ತಿ ತುಂಬುವ ಜೊತೆಗೆ ಪಕ್ಷದ ವರ್ಚಸ್ಸು ವೃದ್ಧಿಸಲು ವೇದಿಕೆಯಾಗಲಿದೆ ಎಂದರು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಿ.ಎನ್. ಶಂಕರ ಪೂಜಾರಿ, ಜಿಲ್ಲಾ ಉಪಾಧ್ಯಕ್ಷರಾದ ರವಿ ಅಮೀನ್, ಸುಪ್ರಸಾದ್ ಶೆಟ್ಟಿ ಬೈಕಾಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ರಾಜ್ಯ ಎಸ್.ಟಿ. ಮೋರ್ಚಾ ಕಾರ್ಯದರ್ಶಿ ಉಮೇಶ್ ನಾಯ್ಕ್ ಚೇರ್ಕಾಡಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ನಳಿನಿ ಪ್ರದೀಪ್ ರಾವ್, ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಮಾಹಿತಿ ತಂತ್ರಜ್ಞಾನ ಸಂಚಾಲಕ ಅಕ್ಷಯ್ ಶೆಟ್ಟಿ, ರೈತ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಘವೇಂದ್ರ ಉಪ್ಪೂರು, ಪಕ್ಷದ ಪ್ರಮುಖರಾದ ಜ್ಞಾನ ವಸಂತ ಶೆಟ್ಟಿ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸಚಿನ್ ಪೂಜಾರಿ, ಗಣೇಶ್ ಕುಲಾಲ್, ಮಂಡಲ ಪದಾಧಿಕಾರಿಗಳು, ಮಂಡಲ ವ್ಯಾಪ್ತಿಯ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಮಾಜಿ ಜಿ.ಪಂ. ತಾ.ಪಂ. ಸದಸ್ಯರು, ಮಹಾ ಶಕ್ತಿ ಕೇಂದ್ರ ಮತ್ತು ಶಕ್ತಿ ಕೇಂದ್ರಗಳ ಸಂಚಾಲಕರು, ಪಕ್ಷದ ವಿವಿಧ ಸ್ತರದ ಪದಾಧಿಕಾರಿಗಳು ಉಪಸ್ಥಿತರಿದ್ದರು.